ಗುರುವಾರ , ಆಗಸ್ಟ್ 13, 2020
21 °C

ಮೊದಲ ಪ್ರಯೋಗದಲ್ಲಿ ವಿಫಲವಾಗಿತ್ತೇ ಮಿಷನ್‌ ಶಕ್ತಿ?

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭೂಮಿಗೆ ಸನಿಹದ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಸಲುವಾಗಿ ಭಾರತ 'ಮಿಷನ್ ಶಕ್ತಿ' ಹೆಸರಲ್ಲಿ ನಡೆಸಿದ್ದ ಎ–ಸ್ಯಾಟ್ ಕ್ಷಿಪಣಿಯ ಪ್ರಯೋಗ ಮಾರ್ಚ್‌ 27ರಂದು ಯಶಸ್ವಿಯಾಗಿತ್ತಾದರೂ, ಅದಕ್ಕೂ ಹಿಂದೆ ಫೆಬ್ರುವರಿಯಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ವಿಫಲವಾಗಿತ್ತು ಎಂದು ಅಮೆರಿಕದ ವಿಜ್ಞಾನಿಗಳ ಸಂಘ ‘ಫೆಡರೇಷನ್‌ ಆಫ್‌ ಅಮೆರಿಕನ್‌ ಸೈಂಟಿಸ್ಟ್‌’ನ ಪ್ರಮುಖ ವಿಜ್ಞಾನಿಗಳು ಹೇಳಿದ್ದಾಗಿ 'ದಿ ಡಿಪ್ಲೊಮ್ಯಾಟ್‌' ಎಂಬ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ವೆಬ್‌ಸೈಟ್‌ ವರದಿ ಮಾಡಿದೆ. 

ಮಿಷನ್‌ ಶಕ್ತಿಯ ಆಂಭಿಕ ವೈಫಲ್ಯದ ಕುರಿತು ಅಮೆರಿಕ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಅಂಕಿತ್‌ ಪಾಂಡಾ ಎಂಬುವವರು ’ದಿ ಡಿಪ್ಲೊಮ್ಯಾಟ್‌’ ವರದಿ ಮಾಡಿದ್ದಾರೆ. ಭಾರತ 2019ರ ಫೆಬ್ರವರಿ 12ರಂದು ಮೊದಲ ಬಾರಿಗೆ ಎ–ಸ್ಯಾಟ್‌ ಕ್ಷಿಪಣಿಯ ಪ್ರಯೋಗ ನಡೆಸಿತ್ತು. ಆದರೆ, 30 ಸೆಕೆಂಡ್‌ಗಳ ಕಾಲ ನಭದಲ್ಲಿ ಹಾರಿದ ಎ–ಸ್ಯಾಟ್‌ ನಂತರ ನಿರೀಕ್ಷಿತ ಗುರಿ ತಲುಪದೇ ವಿಫಲಗೊಂಡಿತ್ತು ಎನ್ನಲಾಗಿದೆ. 

ಆದರೆ, 27ರಂದು ನಡೆದ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಧಿಸಿತ್ತು. ನಂತರ ದೇಶವನ್ನು ಉದ್ದೇಶಿ ಮಾತನಾಡಿದ್ದ ಮೋದಿ, ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ (ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಿತು. ಮಿಷನ್ ಶಕ್ತಿ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ’ ಎಂದು ಹೇಳಿದ್ದರು.  ಆದರೆ, ಇದಕ್ಕೂ ಮೊದಲು ನಡೆದ ಭಾರತದ ಪ್ರಯೋಗ ವಿಫಲವಾಗಿರುವ ಕುರಿತು ಅಮೆರಿಕದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ ಎಂದು ದಿ ಡಿಪ್ಲೊಮ್ಯಾಟ್ ವರದಿ ಮಾಡಿದೆ. 

ಉಪಗ್ರಹ ನಿಗ್ರಹ ಅತ್ಯಂತ ಸಂಕೀರ್ಣ ಕಾರ್ಯಚರಣೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ಭಾರತ ನಿರ್ವಿವಾದವಾಗಿ ಮಾರ್ಚ್‌ 27ರ ತನ್ನ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಆದರೆ, ಮೊದಲ ಪ್ರಯತ್ನದಲ್ಲೇ ಎಲ್ಲ ಉದ್ದೇಶಗಳೂ ಸಾಕಾರವಾಗಿವೆ ಎಂಬ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್‌ಡಿಒ ಹೇಳಿಕೆಯ ಬಗ್ಗೆ ಅಮೆರಿಕದ ಹಲವು ವಿಜ್ಞಾನಿಗಳು ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಫೆಬ್ರುವರಿ ಆರಂಭದಲ್ಲಿ ಭಾರತ ಒಂದು ಕ್ಷಿಪಣಿಯ ಪ್ರಯೋಗ ನಡೆಸುವ ಬಗ್ಗೆ ಅಮೆರಿಕಕ್ಕೆ ಮಾಹಿತಿ ಲಭ್ಯವಾಗಿತ್ತು. ಆದರೆ, ಇದು ಉಪಗ್ರಹ ನಿಗ್ರಹ ಕ್ಷಿಪಣಿಯೇ ಅಥವಾ ಬೇರೆ ಮಾದರಿಯ ಕ್ಷಿಪಣಿಯೇ ಎಂಬುದರ ಬಗ್ಗೆ ಸ್ಪಷ್ಟವಾಗಿರಲಿಲ್ಲ. ಭಾರತದ ಆ ಪ್ರಯೋಗ ವಿಫಲವಾಗಿತ್ತು ಎಂದು ಅಮೆರಿಕ ಸರ್ಕಾರದ, ಮಿಲಿಟರಿ ಗುಪ್ತಚರ ಜ್ಞಾನವುಳ್ಳ ಮೂಲವೊಂದು ತಿಳಿಸಿರುವುದಾಗಿ ದಿ ಡಿಪ್ಲೊಮ್ಯಾಟ್‌ ವರದಿ ಮಾಡಿದೆ.

ಅಷ್ಟೇ ಅಲ್ಲ, ಫೆ. 12ರಂದು ಕ್ಷಿಪಣಿಯೊಂದರ ಪ್ರಯೋಗ ನಡೆಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಬಂಗಾಳಕೊಲ್ಲಿಯ ಸಮೀಪ ಸ್ಪೋಟ ವಲಯವನ್ನು ಗುರುತು ಮಾಡಿ ಮುನ್ನೆಚ್ಚರಿಕೆ ನೀಡಿತ್ತು. ಭಾರತ ಕ್ಷಿಪಣಿಯೊಂದನ್ನು ಪ್ರಯೋಗಿಸುವ ಯೋಜನೆಯಲ್ಲಿದೆ ಎಂದು ಮುನ್ನೆಚ್ಚರಿಕಾ ಸಂದೇಶದಲ್ಲಿ ತಿಳಿಸಲಾಗಿತ್ತು. ಅದಾದ ನಂತರ ಮಾರ್ಚ್‌ 27ರಂದೂ ಇದೇ ವಲಯದಲ್ಲೇ, ಹಿಂದಿನ ಮಾದರಿಯಲ್ಲೇ ಕ್ಷಿಪಣಿಯೊಂದು ಪರೀಕ್ಷೆಗೆ ಒಳಪಡುತ್ತಿದೆ ಎಂದು ಮುನ್ಸೂಚನೆಯನ್ನು ನೀಡಲಾಗಿತ್ತು ಎನ್ನಲಾಗಿದೆ. 

ಇನ್ನು ಫೆ.12ರಂದು ನಡೆದಿದ್ದ ಕ್ಷಿಪಣಿ ಪರೀಕ್ಷೆಯ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ವೈರಿ ರಾಷ್ಟ್ರಗಳ ಆಯುಧಗಳನ್ನು ಧ್ವಂಸ ಮಾಡುವ ವೇಗದ ಕ್ಷಿಪಣಿಯನ್ನು ಡಿಆರ್‌ಡಿಒ ಪರೀಕ್ಷೆ ನಡೆಸಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿತ್ತು. ಆದರೆ, ಅದರ ಬಗ್ಗೆಯೂ ಹಲವು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. 

ಆದರೆ, ಈ ಬಗ್ಗೆ ಡಿಆರ್‌ಡಿಒದಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. 

ಇನ್ನಷ್ಟು:

ಉಪಗ್ರಹ ನಾಶದ ‘ಶಕ್ತಿ’ ಕರಗತ

 ‘ಎ–ಸ್ಯಾಟ್‌ ಬೇಹುಗಾರಿಕೆ ನಡೆಸಿಲ್ಲ’

 ‘ಎ–ಸ್ಯಾಟ್‌’: ಗಗನಯಾತ್ರಿಗಳಿಗೆ ಅಪಾಯ: ಅಮೆರಿಕ

ಮಿಷನ್‌ ಶಕ್ತಿ ಪ್ರಯೋಗ: ‘ತ್ಯಾಜ್ಯದ ಸಮಸ್ಯೆ ಉಂಟಾಗದು’–ಭಾರತ ಸ್ಪಷ್ಟನೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು