ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಹಣ ಸಂಗ್ರಹಿಸಿದ್ದ ಮಸೂದ್ ಅಜರ್‌: ಬಾಯಿಬಿಟ್ಟ ಜೆಇಎಂ ಮಖ್ಯಸ್ಥ

ಭಾರತದಲ್ಲಿ ನಡೆಸಿದ ಉಗ್ರ ಚಟುವಟಿಕೆ ಬಾಯಿಬಿಟ್ಟ ಅಜರ್
Last Updated 17 ಮಾರ್ಚ್ 2019, 17:52 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವುದಕ್ಕಾಗಿ ಉಗ್ರ ಮಸೂದ್‌ ಅಜರ್‌ ವಿದೇಶಗಳಲ್ಲಿ ತಿರುಗಿ ಹಣ ಸಂಗ್ರಹಿಸಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

ಇಂಗ್ಲೆಂಡ್‌ ಪೊಲೀಸರು ನಡೆಸಿದ ವಿಚಾರಣೆ ವೇಳೆ, ಜೈಷ್‌–ಎ–ಮೊಹಮ್ಮದ್‌ ಮುಖಂಡ, ಉಗ್ರ ಅಜರ್‌ ಮಸೂದ್‌ ಈ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ.1992ರಲ್ಲಿ ಇಂಗ್ಲೆಂಡ್‌ನಲ್ಲಿ ಬಂಧನಕ್ಕೊಳಗಾಗಿದ್ದ.

ಸಂಸತ್ತಿನ ಮೇಲೆ ದಾಳಿ ಸೇರಿದಂತೆ, ಇತ್ತೀಚಿನ ಪುಲ್ವಾಮಾ ದಾಳಿಯವರೆಗೆ ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳಿಗೆ ಮಸೂದ್‌ ಅಜರ್‌ ಹೊಣೆಗಾರನಾಗಿದ್ದಾನೆ.

‘ಲಂಡನ್‌ನ ಸೌತ್‌ಹಾಲ್‌ನ ಮಸೀದಿಯಲ್ಲಿ ಗುಮಾಸ್ತನಾಗಿದ್ದ ಗುಜರಾತ್‌ ಮೂಲದ ಮುಫ್ತಿ ಇಸ್ಮಾಯಿಲ್‌ ಜೊತೆ ನಾನು ಉಳಿದುಕೊಂಡಿದ್ದೆ. ಈ ವೇಳೆ ಲಂಡನ್‌ನಲ್ಲಿನ ಅನೇಕ ಮಸೀದಿಗಳಿಗೆ ಭೇಟಿ ನೀಡಿ, ಕಾಶ್ಮೀರಿ ಉಗ್ರರಿಗಾಗಿ ಹಣಕಾಸು ನೆರವು ಕೋರಿದ್ದೆ. ₹15 ಲಕ್ಷ ಸಂಗ್ರಹವಾಗಿತ್ತು’ ಎಂದು ಅಜರ್‌ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಮೌಲಾನಾ ಇಸ್ಮಾಯಿಲ್‌ ಸೇರಿದಂತೆ ಮುಸ್ಲಿಂ ಸಮುದಾಯದ ಅನೇಕ ನಾಯಕರನ್ನು ಅಜರ್‌ ಇಂಗ್ಲೆಂಡ್‌ನಲ್ಲಿ ಭೇಟಿ ಮಾಡಿ ನೆರವು ಕೋರಿದ್ದಾನೆ. ಮೌಲಾನಾ ಇಸ್ಮಾಯಿಲ್‌ ಭಾರತದ ಮೂಲದವನಾಗಿದ್ದು, ಮಂಗೋಲಿಯಾ ಮತ್ತು ಅಲ್ಬೇನಿಯಾದಲ್ಲಿ ಮಸೀದಿಗಳು ಮತ್ತು ಮದರಸಾಗಳನ್ನು ಕಟ್ಟಿಸಿದ್ದಾನೆ.

1990ರ ದಶಕದಲ್ಲಿ ಎರಡನೇ ಬಾರಿಗೆ ಸೌದಿ ಅರೇಬಿಯಾ, ಅಬುಧಾಬಿ, ಶಾರ್ಜಾ, ಕೀನ್ಯಾ, ಜಾಂಬಿಯಾಗೆ ಭೇಟಿ ನೀಡಿದ್ದ ಅಜರ್‌, ಇದೇ ಉದ್ದೇಶಕ್ಕಾಗಿ ಹಣ ಸಂಗ್ರಹಿಸಿದ್ದ. ಅಬುಧಾಬಿಯಲ್ಲಿ ₹3ಲಕ್ಷ, ಶಾರ್ಜದಲ್ಲಿ 3 ಲಕ್ಷ ಮತ್ತು ಸೌದಿ ಅರೇಬಿಯಾದಲ್ಲಿ ₹2ಲಕ್ಷ ಸಂಗ್ರಹಿಸಿದ್ದ.

ಪೋರ್ಚುಗಲ್‌ನ ನಕಲಿ ಪಾಸ್‌ಪೋರ್ಟ್‌ ಇಟ್ಟುಕೊಂಡು 1994ರಲ್ಲಿ ನವದೆಹಲಿಗೆ ಅಜರ್‌ ಮಸೂದ್‌ ಬಂದಿದ್ದ. ‘ನೀನು ಪೋರ್ಚುಗೀಸ್‌ನಂತೆ ಕಾಣುತ್ತಿಲ್ಲ’ ಎಂದು ಪಾಸ್‌ಪೋರ್ಟ್‌ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದಾಗ, ‘ನಾನು ಗುಜರಾತಿ. ನನ್ನ ಮೂಲ ಗುಜರಾತ್‌’ ಎಂದು ಹೇಳಿಕೊಂಡಿದ್ದ.

ದೆಹಲಿ ನಂತರ, ಶ್ರೀನಗರ, ಲಖನೌನದಲ್ಲಿನ ಹಲವು ಮಸೀದಿ ಮತ್ತು ಮದರಸಾಗಳಿಗೆ ಅಜರ್‌ ಭೇಟಿ ನೀಡಿದ್ದ. ಆ ವರ್ಷದ ಫೆಬ್ರುವರಿ 10ರಂದು ಮತಿಗುಂದ್ ಪ್ರದೇಶಕ್ಕೆ ಅಫ್ಗಾನಿಸ್ತಾನಿಯೊಬ್ಬನೊಂದಿಗೆ ತೆರಳಿದ್ದ. ಇದು, ಪಾಕ್‌ ಆಕ್ರಮಿತ ಪ್ರದೇಶವಾಗಿದ್ದು, ಉಗ್ರರ ನೆಲೆಯಾಗಿದೆ.

‘ಉಗ್ರರು ನನ್ನ ನೋಡಿದ ಕೂಡಲೇ ಸಂತಸಪಟ್ಟರು. ಆ ಉಗ್ರರ ವಿಳಾಸವನ್ನು ಸಂಗ್ರಹಿಸಿಕೊಂಡು ಬಂದೆ. ಆ ಉಗ್ರರ ಅಭಿವೃದ್ಧಿ ಮತ್ತು ಅವರ ಬೆಳವಣಿಗೆ ಬಗ್ಗೆ ಪಾಕಿಸ್ತಾನದಲ್ಲಿರುವ ಅವರ ಸಂಬಂಧಿಕರಿಗೆ ಪತ್ರ ಬರೆದು ತಿಳಿಸಿದೆ’ ಎಂದು ಅಜರ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

‘ನಾನು ಆಟೊದಲ್ಲಿ ಅನಂತ್‌ನಾಗ್‌ನತ್ತ ಹೊರಟೆ. 2ರಿಂದ 3 ಕಿ.ಮೀ. ಪ್ರಯಾಣಿಸುವ ವೇಳೆಗೆ ಸೇನಾ ಸಿಬ್ಬಂದಿ ನನ್ನನ್ನು ತಡೆದರು. ನನ್ನ ಜೊತೆಗಿದ್ದ ಫಾರೂಕ್‌ ಆಟೊದಿಂದ ಇಳಿದು ಓಡಿದ. ನಾನು ಮತ್ತು ಅಫ್ಗಾನಿಸ್ತಾನಿಯೊಬ್ಬ ಬಂಧನಕ್ಕೊಳಗಾದೆವು’ಎಂದು ಅಜರ್‌ ಬಾಯಿಬಿಟ್ಟಿದ್ದಾನೆ.

ಅಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಅಜರ್‌ ಪರ ಉಗ್ರರು ವಿಮಾನ ಅಪಹರಿಸಿದ ಕಾರಣ, ಭಾರತೀಯ ಪ್ರಯಾಣಿಕರ ರಕ್ಷಣೆಗಾಗಿ, 1999ರಲ್ಲಿ ಅಜರ್‌ ಮಸೂದ್‌ನನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT