ದೇಶದ್ರೋಹ ಪ್ರಕರಣ: ವೈಕೊಗೆ ಜೈಲು ಶಿಕ್ಷೆ

ಶನಿವಾರ, ಜೂಲೈ 20, 2019
27 °C

ದೇಶದ್ರೋಹ ಪ್ರಕರಣ: ವೈಕೊಗೆ ಜೈಲು ಶಿಕ್ಷೆ

Published:
Updated:

ಚೆನ್ನೈ: 2009ರಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ದಾಖಲಾದ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಎಂಡಿಎಂಕೆ ಮುಖಂಡ ವೈಕೊ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಶ್ರೀಲಂಕಾದಲ್ಲಿ ಎಲ್‌ಟಿಟಿಇ ವಿರುದ್ಧದ ಯುದ್ಧ ನಿಲ್ಲಿಸದೇ ಇದ್ದರೆ ಭಾರತವು ಒಗ್ಗಟ್ಟಾಗಿ ಉಳಿಯುವುದಿಲ್ಲ ಎಂಬ ಹೇಳಿಕೆಯನ್ನು ವೈಕೊ ನೀಡಿದ್ದರು. ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ಜುಲೈ 18ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಈ ತೀರ್ಪು ಪ್ರಕಟವಾಗಿದೆ. ಆದರೆ ವೈಕೊ ಅವರನ್ನು  1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 ಪ್ರಕಾರ ಅನರ್ಹಗೊಳಿಸಿಲ್ಲವಾದ್ದರಿಂದ  ನಾಮಪತ್ರ ಸಲ್ಲಿಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಡಿಎಂಕೆ ವಕ್ತಾರ ಎ. ಶರವಣನ್‌ ಹೇಳಿದ್ದಾರೆ.

2009ರಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ವೈಕೊ ವಿರುದ್ಧ ಪ್ರಕರಣ ದಾಖಲಿಸಿತ್ತು. 1978ರಲ್ಲಿ ವೈಕೊ ರಾಜ್ಯಸಭೆಯನ್ನು ಪ್ರತಿನಿಧಿಸುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. 

‘ಎಲ್‌ಟಿಟಿಇಗೆ ಸಂಬಂಧಿಸಿ ಪ್ರಕರಣದಲ್ಲಿ ಶಿಕ್ಷೆ ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಆಗಿದ್ದರೂ ನಾನು ಇದೇ ಭಾವನೆಯಿಂದ ಶಿಕ್ಷೆ ಸ್ವೀಕರಿಸುತ್ತಿದ್ದೆ’ ಎಂದು ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈಕೊ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !