ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಫರ್‌ ವಲಯ ನಿಯಮ ಉಲ್ಲಂಘನೆ: ಸರ್ಕಾರದ ವಿರುದ್ಧ ಆಕ್ರೋಶ

ಎನ್‌ಜಿಟಿ ಆದೇಶ ವಜಾ ಕೋರಿರುವ ಮೇಲ್ಮನವಿ
Last Updated 8 ಜನವರಿ 2019, 18:55 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ನಗರದಾದ್ಯಂತ ಅಕ್ರಮ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡುವ ಮೂಲಕ ಮಾಸ್ಟರ್‌ ಪ್ಲಾನ್‌ ತಿರುಚಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಬಫರ್ ವಲಯದ ನಿಯಮ ರೂಪಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶ ವಜಾಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ಬೆಂಗಳೂರಿನಲ್ಲಿ ದಿನೇದಿನೇ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿತು.

‘ಹೃದಯ ಭಾಗದಲ್ಲಿರುವ ಸದಾಶಿವನಗರ ಮಾರುಕಟ್ಟೆಯೂ ಒಳಗೊಂಡಂತೆ ನಗರದಾದ್ಯಂತ ಅಕ್ರಮ ನಿರ್ಮಾಣ ಕಾಮಗಾರಿಗೆ ಪರವಾನಗಿ ನೀಡಿದ್ದನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನಗರದ ಮಾಸ್ಟರ್‌ ಪ್ಲಾನ್‌ ಬದಲಿಸಲು ಅನುಮತಿ ನೀಡಲಾಗದು’ ಎಂದು ಅಭಿಪ್ರಾಯಪಟ್ಟ ಪೀಠ, ‘ನೀವು ಮಾಸ್ಟರ್ ಪ್ಲಾನ್ ಬದಲಿಸುತ್ತಾ ಹೋಗಿ. ನಾವು ಅದನ್ನು ಸೇವೆಯ ಪ್ಲಾನ್‌ ಎಂದೇ ಕರೆಯಬೇಕಾಗುತ್ತದೆ’ ಎಂದು ಹೇಳಿತು.

‘ಅಕ್ರಮ ಕಟ್ಟಡಗಳಿಗೆ ಪರವಾನಗಿ ನೀಡದಂತೆ ಕಾನೂನು ತಡೆದರೂ ನಿಮ್ಮ ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು, ಕಿರಿಯ ಎಂಜಿನಿಯರ್‌ಗಳು ಅವಕಾಶ ನೀಡುತ್ತಿದ್ದಾರೆ. ಜನವಸತಿ ಪ್ರದೇಶಗಳಲ್ಲೂ 10 ಮಹಡಿಗಳ ಕಟ್ಟಡಗಳು ಕಾಣಸಿಗುತ್ತಿವೆ. ದೆಹಲಿ ಸೇರಿದಂತೆ ದೇಶದಾದ್ಯಂತ ಈ ವಿದ್ಯಮಾನ ಸಾಮಾನ್ಯವಾಗಿದೆ. ಇದು ಇಚ್ಛಾಶಕ್ತಿಯ ಕೊರತೆ ಮಾತ್ರವಲ್ಲದೆ ಭ್ರಷ್ಟಾಚಾರವೂ ಹೌದು’ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.

‘ಬೆಂಗಳೂರಿನ ಕೆರೆಗಳ ಬಳಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ ಖರೀದಿಸಿರುವ ಅಂದಾಜು 30,000 ಜನ ಆತಂಕ ಎದುರಿಸುತ್ತಿದ್ದು, ಎನ್‌ಜಿಟಿ ಆದೇಶಕ್ಕೆ ತಡೆ ನೀಡಬೇಕು’ ಎಂದು ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಕೋರಿದರು.

ಚಂಡೀಗಡ ನಗರದಲ್ಲಿ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಲಾಗುತ್ತಿದೆ. ಅಲ್ಲಿನ ಸ್ಥಳೀಯ ಸಂಸ್ಥೆಯು ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿಲ್ಲ ಎಂದು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌. ಶಾ ಅವರಿದ್ದ ಪೀಠ ಉದಾಹರಣೆ ನೀಡಿತು.

ನ್ಯಾಯಮಂಡಳಿಯು ಶಾಸನಬದ್ಧ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಿದೆ. ಕರ್ನಾಟಕ ನಗರ ಯೋಜನೆ ಕಾಯ್ದೆಗಳಲ್ಲಿನ ನಿಬಂಧನೆಗಳನ್ನು ಪ್ರಶ್ನಿಸದಿದ್ದರೂ ಕೆರೆಗಳ ಸುತ್ತಲಿನ 75 ಮೀಟರ್‌ ಪ್ರದೇಶವನ್ನು ಬಫರ್ ವಲಯವೆಂದು ಘೋಷಿಸಿದೆ ಎಂದು ಹೊಳ್ಳ ಅವರು ದೂರಿದರು.

ಬೆಂಗಳೂರಿನಲ್ಲಿರುವ ಶೇ 60ರಷ್ಟು ಜಲಮೂಲಗಳು ನಾಶವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಫರ್‌ ವಲಯದ ಮಿತಿ ಹೆಚ್ಚಿಸಿರುವ ಕ್ರಮವು ಎಲ್ಲರಿಗೂ ಸಂತಸ ತಂದಿದೆ ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿತು.

ಸ್ವಯಂ ಸೇವಾ ಸಂಸ್ಥೆಯಾದ ಫಾರ್ವರ್ಡ್‌ ಫೌಂಡೇಷನ್‌ನ ಮೇಲ್ಮನವಿ ಆಧರಿಸಿ 2016ರ ಮೇ 4ರಂದು ಆದೇಶ ನೀಡಿದ್ದ ಎನ್‌ಜಿಟಿಯ ಪ್ರಧಾನ ಪೀಠ, ಬೆಂಗಳೂರಿನ ಕೆರೆಗಳ ಸುತ್ತಲಿನ ಬಫರ್‌ ವಲಯಕ್ಕೆ ಸಂಬಂಧಿಸಿದಂತೆ ಮೊದಲಿದ್ದ 50 ಮೀಟರ್‌, 35 ಮೀಟರ್‌ ಹಾಗೂ ರಾಜಕಾಲುವೆಗಳ 25 ಮೀಟರ್‌ ವ್ಯಾಪ್ತಿಯನ್ನು 75 ಮೀಟರ್‌ಗೆ ವಿಸ್ತರಿಸಿತ್ತು.

ರಾಜ್ಯ ಸರ್ಕಾರದ ಜೊತೆಗೆ ಬಿಬಿಎಂಪಿ, ಮಂತ್ರಿ ಟೆಕ್‌ ಝೋನ್‌, ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಅಂಡ್‌ ಸರ್ವೀಸಸ್‌ ಸೇರಿದಂತೆ ಕೆಲ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಎನ್‌ಜಿಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT