ಗುರುವಾರ , ಫೆಬ್ರವರಿ 27, 2020
19 °C

ಐದು ವರ್ಷಗಳಲ್ಲಿ ₹1.3 ಕೋಟಿ ಹೆಚ್ಚಾಯ್ತು ದೆಹಲಿ ಸಿ.ಎಂ ಕೇಜ್ರಿವಾಲ್‌ ಆಸ್ತಿ

ಪಿಟಿಐ  Updated:

ಅಕ್ಷರ ಗಾತ್ರ : | |

prajavani

ನವದಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಸ್ತಿ ಮೌಲ್ಯ ಐದು ವರ್ಷದಲ್ಲಿ ₹1.3 ಕೋಟಿ ಹೆಚ್ಚಾಗಿದೆ.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ಘೋಷಿಸಿ ಪ್ರಮಾಣ ಪತ್ರ ಸಲ್ಲಿಸಿದ ಅವರು, ತಮ್ಮ ಒಟ್ಟು ಆಸ್ತಿ ಮೌಲ್ಯ ₹3.4 ಕೋಟಿ ಎಂದು ಹೇಳಿದ್ದಾರೆ. 2015ರ ಚುನಾವಣೆ ವೇಳೆ ಕೇಜ್ರಿವಾಲ್ ಅವರ ಆಸ್ತಿ ₹2.1 ಕೋಟಿ ಇತ್ತು.

ಸುನೀತಾ ಕೇಜ್ರಿವಾಲ್‌ ಅವರ ಹಣ ಹಾಗೂ ಸ್ಥಿರ ಠೇವಣಿ ಐದು ವರ್ಷಗಳಲ್ಲಿ ₹15 ಲಕ್ಷದಿಂದ ₹57 ಲಕ್ಷಕ್ಕೆ ಏರಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀತಾ ಅವರು 2016ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಆಗ ₹32 ಲಕ್ಷ ಮೌಲ್ಯದಷ್ಟು ಪಿಂಚಣಿ ಹಣ ದೊರೆತಿದೆ. ಬಾಕಿಯ ಹಣ ಉಳಿತಾಯದ್ದಾಗಿ ಎಂದು ಪಕ್ಷ ಹೇಳಿದೆ.

ಕೇಜ್ರಿವಾಲ್‌ ಅವರ ಹಣ ಮತ್ತು ಸ್ಥಿರ ಠೇವಣಿ 2015ರಲ್ಲಿ ₹2.26 ಲಕ್ಷವಿದ್ದು, ಈಗ ₹9.65 ಲಕ್ಷಕ್ಕೆ ಏರಿಕೆಯಾಗಿದೆ. ಸ್ಥಿರ ಆಸ್ತಿ ₹92 ಲಕ್ಷದಿಂದ ₹1.77 ಕೋಟಿಗೆ ಹೆಚ್ಚಾಗಿದೆ. ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ. ಇನ್ನು ಪತ್ನಿ ಸುನೀತಾ ಅವರ ಸ್ಥಿರ ಆಸ್ತಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ನಾಮಪತ್ರ ಸಲ್ಲಿಸಲು 6 ತಾಸು ಕಾದ ಕೇಜ್ರಿವಾಲ್‌

ಸತತ ಆರು ಗಂಟೆ ಕಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಯಿತು. ಸೋಮವಾರವೇ ಅವರು ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಅವರ ಚುನಾವಣಾ ರ್‍ಯಾಲಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ನಾಮಪತ್ರ ಸಲ್ಲಿಕೆಗೆ ಮಂಗಳವಾರವೇ ಕೊನೆಯ ದಿವಾಗಿತ್ತು. ಹೀಗಾಗಿ ಅರವಿಂದ್ ಕೇಜ್ರಿವಾಲ್‌ ಆರು ತಾಸು ಕಾಲ ಕಚೇರಿಯಲ್ಲಿ ಕಾದು ನಾಮಪತ್ರ ಸಲ್ಲಿಸಬೇಕಾಯಿತು.

ಚುನಾವಣಾ ಕಚೇಯಲ್ಲಿ ನಾಮಪತ್ರ ಸಲ್ಲಿಸುವಾಗಲೇ ಟ್ವೀಟ್‌ ಮಾಡಿದ್ದ ಅವರು, ‘ನನ್ನ ಟೋಕನ್‌ ಸಂಖ್ಯೆ 45 ಆಗಿದೆ. ಅನೇಕರು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಇಷ್ಟೊಂದು ಮಂದಿ ಭಾಗಿಯಾಗಿರುವುದು ಸಂತಸ ತಂದಿದೆ’ ಎಂದು ಬರೆದುಕೊಂಡಿದ್ದಾರೆ. 

ಕೇಜ್ರಿವಾಲ್‌ ಅವರು ನಾಮಪತ್ರ ಸಲ್ಲಿಕೆಗೆ ಕಾಯುವಂತೆ ಆಗಿದ್ದರ ಬಗ್ಗೆ ಎಎಪಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ನಾಮಪತ್ರ ಸಲ್ಲಿಸಲು ಸಾಧ್ಯವಾಗಬಾರದು ಎಂದು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ’ ಎಂದು ಆರೋಪಿಸಿತ್ತು.

 

ಈ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಸಿಇಒ ಕಚೇರಿ, ‘ನಾಮಪತ್ರ ಸ್ವೀಕೃತಿಗೆ ಇರುವ ನಿಯಮವನ್ನು ನಾವು ಪಾಲಿಸಿದ್ದೇವೆಯೇ ಹೊರತು ಉದ್ದೇಶಪೂರ್ವಕವಾಗಿ ವಿಳಂಬವಾಗಿಲ್ಲ. ಕೊನೆಯ ದಿನ ಆಗಿದ್ದರಿಂದ ಸಾಕಷ್ಟು ಮಂದಿ ನಾಮಪತ್ರ ಸಲ್ಲಿಕೆಗೆ ಬಂದಿದ್ದರು. ಇದರಿಂದ ತಡವಾಗಿದೆ’ ಎಂದು ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು