ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠವಾಡ: ಬರದ ನಡುವೆ ಚುನಾವಣೆ ಅಬ್ಬರ

Last Updated 1 ಏಪ್ರಿಲ್ 2019, 20:45 IST
ಅಕ್ಷರ ಗಾತ್ರ

ಔರಂಗಾಬಾದ್‌/ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರದೇಶವನ್ನು ಕಂಗೆಡಿಸಿರುವ ಈ ಶತಮಾನದ ಅತಿ ತೀವ್ರ ಬರಗಾಲ ಮತ್ತು ಕೃಷಿ ಕ್ಷೇತ್ರದ ಕಡು ಸಂಕಷ್ಟ ಈ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲೆಕ್ಕಚಾರವನ್ನೇ ಬದಲಿಸಬಹುದು. ನೆಹರೂ–ಗಾಂಧಿ ಕುಟುಂಬದ ನಿಷ್ಠಾವಂತ, ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಈಗ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ. ರಾವ್‌ಸಾಹೇಬ್‌ ದನ್ವೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಈ ಇಬ್ಬರೂ ಈ ಪ್ರದೇಶದಲ್ಲಿ ಕಣದಲ್ಲಿದ್ದಾರೆ.

ಮರಾಠವಾಡದ ಇಬ್ಬರು ದೊಡ್ಡ ನಾಯಕರಾಗಿದ್ದ ವಿಲಾಸ್‌ರಾವ್‌ ದೇಶಮುಖ್‌ ಮತ್ತು ಗೋಪಿನಾಥ್‌ ಮುಂಢೆ ಅವರು ಈ ಬಾರಿ ಇಲ್ಲದಿರುವುದು ಅವರವರ ಪಕ್ಷಗಳಿಗೆ ತುಂಬಲಾಗದ ನಷ್ಟ. ಗೋಪಿನಾಥ್‌ ಅವರ ಮಗಳು ಡಾ. ಪ್ರತಿಮ್‌ ಮುಂಢೆ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬೀಡ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಶೋಕ್‌ ಪಾಟೀಲ್‌ ಅವರನ್ನು ದಾಖಲೆ ಅಂತರದಿಂದ ಮಣಿಸಿದ್ದರು. 6.96 ಲಕ್ಷ ಮತಗಳ ಅಂತರದ ಈ ಗೆಲುವು ಭಾರತದ ಚುನಾವಣಾ ರಾಜಕೀಯದ ಇತಿಹಾಸದಲ್ಲಿಯೇ ದಾಖಲೆ. ಈ ಬಾರಿ ಬೀಡ್‌ ಕ್ಷೇತ್ರದಿಂದ ಬಜರಂಗ್‌ ಸೋನಾವಾನೆ ಅವರನ್ನು ಎನ್‌ಸಿಪಿ ಕಣಕ್ಕಿಳಿಸಿದೆ.

ಗೋಪಿನಾಥ್‌ ಅವರ ಹಿರಿಯ ಮಗಳು ಪಂಕಜಾ ಮುಂಢೆ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಗೋಪಿನಾಥ್‌ ಅವರ ಸೋದರಳಿಯ ಧನಂಜಯ ಮುಂಢೆ ಅವರು ಮಹಾರಾಷ್ಟ್ರ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ. ಈ ಇಬ್ಬರ ನಡುವೆ ರಾಜಕೀಯ ಪ್ರತಿಸ್ಪರ್ಧೆ ಇದೆ. ಇವರ ನಡುವೆ ವಾಗ್ಯುದ್ಧ ಸಾಮಾನ್ಯ.

ಮರಾಠವಾಡ ಪ‍್ರದೇಶ ಕಾಂಗ್ರೆಸ್‌ಗೆ ಬಹಳ ಮುಖ್ಯ. ಇಲ್ಲಿನ ನಾಂದೇಡ್‌ ಮತ್ತು ಹಿಂಗೋಲಿಯಲ್ಲಿ ಕಾಂಗ್ರೆಸ್‌ ಸಂಸದರೇ ಇದ್ದಾರೆ. ನಾಂದೇಡ್‌ನಿಂದ ಅಶೋಕ್‌ ಚವಾಣ್‌ ಅವರನ್ನು ಕಾಂಗ್ರೆಸ್‌ ಮತ್ತೆ ಕಣಕ್ಕೆ ಇಳಿಸಿದೆ. ಆದರೆ, ಹಿಂಗೋಲಿಯಿಂದ ರಾಜೀವ್‌ ಸತಾವ್‌ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಗುಜರಾತ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸ್ಪರ್ಧಿಸದಿರುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಶಿವಸೇನಾದ ಹೇಮಂತ್‌ ಪಾಟೀಲ್‌ ವಿರುದ್ಧ ಇಲ್ಲಿ ಸುಭಾಷ್‌ ವಾಂಖೆಡೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ನಾಂದೇಡ್‌ನಲ್ಲಿ ಚವಾಣ್‌ ಅವರಿಗೆ ಬಿಜೆಪಿಯ ಪ್ರತಾಪ್‌ ಚಿಖಲಿಕರ್‌ ಪ್ರತಿಸ್ಪರ್ಧಿ.

ಇನ್ನೊಂದು ಕುತೂಹಲಕರ ಕ್ಷೇತ್ರ ಜಲ್ನಾ. ಬಿಜೆಪಿಯ ದನ್ವೆ ಮತ್ತು ಕಾಂಗ್ರೆಸ್‌ನ ವಿಲಾಸ್‌ ಔತಾಡೆ ನಡುವೆ ಇಲ್ಲಿ ಭಾರಿ ಸ್ಪರ್ಧೆ ಇದೆ. ನಾಲ್ಕು ಬಾರಿಯ ಶಾಸಕ ಮತ್ತು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿರುವ ಶಿವಸೇನಾದ ಅರ್ಜುನ್‌ ಖೋಟ್ಕರ್‌ ಅವರು ಇಲ್ಲಿಂದ ಸ್ಪರ್ಧಿಸಲು ಬಯಸಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಧ್ಯಪ್ರವೇಶಿಸಿ ಖೋಟ್ಕರ್‌ ಅವರ ಮನವೊಲಿಸಿದ್ದಾರೆ.

ಬೀಡ್‌, ಉಸ್ಮಾನಾಬಾದ್‌ ಮತ್ತು ಲಾತೂರ್‌ನಲ್ಲಿ ಬರವೇ ಮುಖ್ಯ ಸಮಸ್ಯೆ. 2018 ಮತ್ತು ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಮರಾಠವಾಡ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,300. ವಿಲಾಸ್‌ರಾವ್‌ ದೇಶಮುಖ್‌ ಅವರ ಹುಟ್ಟೂರು ಲಾತೂರ್‌ ಕೆಲ ವರ್ಷಗಳ ಹಿಂದೆ ಹನಿ ನೀರು ಇಲ್ಲದೆ ಬತ್ತಿ ಹೋಗಿತ್ತು. ಆಗ, ಜಲದೂತ್‌ ರೈಲುಗಳ ಮೂಲಕ ನೀರು ಪೂರೈಸಲಾಗಿತ್ತು.

ಉಸ್ಮಾನಾಬಾದ್‌ನಲ್ಲಿ ಸೋದರ ಸಂಬಂಧಿಗಳಾದ ರಾಣಾ ಜಗಜಿತ್‌ಸಿಂಹ ಪಾಟೀಲ್‌ (ಎನ್‌ಸಿಪಿ) ಮತ್ತು ಓಂರಾಜೇ ನಿಂಬಾಳ್ಕರ್‌ (ಸೇನಾ) ನಡುವೆ ಸ್ಪರ್ಧೆ ಇದೆ. ಎರಡೂ ಕುಟುಂಬಗಳ ನಡುವೆ ಭಾರಿ ದ್ವೇಷ ಇದೆ. ಜಗಜಿತ್‌ಸಿಂಹ ಅವರ ತಂದೆ, ಮಾಜಿ ಸಚಿವ ಡಾ. ಪದ್ಮಸಿಂಹ ಪಾಟೀಲ್‌ ಅವರನ್ನು ಓಂರಾಜೇ ಅವರ ತಂದೆ ಪವನ್‌ರಾಜೇ ನಿಂಬಾಳ್ಕರ್‌ ಅವರ ಕೊಲೆ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.

ಮತದಾನ:

ಎರಡನೇ ಹಂತ (ಏಪ್ರಿಲ್‌ 18): ಹಿಂಗೋಲಿ, ನಾಂದೇಡ್‌, ಪರ್ಭಾನಿ, ಬೀಡ್‌, ಉಸ್ಮಾನಾಬಾದ್‌, ಲಾತೂರ್‌ (ಎಸ್‌ಸಿ ಮೀಸಲು)

ಮೂರನೇ ಹಂತ (ಏಪ್ರಿಲ್‌ 23): ಜಲ್ನಾ, ಔರಂಗಾಬಾದ್‌


ಮರಾಠವಾಡ ಬಗ್ಗೆ

* ಮರಾಠವಾಡದ ಹೆಚ್ಚಿನ ಭಾಗಗಳು ಆರ್ಥಿಕವಾಗಿ ಬಹಳ ಹಿಂದುಳಿದಿವೆ

* ತೀವ್ರ ಬರಗಾಲ ಇಲ್ಲಿನ ಸಾಮಾನ್ಯ ಸ್ಥಿತಿ

* ವಿಶ್ವ ಪ್ರಸಿದ್ಧ ಅಜಂತಾ ಎಲ್ಲೋರಾ ಗುಹೆಗಳು ಈ ಪ್ರದೇಶದಲ್ಲಿಯೇ ಇವೆ

* ಈ ಪ್ರದೇಶವು ಒಂದು ಕಾಲದಲ್ಲಿ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಸೇರಿತ್ತು

* ಪ್ರಬಲ ದಲಿತ ಚಳವಳಿ ಮರಾಠವಾಡದಲ್ಲಿಯೇ ಆರಂಭವಾಗಿತ್ತು

* ಇತ್ತೀಚೆಗೆ ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಲಾಗಿದೆ

* ತಾಜ್‌ಮಹಲನ್ನೇ ಹೋಲುವ ಬೀಬಿ ಕಾ ಮಖಬರ ಔರಂಗಾಬಾದ್‌ನಲ್ಲಿ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT