ಭಾನುವಾರ, ನವೆಂಬರ್ 17, 2019
24 °C

ಕಾಜಿರಂಗ ಕಾಡು ಕಾಯುವ ಕಾಯಕಕ್ಕೆ ಮೂರು ದಶಕ: ಸದ್ದಿಲ್ಲದ ಸಾಧನೆಗೆ ಒಲಿದ ಪ್ರಶಸ್ತಿ

Published:
Updated:

ಕಾಜಿರಂಗ ರಾಷ್ಟ್ರೀಯ ಉದ್ಯಾನ ಎಂದಾಕ್ಷಣ ಘೇಂಡಾಮೃಗಗಳು. ಬೇಟೆಗಾರರು, ಮರಗಳ್ಳರ ನಿರಂತರ ಉಪಟಳದ ನಡುವೆಯೂ ಅಸ್ಸಾಂನ ಈ ಕಾಡಿನಲ್ಲಿ ಕಾಡುಪ್ರಾಣಿಗಳು ಉಳಿಯಲು ಸಾಧ್ಯವಾಗಿರುವುದು ಅರಣ್ಯ ಇಲಾಖೆ ಸಿಬ್ಬಂದಿಯ ಅವಿರತ ಪರಿಶ್ರಮದಿಂದ.

ಈ ಪರಿಶ್ರಮದ ಪ್ರತೀಕದಂತಿರುವ ವನಪಾಲಕ ದಿಂಬೇಶ್ವರ ದಾಸ್‌ ಅವರಿಗೆ ರಾಯಲ್ ಬ್ಯಾಂಕ್ ಆಫ್‌ ಸ್ಕಾಟ್ಕೆಂಡ್‌ನ (ಆರ್‌ಬಿಎಸ್‌) ಪ್ರತಿಷ್ಠಿತ ‘ಗ್ರೀನ್‌ ವಾರಿಯರ್‌’ ಪ್ರಶಸ್ತಿ ಸಂದಿದೆ. ನವದೆಹಲಿಯಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ದಿಂಬೇಶ್ವರ ದಾಸ್ ಸ್ವೀಕರಿಸಿದರು.

‘ಇದು ನನ್ನೊಬ್ಬನ ಸಾಧನೆಯಲ್ಲ. ಕಾಜಿರಂಗದ ಎಲ್ಲ ಸಿಬ್ಬಂದಿಯೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಪ್ರಾಣಿಗಳನ್ನು ರಕ್ಷಿಸುತ್ತಾರೆ. ಒಂದು ವೇಳೆ ನಾವು ಕೆಲಸ ಮಾಡದಿದ್ದರೆ ಅಲ್ಲಿ ಘೇಂಡಾಮೃಗಗಳು ಉಳಿಯುತ್ತಿರಲಿಲ್ಲ’ ಎಂದು ಕೆಲಸದ ಬಗ್ಗೆ ಹೆಮ್ಮೆಯಿಂದ ನುಡಿಯುವ ದಿಂಬೇಶ್ವರ್ ದಾಸ್ ಅವರಿಗೆ ಈಗ 54ರ ಹರೆಯ. 

ವನ್ಯಜೀವಿಗಳ ಸಂರಕ್ಷಣೆಗಾಗಿ ಶ್ರಮಿಸಿದವರಿಗೆ ಆರ್‌ಬಿಎಸ್‌ 2011ರಿಂದ ಪ್ರತಿವರ್ಷ ಪ್ರಶಸ್ತಿ ಘೋಷಿಸಿ ಗೌರವಿಸುತ್ತಿದೆ. ಪ್ರಶಸ್ತಿ ಪತ್ರದ ಜೊತೆಗೆ ₹ 2 ಲಕ್ಷ ನಗದು ಬಹುಮಾನವನ್ನೂ ದಾಸ್ ಸ್ವೀಕರಿಸಿದ್ದಾರೆ. 

ವನಪಾಲಕರಾಗಿ ಮೂರು ದಶಕಗಳ ತುಂಬು ಅನುಭವ ಹೊಂದಿರುವ ದಿಂಬೇಶ್ವರ ದಾಸ್, ವೃತ್ತಿಯ ಬಗ್ಗೆ ಹೀಗೆ ಹೇಳುತ್ತಾರೆ...


ಕಾಜಿರಂಗ ಅರಣ್ಯದಲ್ಲಿ ಗಸ್ತು ತಿರುಗುತ್ತಿರುವ ಸಿಬ್ಬಂದಿ (ಒಳಚಿತ್ರದಲ್ಲಿ ಆರ್‌ಬಿಎಸ್ ಪ್ರಶಸ್ತಿ ಪುರಸ್ಕೃತ ದಿಂಬೇಶ್ವರ ದಾಸ್)

ಆನೆ ಮೇಲಿದ್ದರೂ ಸೇಫ್‌ ಅಲ್ಲ

ಕಾಜಿರಂಗದಲ್ಲಿ ಗಸ್ತು ತಿರಗಲು ಮಳೆಗಾಲದಲ್ಲಿ ಆನೆಗಳು ಬಳಕೆಯಾಗುತ್ತವೆ. ಎತ್ತರದ ಪ್ರಾಣಿಗಳ ಮೇಲಿದ್ದರೆ ಇತರ ಬೇಟೆ ಪ್ರಾಣಿಗಳಿಂದ ರಕ್ಷಣೆ ಸಿಗುತ್ತೆ ಎನ್ನುವ ನಂಬಿಕೆ ಇದೆ. ಆದರೆ ಇದು ಸುಳ್ಳು ಎನ್ನುವ ಅನುಭವವೊಂದನ್ನು ದಿಂಬೇಶ್ವರ ದಾಸ್ ಹಂಚಿಕೊಳ್ಳುತ್ತಾರೆ.

‘1994ರಲ್ಲಿ ನಾವು ಆನೆಯ ಮೇಲೆ ಕುಳಿತು ಗಸ್ತು ತಿರುಗುತ್ತಿದ್ದೆವು. ಇದ್ದಕ್ಕಿಂದ್ದಂತೆ ಒಂದು ಹುಲಿ ಮಾವುತನ ಮೇಲೆರಗಿತು. ಆಗ ನಾನು ನನ್ನ ಆನೆಯ ಮೇಲಿಂದ ಇಳಿದು ಬಂದೂಕಿನಿಂದ ಫೈರ್ ಮಾಡಿದೆ. ಆಗ ಹುಲಿ ಓಡಿ ಹೋಯಿತು’ ಎಂದು ಅವರು ನೆನಪಿಸಿಕೊಂಡರೆ ಮೈ ಝುಂ ಎನ್ನಿಸುತ್ತೆ.

430 ಚದರ ಕಿ.ಮೀ. ವಿಸ್ತಾರದಲ್ಲಿರುವ ಕಾಜಿರಂಗ ಅರಣ್ಯದಲ್ಲಿ ವನಪಾಲಕರದು ಸವಾಲಿನ ಕೆಲಸ. ಒಂದೆಡೆ ಬೇಟೆಗಾರರು, ಇನ್ನೊಂದೆಡೆ ವನ್ಯಮೃಗಗಳು. ದಿನದ 24 ಗಂಟೆಯೂ ಎಚ್ಚರಿಕೆಯಿಂದಿರಬೇಕು. ಪ್ರತಿ ವರ್ಷ ಮಳೆಗಾಲದಲ್ಲಿ ಬ್ರಹ್ಮಪುತ್ರ ತುಂಬಿ ಹರಿಯುತ್ತೆ. ಆಗಂತೂ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದಲೇ ಇಡಬೇಕು.

ಇದನ್ನೂ ಓದಿ: ಚಿಕ್ಕಮಗಳೂರಿನ ಡಿ.ವಿ.ಗಿರೀಶ್‌ಗೆ ಆರ್‌ಬಿಎಸ್‌ ಪುರಸ್ಕಾರ

ಕೆಲಸಕ್ಕೆ ಸೇರಿದ್ದು 1987ರಲ್ಲಿ

ದಿಂಬೇಶ್ವರ ದಾಸ್‌ ಕಾಜಿರಂಗದಲ್ಲಿ ಕೆಲಸಕ್ಕೆ ಸೇರಿದ್ದು 1987ರ ಜನವರಿಯಲ್ಲಿ. ಆಗ ನನಗೆ 23 ವರ್ಷ. 2013ರಲ್ಲಿ ಜೀವ ಬೆದರಿಕೆಗಳು ಹೆಚ್ಚಾದಾಗ ಅವರನ್ನು ಪದೇಪದೇ ಒಂದೆಡೆಯಿಂದ ಮತ್ತೊಂಡೆಗೆ ಬದಲಿಸಬೇಕಾಯಿತು. ‘ದಾಸ್ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಬೇಟೆಗಾರರನ್ನು ಹಿಡಿದಿದ್ದಾರೆ’ ಎನ್ನುತ್ತಾರೆ ಕಾಜಿರಂಗದ ಮಾಜಿ ಡಿಎಫ್ಒ ರೋಹಿಣಿ ಬಿ ಸೈಕಿಯ.

‘ಪ್ರವಾಸಿಗರ ಭೇಟಿಗೂ ಅವಕಾಶವಿಲ್ಲದ ದಟ್ಟ ಅರಣ್ಯಕ್ಕೆ ನನ್ನನ್ನು ನಿಯೋಜಿಸಲಾಗಿತ್ತು. ಅಲ್ಲಿಯೂ ಬೇಟೆಗಾರರು ಬೆದರಿಕೆಯೊಡ್ಡಿದ್ದರು. ಆಗ ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾಯವಿದೆ ಎನಿಸಿತ್ತು’ ಎಂದು ದಿಂಬೇಶ್ವರ ನೆನಪಿಸಿಕೊಂಡರು.

ಇದನ್ನೂ ಓದಿ: ಮಳವಳ್ಳಿ ಸೋಮಶೇಖರ್‌ಗೆ ಆರ್‌ಬಿಎಸ್‌ ಗೌರವ

ಕೆಲಸ ಮಾಡುವುದೇ ಸವಾಲು

ಒಂದು ಕೊಂಬಿನ ಘೇಂಡಾಮೃಗಕ್ಕೆ ಹೆಸರುವಾಸಿಯಾಗಿರುವ ಕಾಜಿರಂಗದ ಭೂಪ್ರದೇಶವೂ ವೈವಿಧ್ಯಮಯ. ಅಲ್ಲಿ ಕೆಲಸ ಮಾಡುವುದೇ ಒಂದು ಸವಾಲು. ವನ್ಯಜೀವಿಗಳ ದಟ್ಟಣೆಯೂ ಹೆಚ್ಚು, ಬೇಟೆಕಾರರ ಕಾಟವೂ ವಿಪರೀತ. ಅತ್ಯಾಧುನಿಕ ಗನ್‌ಗಳನ್ನು ಹೊಂದಿರುವ ಬೇಟೆಗಾರರಿಂದ ಅಲ್ಲಿನ ವನಪಾಲಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ದೊಡ್ಡ ಸವಾಲು ಎನ್ನುತ್ತಾರೆ ಸದ್ಯ ಗುವಾಹಟಿಯಲ್ಲಿ ಅರಣ್ಯ ಉಪಸಂರಕ್ಷಣಾಧಿಕಾರಿಯಾಗಿರುವ ಸೈಕಿಯ. 

ದಾಸ್ ತಮ್ಮ ಕತ್ಯವ್ಯಕ್ಕೆ ಬದ್ಧರಾಗಿರುವುದರಿಂದಲೇ ಅವರಿಗೆ 'ದಿ ವಾಲ್' ಎಂಬ ಹೆಸರು ಕೂಡ ಬಂದಿದೆ. 

ಕಾಜಿರಂಗದ ಸಿಬ್ಬಂದಿಯು ತಮ್ಮ ಕುಟುಂಬದವರೊಂದಿಗೆ ತಿಂಗಳುಗಟ್ಟಲೆ ಸಂಪರ್ಕವೇ ಇಲ್ಲದಂತೆ ಕ್ಯಾಂಪ್‌ಗಳಲ್ಲಿ ಇರಬೇಕಾಗುತ್ತದೆ. ಈ ಮೊದಲು ಇಲ್ಲಿ ಸಂಪರ್ಕವು ಕೂಡ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಸುಪ್ರೀಂ ಕೋರ್ಟ್ ಸಹ ತನ್ನ ತೀರ್ಪೊಂದರಲ್ಲಿ ‘ಕಾಜಿರಂಗ ಮಾದರಿ ಸಂರಕ್ಷಣೆ’ಯನ್ನು ಉಲ್ಲೇಖಿಸಿ ವನ್ಯಜೀವಿಗಳನ್ನು ರಕ್ಷಿಸಲು ಇದು ಅತ್ಯುತ್ತಮ ಮಾರ್ಗ ಎಂದು ಹೇಳಿತ್ತು ಎನ್ನುತ್ತಾರೆ ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಜಂಟಿ ನಿರ್ದೇಶಕ ಮತ್ತು ಕಾಜಿರಂಗದ ವನ್ಯಜೀವಿ ಪುನರ್ವಸತಿ ಸಂರಕ್ಷಣೆ ಕೇಂದ್ರದ ಮುಖ್ಯಸ್ಥ ರತಿನ್ ಬರ್ಮನ್.

ಘೇಂಡಾಮೃಗಗಳ ರಕ್ಷಣೆಗಾಗಿ ಕೆಲಸ ಮಾಡಲು ಜುಲೈನಲ್ಲಿ ‘ವಿಶೇಷ ಘೇಂಡಾಮೃಗ ರಕ್ಷಣಾ ಪಡೆ'ಯ (ಎಸ್‌ಆರ್‌ಪಿಎಫ್‌) ಮೊದಲ ತಂಡವನ್ನು ಕಾಜಿರಂಗದ ಹಲವು ಕಡೆಗಳಲ್ಲಿ ನಿಯೋಜಿಸಲಾಗಿತ್ತು. ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಕಾಜಿರಂಗದಲ್ಲಿ 206 ಅರಣ್ಯ ರಕ್ಷಕರಿದ್ದಾರೆ.

 

ಪ್ರತಿಕ್ರಿಯಿಸಿ (+)