ಭಾನುವಾರ, ಮೇ 31, 2020
27 °C
ಪೊಲೀಸ್‌ ಸಿಬ್ಬಂದಿಗೆ ಪದಕ ಪ್ರದಾನ

ಮೋದಿ ವಿರುದ್ಧ ದೀದಿ ಸಡ್ಡು; ಧರಣಿ ಸ್ಥಳದಲ್ಲೇ ಸಂಪುಟ ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೇಂದ್ರ ಸರ್ಕಾರ ಮತ್ತು ಸಿಬಿಐ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರಂಭಿಸಿರುವ ಧರಣಿ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ದೇಶದ ವಿವಿಧ ಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿ ವಿರೋಧಿ ಪಕ್ಷಗಳ ಎಲ್ಲ ನಾಯಕರು ದೀದಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಎಡಪಕ್ಷಗಳು ಬೆಂಬಲ ಕೊಟ್ಟಿಲ್ಲ. ರಾಜ್ಯದಾದ್ಯಂತ ತೃಣಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.

ಸಚಿವರು, ಶಾಸಕರು ಸಹ ಕಾರ್ಯಕರ್ತರ ಜತೆ ಪ್ರತಿಭಟನೆ, ಧರಣಿ ಮತ್ತು ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ಕೋಲ್ಕತ್ತ ಪೊಲೀಸ್‌ ಕಮಿಷನರ್‌ ಸೇರಿದಂತೆ ಅನೇಕ ಹಿರಿಯ ಪೊಲೀಸ್‌ ಅಧಿಕಾರಿಗಳು ಮುಖ್ಯಮಂತ್ರಿ ಜತೆ ಧರಣಿಯಲ್ಲಿ ಭಾಗವಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಲಾಗಿದೆ.

ಪ್ರಾಣ ಬೇಕಾದರೆ ಬಿಟ್ಟೇನು, ಶರಣಾಗಲ್ಲ: ‘ಪ್ರಾಣತ್ಯಾಗ ಮಾಡಲು ಸಿದ್ಧ, ಆದರೆ, ಕೇಂದ್ರದ ಎದುರು ಸೋತು ಶರಣಾಗುವುದಿಲ್ಲ’ ಎಂದು ಮಮತಾ ಬ್ಯಾನರ್ಜಿ ಧರಣಿ ಸ್ಥಳದಿಂದಲೇ ಗುಡುಗಿದ್ದಾರೆ.


ಕೇಂದ್ರ ಮತ್ತು ಸಿಬಿಐ ವಿರುದ್ಧ ಟಿಎಂಸಿ ಕಾರ್ಯಕರ್ತರು ಸೋಮವಾರ ಬೀದಿಗಿಳಿದರು ಪಿಟಿಐ ಚಿತ್ರ

ಮೋದಿ, ಅಮಿತ್‌ ಶಾ ಅವರು ರಾಜ್ಯದಲ್ಲಿ ದಂಗೆ ಎಬ್ಬಿಸುವ ಸಂಚು ಹೂಡಿದ್ದಾರೆ ಎಂದು ಆರೋಪಿಸಿದರು. ಸಂವಿಧಾನ ಮತ್ತು ದೇಶ ಅಪಾಯದಲ್ಲಿದ್ದು ಅವುಗಳನ್ನು ರಕ್ಷಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಚಿಟ್‌ ಫಂಡ್‌ ಹಗರಣದಲ್ಲಿ ಟಿಎಂಸಿಯ ಅನೇಕ ನಾಯಕರನ್ನು ಬಂಧಿಸಿದಾಗ ಮೌನವಾಗಿದ್ದ ಮಮತಾ ಬ್ಯಾನರ್ಜಿ ಅವರು ಪೊಲೀಸ್‌ ಅಧಿಕಾರಿ ಪರ ಏಕೆ ಧರಣಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.

'ಚಿಟ್‌ ಫಂಡ್ ಹಗರಣಗಳ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕಾಂಗ್ರೆಸ್‌ ಪಕ್ಷವೇ ಹೊರತು ಬಿಜೆಪಿ ಅಲ್ಲ' ಎಂದು ತಿರುಗೇಟು ನೀಡಿದೆ.

ಈ ನಡುವೆ ಕೋಲ್ಕತ್ತದ ಮೆಟ್ರೊ ಸಿನಿಮಾ ಎದುರು ಧರಣಿ ಕುಳಿತ ಸ್ಥಳದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಟೆಂಟ್‌ನಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ಸಭೆ ನಡೆಸಿದರು. ರಾಜ್ಯ ಬಜೆಟ್‌ ಕುರಿತು ಸಂಪುಟ ಸಹೋದ್ಯೋಗಿಗಳ ಜತೆ ಚರ್ಚೆ ನಡೆಸಿದರು.

ಇದಕ್ಕೂ ಮೊದಲು ಇದೇ ಸ್ಥಳದಲ್ಲಿ ನಡೆದ ಪೊಲೀಸರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ರಾಜ್ಯ ಪೊಲೀಸರ ಕರ್ತವ್ಯಪ್ರಜ್ಞೆಯನ್ನು ಹಾಡಿ ಹೊಗಳಿದರು. ಪದಕ ಪ್ರದಾನವನ್ನೂ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು