ಭಾನುವಾರ, ಆಗಸ್ಟ್ 25, 2019
21 °C

ಮೆಹಬೂಬಾ, ಒಮರ್‌ಗೆ ಜೈಲು ಊಟ

Published:
Updated:

ಶ್ರೀನಗರ: ಆಗಸ್ಟ್‌ 5ರಿಂದ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್‌ ಅಬ್ದುಲ್ಲಾ ಅವರ ವಿಚಾರದಲ್ಲಿ ಸೆರೆಮನೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಒಮರ್‌ ಮತ್ತು ಮೆಹಬೂಬಾ ಅವರಿಗೆ ಜೈಲಿನ ನಿಯಮದ ರೀತಿಯಲ್ಲಿಯೇ ಆಹಾರ ನೀಡಲಾಗುತ್ತಿದೆ. ಆದರೆ, ಇದಕ್ಕೆ ಹೊಂದಿಕೊಳ್ಳಲು ಈ ಇಬ್ಬರಿಗೂ ಬಹಳ ಕಷ್ಟವಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಮರ್‌ ಅವರಿಗೆ ಕೆಲವು ಪುಸ್ತಕಗಳು ಮತ್ತು ಕಂಪ್ಯೂಟರ್‌ ಗೇಮ್‌ಗಳನ್ನು ನೀಡಲಾಗಿದೆ. ಆದರೆ ಅವರು ಪುಸ್ತಕ ಓದುವುದಾಗಲಿ, ಗೇಮ್‌ ಆಡುವುದಾಗಲಿ ಮಾಡುತ್ತಿಲ್ಲ. ಅವರನ್ನು ಶ್ರೀನಗರದ
ಚೇಶ್‌ಮಶಾಹಿಯಲ್ಲಿರುವ ಸರ್ಕಾರಿ ಅತಿಥಿಗೃಹವೊಂದರಲ್ಲಿ ಇರಿಸಲಾಗಿದೆ. ಅದರ ಹೊರಗಿನ ಸಣ್ಣ ಹುಲ್ಲುಹಾಸಿನಲ್ಲಿ ಅವರು ಕೆಲವೊಮ್ಮೆ ಅಡ್ಡಾಡುತ್ತಿರುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ. 

ಮೆಹಬೂಬಾ ಅವರು ಬಹುತೇಕ ಸಮಯ ಸುಮ್ಮನೇ ಇರುತ್ತಾರೆ. ಯಾವ ಚಟುವಟಿಕೆಯಲ್ಲೂ ತೊಡಗಿಕೊಳ್ಳುತ್ತಿಲ್ಲ. ಈ ಇಬ್ಬರನ್ನು ಭೇಟಿ ಮಾಡಲು ಸಂಬಂಧಿಕರು ಅಥವಾ ಗೆಳೆಯರಿಗೆ ಅವಕಾಶ ಕೊಟ್ಟಿಲ್ಲ.
ಒಮರ್‌ ಅವರ ತಂಗಿ ಸಫಿಯಾ ಮತ್ತು ಮೆಹಬೂಬಾ ಅವರ ಮಗಳು ಇರ್ತಿಖಾ ಅವರು ಭೇಟಿಗೆ ಅವಕಾಶ ಕೋರಿದ್ದಾರೆ. ಈತನಕ ಅನುಮತಿ ನೀಡಲಾಗಿಲ್ಲ. 

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ನಂತರ ಈ ಇಬ್ಬರು ಪ್ರಮುಖ ನಾಯಕರು ಮತ್ತು ನೂರಾರು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ಜನರನ್ನು ಸಂಘಟಿಸುವ
ಕೆಲಸವನ್ನು ಈ ನಾಯಕರು ಮಾಡಬಹುದು ಎಂಬುದು ಸರ್ಕಾರದ ಆತಂಕ. ಈ ಕಾರಣಕ್ಕೆ ಇವರನ್ನು ಸೆರೆಯಲ್ಲಿ ಇರಿಸಲಾಗಿದೆ. 

ಫೈಸಲ್ ಜೈಲಿಗೆ ಸ್ಥಳಾಂತರ

ಗೃಹ ಬಂಧನದಲ್ಲಿದ್ದ ಮಾಜಿ ಐಎಎಸ್‌ ಅಧಿಕಾರಿ ಮತ್ತು ರಾಜಕಾರಣಿ ಶಾ ಫೈಸಲ್‌ ಅವರನ್ನು ತಾತ್ಕಾಲಿಕ ಸೆರೆಮನೆಯಾಗಿ ಪರಿವರ್ತಿಸಲಾಗಿರುವ ಸೆಂಟಾರ್‌ ಹೋಟೆಲ್‌ಗೆ ಬುಧವಾರ ರಾತ್ರಿ ಸ್ಥಳಾಂತರಿಸಲಾಗಿದೆ. 

ಇಸ್ತಾಂಬುಲ್‌ಗೆ ಹೊರಟಿದ್ದ ಫೈಸಲ್‌ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಶ್ರೀನಗರಕ್ಕೆ ಕಳುಹಿಸಲಾಗಿತ್ತು. ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇಸ್ತಾಂಬುಲ್‌ನಿಂದ ಲಂಡನ್‌ಗೆ ಹೋಗಲು ಯೋಜಿಸಿದ್ದಾಗಿ ಫೈಸಲ್‌ ಪ್ರಾಥಮಿಕ ತನಿಖೆ ವೇಳೆ ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಇಂದು ಚರ್ಚೆ

ಕಾಶ್ಮೀರ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನ ಪತ್ರ ಬರೆದಿರುವ ಬೆನ್ನಲ್ಲೇ ಈ ಬಗ್ಗೆ ಚರ್ಚೆ ನಡೆಸಲು ಭದ್ರತಾ ಮಂಡಳಿಯನ್ನು ಚೀನಾ ಆಗ್ರಹಿಸಿದೆ. 

‘ಸಭೆ ನಡೆಸುವಂತೆ ಇತ್ತೀಚೆಗೆ ಮನವಿ ಬಂದಿದೆ. ಶುಕ್ರವಾರ ಸಭೆ ನಡೆಯಲಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಕಾಶ್ಮೀರ ವಿಚಾರವಾಗಿ ನಾಲ್ಕು ದಶಕಗಳ ಬಳಿಕ ಚರ್ಚೆಗೆ ಸಮಯ ನಿಗದಿ ಆಗಿರುವುದು ರಾಜತಾಂತ್ರಿಕ ಜಯ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ಹೇಳಿದ್ದಾರೆ.  ‘370ನೇ ವಿಧಿ ರದ್ದು ಆಂತರಿಕ ವಿಚಾರ’ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.

 

Post Comments (+)