ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುಪಯುಕ್ತ ವಸ್ತುಗಳಿಗೆ ಜೀವ ತುಂಬುವ ವಿಶ್ವಜ್ಞ

ಯಲಬುರ್ಗಾ: ಮೋಡಿ ಮಾಡುವ ಬಣ್ಣಬಣ್ಣದ ಬಂಡಿಗಳಿಗೆ ಹೆಚ್ಚಿನ ಬೇಡಿಕೆ
Last Updated 6 ಮೇ 2018, 11:54 IST
ಅಕ್ಷರ ಗಾತ್ರ

ಹನುಮಸಾಗರ: ತೂಕದ ಬಂಡಿಗಳ ಬದಲು ಹಗುರಾದ ಸಿದ್ಧ ಬಂಡಿಗಳತ್ತ ರೈತರು ಒಂದೆಡೆ ಮೊರೆ ಹೋಗಿದ್ದರೆ, ಮತ್ತೊಂದೆಡೆ ಕಮ್ಮಾರ, ಬಡಿಗೇರ ಕುಲುಮೆಗಳಲ್ಲಿ ಬಂಡಿಗಳ ತಯಾರಿಕೆ ಕಡಿಮೆಯಾಗಿದೆ. ಆದರೆ, ಹನುಮಸಾಗರದ 14 ವಯಸ್ಸಿನ ಬಾಲಕ ವಿಶ್ವಜ್ಞ ವಿಶ್ವಕರ್ಮ ತಯಾರಿಸುವ ಬಣ್ಣದ ಬಂಡಿಗಳಿಗೆ ಮಾತ್ರ ಬೇಡಿಕೆ ಕುಸಿದಿಲ್ಲ. ಬಂಡಿಗಳ ಖರೀದಿಗೆ ಹಿರಿಯರು ಮತ್ತು ಕಿರಿಯರು ಮುಗಿಬೀಳುತ್ತಾರೆ.

‘ನಾಲ್ಕು ವರ್ಷದ ಹಿಂದೆ ಅಜ್ಜ ಶೇಷಪ್ಪ ವಿಶ್ವಕರ್ಮ ಅವರ ಮಾರ್ಗದರ್ಶನದಲ್ಲಿ ಚಕ್ಕಡಿ, ಬೊಂಬೆ, ಪ್ರಾಣಿ ತಯಾರಿಸುವ ಕಲೆಯನ್ನು ಕಲಿತುಕೊಂಡ ವಿಶ್ವಜ್ಞ ಈಗ ಅದರಲ್ಲಿ ಪರಿಣತಿ ಗಳಿಸಿದ್ದಾರೆ. 9ನೇ ತರಗತಿ ವಿದ್ಯಾರ್ಥಿಯಾದ ಅವರು ಆಟಿಕೆಗಳ ಜೊತೆ ಮಣ್ಣೆತ್ತಿನ ಹಬ್ಬದಲ್ಲಿ ಮಣ್ಣೆತ್ತುಗಳನ್ನು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ.

‘ಆಟಿಕೆವಸ್ತುಗಳ ತಯಾರಿಕೆಗೆ ಹೆಚ್ಚೇನೂ ಖರ್ಚುವೆಚ್ಚ ಮಾಡುವುದಿಲ್ಲ. ನಿರುಪಯುಕ್ತ ಕಾರ್ಡ್‌ಬೋರ್ಡ್‌ ತುಂಡುಗಳು, ಕುಲುಮೆಗಳಲ್ಲಿ ಸಿಗುವ ಕಟ್ಟಗೆ ತುಂಡುಗಳನ್ನೆ ಬಳಸಿಕೊಂಡು ಸುಂದರ ಕಲಾಕೃತಿ ರಚಿಸುತ್ತೇನೆ. ಆಗಾಗ್ಗೆ ಕಿರಿಯ ಸಹೋದರ ವಿದ್ಯಾಭೂಷಣ ಸಹಾಯ ಸಿಗುತ್ತದೆ’ ಎಂದು ವಿಶ್ವಜ್ಞ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಬೆಲೆಯಲ್ಲಿ ಸಿಗುವ ಬಣ್ಣಗಳನ್ನು ಬಳಿದರೆ ಸಾಕು, ಆಟಿಕೆ ವಸ್ತುಗಳು ಸಿದ್ಧವಾಯಿತೆಂದೇ ಅರ್ಥ. ಈಚೆಗೆ ನಡೆದ ಚಂದಾಲಿಂಗೇಶ್ವರ ಜಾತ್ರೆ ಮತ್ತು ಗ್ರಾಮದೇವತೆ ಜಾತ್ರೆಗಳಲ್ಲಿ ನಾನು ತಯಾರಿಸಿದ 95 ಬಂಡಿಗಳು ಮಾರಾಟವಾದವು. ₹ 5 ಸಾವಿರ ಸಂಪಾದಿಸಿದೆ’ ಎಂದು ತಿಳಿಸಿದರು.

‘ವಿಶ್ವಜ್ಞ ಸಾವಿರಕ್ಕೂ ಹೆಚ್ಚು ಆಟಿಕೆ ಬಂಡಿಗಳು, ಬಂಡಿಗಳನ್ನು ಎಳೆಯುವ ಎತ್ತುಗಳು ಮತ್ತು ಬೊಂಬೆಗಳು ತಯಾರಿಸಿದ್ದು, ತುಂಬಾ ಖುಷಿ ಕೊಟ್ಟಿದೆ. ಶಿಕ್ಷಣ, ಬಟ್ಟೆ ಖರೀದಿ ಮತ್ತು ಇತರೆ ಖರ್ಚುವೆಚ್ಚಕ್ಕೆ ಆತ ಹಣ ಕೇಳುವುದಿಲ್ಲ. ಆತನಿಂದ ಕುಟುಂಬಕ್ಕೂ ನೆರವು ಸಿಗುತ್ತದೆ’ ಎಂದು ವಿಶ್ವಜ್ಞ ತಾಯಿ ವಿಶಾಲಾಕ್ಷಿ ತಿಳಿಸಿದರು.

‘ಜಾತ್ರೆಗಳಲ್ಲಿ ಪ್ಲಾಸ್ಟಿಕ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಂದ ತಯಾರಾದ ಬೊಂಬೆಗಳು ಹೆಚ್ಚು ಕಾಣುತ್ತವೆ. ಆದರೆ ಅವು ಪರಿಸರಕ್ಕೆ ಮಾರಕ. ಪರಿಸರಸ್ನೇಹಿಯಾದ ಕಟ್ಟಿಗೆಯಿಂದ ತಯಾರಿಸಿರುವ ಈ ಆಟಿಕೆ ಬಂಡಿಗಳು ಜಾತ್ರೆಗಳಲ್ಲಿ ಎಲ್ಲರ ಗಮನ ಸೆಳೆಯುತ್ತವೆ’ಎಂದು ಸ್ಥಳೀಯರಾದ ವಿಶ್ವನಾಥ ನಿಡಗುಂದಿಮಠ ತಿಳಿಸಿದರು.

**
ವಿಶ್ವಜ್ಞ ಬೊಂಬೆ ತಯಾರಿಸಿ ಹಣ ಸಂಪಾದಿಸುತ್ತಾನೆ ಎಂಬುವುದಕ್ಕಿಂತ ಈ ವಯಸ್ಸಿನಲ್ಲಿ ಅವನಲ್ಲಿ ಎಂತಹ ಕೌಶಲ ಅಡಗಿದೆ ಎಂಬುದು ಆಶ್ಚರ್ಯ ತರುತ್ತದೆ
–  ವಿಶ್ವನಾಥ ನಿಡಗುಂದಿಮಠ, ಸ್ಥಳೀಯ ನಿವಾಸಿ

ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT