ಶನಿವಾರ, ಡಿಸೆಂಬರ್ 7, 2019
22 °C
ರಾಜ್ಯ ಸರ್ಕಾರದ ಶಿಫಾರಸ್ಸು ಆಧರಿಸಿ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ಆಗ್ರಹ

ದೆಹಲಿ: ನಾಳೆಯಿಂದ ಲಿಂಗಾಯತ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಿಂಗಾಯತ ಧರ್ಮವನ್ನು ಪ್ರತ್ಯೇಕ ಎಂದು ಪರಿಗಣಿಸಿ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಇದೇ 10ರಿಂದ ಮೂರು ದಿನಗಳ ಕಾಲ ಲಿಂಗಾಯತ ಧರ್ಮಸಭಾ ವತಿಯಿಂದ ದೆಹಲಿಯಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆಮಹಾದೇವಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿ, ಈ ಸಮುದಾಯದವರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಷಿಸುವಂತೆ ಕಳೆದ ವರ್ಷ ರಾಜ್ಯ ಸರ್ಕಾರ ಸಲ್ಲಿಸಿರುವ ಶಿಫಾರಸ್ಸನ್ನು ಮಾನ್ಯ ಮಾಡುವಂತೆ ಕೇಂದ್ರವನ್ನು ಕೋರಲಾಗುವುದು ಎಂದರು.

ಇಲ್ಲಿನ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್‌ 10ರಂದು ಸೋಮವಾರ ಬೆಳಿಗ್ಗೆ 11ಕ್ಕೆ ಆರಂಭವಾಗಲಿರುವ ಸಮಾವೇಶವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಉದ್ಘಾಟಿಸುವರು. ಸಂಸದ ರಮೇಶ ಬಿಧೂರಿ, ರಾಷ್ಟ್ರೀಯ ಮೀಡಿಯಾ ಕೌನ್ಸಿಲ್‌ ಅಧ್ಯಕ್ಷ ಡಾ.ಅವಧೀಶ ಶರ್ಮಾ, ಮಹಾರಾಷ್ಟ್ರದ ಬಸವ ಬ್ರಿಗೇಡ್‌ ಅಧ್ಯಕ್ಷ ಅವಿನಾಶ ಬೋಶೀಕರ್‌, ಚಿತ್ರ ನಿರ್ದೇಶಕ ಯೋಗೀಶ್‌ ಮಾಸ್ಟರ್‌ ಭಾಗವಹಿಸುವರು ಎಂದು ಅವರು ಹೇಳಿದರು.

ಸಾವಿರಾರು ಜನ ಸ್ವಾಮೀಜಿಗಳ ನೇತೃತ್ವದಲ್ಲಿ ಅಂದು ಸಂಜೆ 4ಕ್ಕೆ ಧರ್ಮ ಸಂಗಮ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್‌ 11ರಂದು ಬೆಳಿಗ್ಗೆ 11ಕ್ಕೆ ಸರ್ವ ಧರ್ಮ ಸಮನ್ವಯ ಗೋಷ್ಠಿ ನಡೆಯಲಿದೆ. ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ ಎಂದು ಅವರು ತಿಳಿಸಿದರು.

ಡಿ.12ರಂದು ದೆಹಲಿಯ ಪ್ರಮುಖ ರಸ್ತೆಗಳ ಮೂಲಕ ಜಂತರ್‌– ಮಂತರ್‌ವರೆಗೆ ಹೊರಡಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ 20,000 ಜನ ಭಾಗವಹಿಸುವರು. ನಂತರ ಸಂಜೆಯವರೆಗೆ ಧರಣಿ ನಡೆಸುವ ಮೂಲಕ ಪ್ರತ್ಯೇಕ ಧರ್ಮ ಸ್ಥಾನಮಾನದ ಬೇಡಿಕೆ ಕುರಿತ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

‘ಪ್ರತ್ಯೇಕ ಧರ್ಮದ ಸ್ಥಾನಮಾನ ಕೋರಿ ನಡೆಸಿದ ಹೋರಾಟವನ್ನು ಈ ಹಿಂದೆ ವಿರೋಧಿಸಿದವರು ಈಗ ಬೆಂಬಲ ನೀಡುತ್ತಿದ್ದಾರೆ. ಮೌನವಾಗಿದ್ದ ಬಿಜೆಪಿ ಮುಖಂಡರು ನಮ್ಮ ಹೋರಾಟ ವಿರೋಧಿಸಿರಲಿಲ್ಲ. ಅವರೂ ಪರೋಕ್ಷವಾಗಿ ನಮ್ಮ ಹೋರಾಟವನ್ನು ಬೆಂಬಲಿಸಿದ್ದರು ಎಂದು ಅವರು ಹೇಳಿದರು.

‘ಧರ್ಮದ ವಿಷಯದಲ್ಲಿ ರಾಜಕಾರಣವನ್ನು ಬೆರೆಸುವುದು ನಮ್ಮ ಉದ್ದೇಶವಲ್ಲ. ನಮ್ಮನ್ನು ಬೆಂಬಲಿಸಿದ್ದ ಕಾಂಗ್ರೆಸ್‌ ಪಕ್ಷವು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಅಧಿಕ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನೇ ಗಳಿಸಿದೆ. ಸದ್ಯಕ್ಕಂತೂ ನಾವು ಯಾರನ್ನೂ ಬೆಂಬಲಿಸುವುದಿಲ್ಲ’ ಎಂದರು.

ಬಹುಮತದ ವರದಿ: ನಾಗಮೋಹನದಾಸ್

ಬಾಗಲಕೋಟೆ: ‘ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಅಧ್ಯಯನ ಪೂರ್ಣ ವರದಿ ಸಿದ್ಧಪಡಿಸಲಾಗಿದೆ. ನಾನೊಬ್ಬನೇ ಅದನ್ನು ಬರೆದಿಲ್ಲ; ಬದಲಿಗೆ, ಎಂಟು ಮಂದಿ ಸದಸ್ಯರು ಒಂದೊಂದು ಅಧ್ಯಾಯ ಬರೆದಿದ್ದಾರೆ. ಹಾಗಾಗಿ ಅದೊಂದು ಬಹುಮತದ ವರದಿ’ ಎಂದು ತಜ್ಞರ ಸಮಿತಿಯ ನೇತೃತ್ವ ವಹಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ವರದಿಯನ್ನು ರಾಜ್ಯ ಸರ್ಕಾರ ಒಪ್ಪಿದೆ. ಕೇಂದ್ರಕ್ಕೆ ಶಿಫಾರಸು ಕೂಡ ಮಾಡಿದೆ. ಅದು ಅಲ್ಲಿ ಬಾಕಿ ಉಳಿದಿದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಏನನ್ನೂ ಹೇಳುವುದಿಲ್ಲ. ಕೇಂದ್ರ ಸರ್ಕಾರವೇ ತೀರ್ಮಾನ ಮಾಡಲಿ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು