ಮಂಗಳವಾರ, ಅಕ್ಟೋಬರ್ 22, 2019
22 °C
288 ಕ್ಷೇತ್ರಗಳ ಪೈಕಿ 100ಕ್ಕೂ ಹೆಚ್ಚು ಕಡೆ ಸಂಬಂಧಿಗಳಿಗೇ ಟಿಕೆಟ್ ಕೊಡಿಸಿದ ಮುಖಂಡರು

ಮಹಾರಾಷ್ಟ್ರ ಚುನಾವಣಾ ರಾಜಕಾರಣ: ಕುಟುಂಬದವರಿಗೆ ಮಣೆ

Published:
Updated:
Prajavani

ಮುಂಬೈ: ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪಮುಖ್ಯಮಂತ್ರಿಗಳೂ ಸೇರಿದಂತೆ ಹಿರಿಯ ರಾಜಕಾರಣಿಗಳ ಅನೇಕ ಸಂಬಂಧಿಕರು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕೆಲವು ಕಡೆ ಸಂಬಂಧಿಕರೇ ಪರಸ್ಪರ ಎದುರಾಳಿಗಳೂ ಆಗಿದ್ದಾರೆ.

ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 100ಕ್ಕೂ ಹೆಚ್ಚು  ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿಗೆ ಸೇರಿದ ರಾಜಕಾರಣಿಗಳ ಸಂಬಂಧಿಕರೇ ಅಭ್ಯರ್ಥಿಗಳಾಗಿದ್ದಾರೆ. 

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕರಾಗಿದ್ದ ವಿಲಾಸ್‌ರಾವ್‌ ದೇಶ್‌ಮುಖ್ ಅವರ ಪುತ್ರ ಅಮಿತ್, ಲಾತೂರ್‌ ನಗರ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಮತ್ತೊಬ್ಬ ಪುತ್ರ ಧೀರಜ್, ಲಾತೂರ್ ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೊಬ್ಬ ಮಗ ರಿತೇಶ್ ದೇಶ್‌ಮುಖ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಸಹೋದರರ ಪರವಾಗಿ ಪ್ರಚಾರಕ್ಕೆ ಇಳಿಯುವ ಸಾಧ್ಯತೆಯಿದೆ. 

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಸುಶೀಲ್‌ಕುಮಾರ್ ಶಿಂಧೆ ಅವರ ಪುತ್ರಿ ಪ್ರಣತಿ ಅವರು ಸೊಲ್ಲಾಪುರದಿಂದ ಮರು ಆಯ್ಕೆ ಬಯಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಅವರು ಭೋಕರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನಿಲಂಗೇಕರ್ ಅವರ ಮಗ ಅಶೋಕ್ ಅವರು ನಿಲಂಗಾ ಕ್ಷೇತ್ರದಿಂದ, ಮೊಮ್ಮಗ ಸಂಭಾಜಿ ನಿಲಂಗೇಕರ್ ಪಾಟೀಲ್ ಅವರು ಲಾತೂರ್‌ನಿಂದ ಕಣಕ್ಕಿಳಿದಿದ್ದಾರೆ. 

ಎನ್‌ಸಿಪಿ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಸೋದರ ಸಂಬಂಧಿ ಅಜಿತ್ ಪವಾರ್ ಅವರು ಕುಟುಂಬದ ಪ್ರಬಲ ಕೋಟೆ ಎನಿಸಿರುವ ಬಾರಾಮತಿಯಿಂದ ಸ್ಪರ್ಧಿಸುತ್ತಿದ್ದಾರೆ. ಅಜಿತ್ ಪವಾರ್ ಅವರ ಸಂಬಂಧಿ ರೋಹಿತ್ ಅವರು ಖಾರ್ಜೆಟ್ ಜಾಮಖೇಡ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಹಾಗೂ ಎಂಎಸ್‌ಪಿ ಸಂಸ್ಥಾಪಕ ನಾರಾಯಣ ರಾಣೆ ಅವರ ಪುತ್ರ ನಿತೇಶ್ ಅವರು ಕಣಕವಲಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕಾಂಗ್ರೆಸ್‌ನ ಛಗನ್ ಭುಜ್‌ಬಳ ಅವರು ಯೇವಲದಿಂದ ಹಾಗೂ ಅವರ ಪುತ್ರ ಪಂಕಜ್, ನಂಗಾವ್‌ನಿಂದ ಕಣಕ್ಕೆ ಇಳಿದಿದ್ದಾರೆ. 

ಗೋಪಿನಾಥ್ ಮುಂಢೆ ಅವರ ಪುತ್ರಿ ಪಂಕಜಾ (ಬಿಜೆಪಿ) ಹಾಗೂ ಅವರ ಸಂಬಂಧಿ ಧನಂಜಯ್ (ಎನ್‌ಸಿಪಿ) ಪರಳಿ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿದ್ದಾರೆ. ಶಿವಸೇನಾ ಸೇರಿ ಫಡಣವೀಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಂದೀಪ್ ಕೃಷ್ಣಸಾಗರ್ (ಎನ್‌ಸಿಪಿ ನಾಯಕ ಜಯದತ್ ಕೃಷ್ಣಸಾಗರ್ ಅವರ ಸಂಬಂಧಿ) ಅವರಿಗೆ ಬೀಡ್ ಕ್ಷೇತ್ರದ ಟಿಕೆಟ್ ನೀಡಲಾಗಿದ್ದು, ಅವರು ತಮ್ಮ ಸಂಬಂಧಿ ವಿರುದ್ಧ ಸೆಣಸಲಿದ್ದಾರೆ. 

ಹಿರಿಯ ನಾಯಕ ಏಕನಾಥ ಖಡಸೆ ಅವರ ಪುತ್ರಿ ರೋಹಿಣಿ ಅವರನ್ನು ಮುಕ್ತಾಯಿನಗರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಸಂಸರಾಗಿದ್ದ ಚಿಂತಾಮನ್ ವನಗಾ ಅವರ ಪುತ್ರ ಶ್ರೀನಿವಾಸ್ ಅವರಿಗೆ ಶಿವಸೇನೆಯು ಪಾಲ್ಘರ್ ಕ್ಷೇತ್ರದ ಟಿಕೆಟ್ ನೀಡಿದೆ. ಕೇಂದ್ರದ ಮಾಜಿ ಸಚಿವ ಬಾಳಾಸಾಬೇಬ್ ವಿಖೆ ಪಾಟೀಲ್ ಅವರ ಪುತ್ರ ರಾಧಾಕೃಷ್ಣ ಅವರು ಶಿರಡಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರದಿದ್ದ ಇವರು ಬಿಜೆಪಿ ಸೇರ್ಪಡೆಯಾಗಿ ಸಚಿವರಾಗಿದ್ದರು. ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪ್ರತಾಪರಾವ್ ಭೋಸಲೆ ಅವರ ಮಗ ಮದನ್ ಅವರು ವಾಯಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಆಸ್ತಿ: ಸೊನ್ನೆಯಿಂದ ₹500 ಕೋಟಿವರೆಗೆ... 

ಮಹಾರಾಷ್ಟ್ರ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಘೋಷಣೆ ಮಾಡಿರುವ ಆಸ್ತಿ ವಿವರ ಆಸಕ್ತಿದಾಯಕವಾಗಿದೆ. ಘಾಟ್ಕೋಪರ್‌ನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪರಾಗ್ ಶಾ ಅವರು ₹500 ಕೋಟಿಗೂ ಹೆಚ್ಚು ಆಸ್ತಿ ಘೋಷಿಸಿಕೊಂಡಿದ್ದರೆ, ಚಾರ್‌ಕೋಪ್‌ನಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಜನಾರ್ದನ ಪರಾಬ್ ಅವರ ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದಿದ್ದಾರೆ.

ಶಿವಸೇನೆಯ ಆದಿತ್ಯ ಠಾಕ್ರೆ ₹16.05 ಕೋಟಿ, ಮುಖ್ಯಮಂತ್ರಿ ಫಡಣವೀಸ್ ಅವರು ₹3.78 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ.

ಐವರು ಹಿರಿಯರಿಗೆ ಬಿಜೆಪಿ ಕೊಕ್

ಪಕ್ಷದ ಐವರು ಹಿರಿಯ ನಾಯಕರಿಗೆ ಬಿಜೆಪಿ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಏಕನಾಥ ಖಡಸೆ (67), ಪ್ರಕಾಶ್ ಮೆಹ್ತಾ (60), ರಾಜ್ ಪುರೋಹಿತ್ (59), ವಿನೋದ್ ತಾವಡೆ (56), ಚಂದ್ರಶೇಖರ ಬಾವನಕುಲೆ (50) ಅವರು ಟೆಕೆಟ್ ಪಡೆಯಲು ವಿಫಲರಾಗಿದ್ದಾರೆ. 

ಟಿಕೆಟ್ ವಂಚಿತರಿಗೆ ಪಕ್ಷದಲ್ಲಿ ಹೊಸ ಜವಾಬ್ದಾರಿ ನೀಡುವ ಅಥವಾ ಪರಿಷತ್ತಿನಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಮೆಹ್ತಾ ಮತ್ತು ಪುರೋಹಿತ್ ಅವರು ಮುಂಬೈನಲ್ಲಿ ನೆಲೆಸಿರುವ ಗುಜರಾತಿ ಮತ್ತು ಮಾರ್ವಾಡಿ ಸಮುದಾಯದ ಗಣ್ಯರು. ಇವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪುರೋಹಿತ್ ಅವರು ಮೋದಿ ಹಾಗೂ ಶಾ ಅವರ ಟೀಕಾಕಾರರಾಗಿದ್ದರು. ಮೆಹ್ತಾ ಅವರು ವಸತಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು. 

ಹರಿಯಾಣ: ಕಾಂಗ್ರೆಸ್ ತೊರೆದ ತನ್ವರ್

ಹರಿಯಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಅವರು ಕಾಂಗ್ರೆಸ್‌ಗೆ ಶನಿವಾರ ರಾಜೀನಾಮೆ ನೀಡಿದ್ದಾರೆ. 

‘ಬೆವರು ಸುರಿಸಿ ಸಂಘಟಿಸಿದ್ದ ಪಕ್ಷವನ್ನು ತೊರೆಯುವಾಗ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಪಕ್ಷವನ್ನು ನಾಶಪಡಿಸುತ್ತಿರುವ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟವೇ ಹೊರತು ವೈಯಕ್ತಿಕವಾಗಿ ಅಲ್ಲ. ಆಂತರಿಕ ವಿರೋಧಳಿಂದ ಪಕ್ಷ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ’ ಎಂದು ತನ್ವರ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹರಿಯಾಣ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪಕ್ಷದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದ ತನ್ವರ್, ಬುಧವಾರ ಸೋನಿಯಾ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಘಟಕದ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದ ಬಳಿಕ ಪಕ್ಷದ ಮೇಲೆ ಇವರು ಮುನಿಸಿಕೊಂಡಿದ್ದರು.  ತನ್ವರ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಲ್ಲಗಳೆದಿದ್ದಾರೆ. 

ಠೇವಣಿಯಾಗಿ ನಾಣ್ಯಗಳನ್ನು ನೀಡಿದ ಅಭ್ಯರ್ಥಿ!

ಮಹಾರಾಷ್ಟ್ರ ಚುನಾವಣಾ ಕಣಕ್ಕೆ ಧುಮುಕಿರುವ ಅಭ್ಯರ್ಥಿಯೊಬ್ಬರು ಠೇವಣಿ ಮೊತ್ತವನ್ನು ₹ 10ರ ನಾಣ್ಯಗಳ ಮೂಲಕವೇ ಪಾವತಿಸಿ ಗಮನ ಸೆಳೆದಿದ್ದಾರೆ. ₹10ರ ನಾಣ್ಯಗಳನ್ನು ವರ್ತಕರು ಸ್ವೀರಿಸುತ್ತಿಲ್ಲ ಎಂಬ ವಿಚಾರದತ್ತ ಸರ್ಕಾರದ ಗಮನ ಸೆಳೆಯಲು ಹೀಗೆ ಮಾಡಿದ್ದಾರೆ.

ನಾಮಪತ್ರದ ಜತೆ ನೀಡಿದ್ದ ನಾಣ್ಯಗಳನ್ನು ಸ್ವೀಕರಿಸಲು ಚುನಾವಣಾಧಿಕಾರಿಗಳು ಆರಂಭದಲ್ಲಿ ಹಿಂದೇಟು ಹಾಕಿದ್ದರು ಎಂದು ಅಭ್ಯರ್ಥಿ ಸಂತೋಷ್ ಸಬ್ದ್ ಹೇಳಿದ್ದಾರೆ. ತಾವು ಮರಾಠಿ ಸಿನಿಮಾವೊಂದರಿಂದ ಪ್ರೇರಣೆ ಪಡೆದು, ಸಾರ್ವಜನಿಕ ಕಳಕಳಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)