ಗುರುವಾರ , ಅಕ್ಟೋಬರ್ 17, 2019
27 °C

ಪ್ರಧಾನಿಗೆ ಪತ್ರ ಬರೆದವರ ವಿರುದ್ಧ ದೇಶದ್ರೋಹ ಪ್ರಕರಣ

Published:
Updated:

ಪಟ್ನಾ: ಕೇಂದ್ರ ಸರ್ಕಾರದ ಆಡಳಿತ ವೈಖರಿ ಯನ್ನು ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಚಿತ್ರ ನಿರ್ದೇಶಕರಾ‌ದ ಮಣಿರತ್ನಂ, ಶ್ಯಾಂ ಬೆನಗಲ್‌, ಅಡೂರು ಗೋಪಾಲಕೃಷ್ಣನ್‌, ನಟಿ ಅಪರ್ಣಾ ಸೇನ್‌, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ 49 ಮಂದಿಯ ವಿರುದ್ಧ ಇಲ್ಲಿನ ಮುಜಪ್ಫರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ವಕೀಲ ಸುಧೀರ್‌ ಓಝಾ ಎಂಬುವರು ಇವರ ವಿರುದ್ಧ ದೂರು ನೀಡಿದ್ದು, ‘ಬಹಿರಂಗ ಪತ್ರ ಬರೆದ ಈ ಗಣ್ಯರು ಪ್ರಧಾನಿಯ ಪ್ರಭಾವಿ ನಾಯಕತ್ವವನ್ನು ದುರ್ಬಲಗೊಳಿಸುವ ಮೂಲಕ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಈ ಗಣ್ಯರ ಮೇಲೆ ದೇಶದ್ರೋಹ, ಧಾರ್ಮಿಕ ಭಾವನೆಗಳನ್ನು ನೋಯಿಸುವುದು, ಶಾಂತಿಭಂಗ ಉಂಟುಮಾಡುವ ಸಲುವಾಗಿ ಅಪಮಾನಿಸುವುದೇ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ’ ಎಂದು ಮುಜಪ್ಫರ್‌ಪುರ ಪೊಲೀಸರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಬಹಿರಂಗ ಪತ್ರಬರೆದಿದ್ದ ಇವರು, ಗುಂಪುಹಲ್ಲೆ (ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ), ಜೈಶ್ರೀರಾಮ್‌ ಘೋಷಣೆ ಕೂಗಲು ಒತ್ತಾಯಿಸುವುದೇ ಮುಂತಾದ ಘಟನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಮುಸ್ಲಿಮರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಗುಂಪು ಹಲ್ಲೆ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು, ಸರ್ಕಾರದ ವಿರುದ್ಧದ ನಿಲುವನ್ನು ದೇಶದ್ರೋಹ ಎಂದು ಪರಿಗಣಿಸಬಾರದು. ಆಡಳಿತ ಪಕ್ಷವನ್ನು ನಿಂದಿಸಿದರೆ ದೇಶವನ್ನು ನಿಂದಿಸಿದಂತಾಗುವುದಿಲ್ಲ’ ಎಂದು ಇವರು ಪತ್ರದಲ್ಲಿ ಹೇಳಿದ್ದರು. ಗಾಯಕಿ ಶುಭಾ ಮುದ್ಗಲ್‌, ನಿರ್ದೇಶಕ ಅನುರಾಗ್‌ ಕಶ್ಯಪ್‌ ಸೇರಿದಂತೆ 49 ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದರು.

ಇದಾದ ಬಳಿಕ ವಕೀಲ ಓಝಾ ಅವರು ಇವರ ವಿರುದ್ಧ ಚೀಫ್‌ ಜುಡೀ ಷಿಯಲ್‌ ಮ್ಯಾಜಿಸ್ಟ್ರೇಟ್‌ ಸೂರ್ಯ ಕಾಂತ್‌ ತ್ರಿಪಾಠಿ ಅವರಿಗೆ ದೂರು ಸಲ್ಲಿಸಿ ದ್ದರು.

* ನಾವು ಉಲ್ಲೇಖಿಸಿದ್ದ ವಿಚಾರಗಳ ಬಗ್ಗೆ ಸರ್ಕಾರ ಗಮನ ಹರಿಸಬಹುದು ಎಂದು ಭಾವಿಸಿದ್ದೆವು. ಈಗಿನ ಬೆಳವಣಿಗೆಯು ಆತಂಕ ಮೂಡಿಸಿದೆ

ಅಡೂರು ಗೋಪಾಲಕೃಷ್ಣನ್‌, ಪತ್ರಕ್ಕೆ ಸಹಿಮಾಡಿದ್ದ ಸಿನಿಮಾ ನಿರ್ದೇಶಕ

* ಸರ್ಕಾರ ಮತ್ತು ಮೋದಿ ವಿರುದ್ಧ ಯಾರೂ ಮಾತನಾಡಬಾರದು ಎಂಬಂಥ ಸ್ಥಿತಿ ಇದೆ. ನಾವು ಸರ್ವಾ ಧಿಕಾರದತ್ತ ಸಾಗುತ್ತಿದ್ದೇವೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ

Post Comments (+)