10 ಜನರನ್ನು ರಕ್ಷಿಸಿದ ಆನ್‌ಲೈನ್‌ ಫುಡ್‌ ಡೆಲಿವರಿ ಉದ್ಯೋಗಿ

7
ಹೊಗೆ ನುಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ

10 ಜನರನ್ನು ರಕ್ಷಿಸಿದ ಆನ್‌ಲೈನ್‌ ಫುಡ್‌ ಡೆಲಿವರಿ ಉದ್ಯೋಗಿ

Published:
Updated:
Deccan Herald

ಮುಂಬೈ: ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಜನರನ್ನು ರಕ್ಷಿಸಿರುವ ಸಿಧು ಹಮಾನಬಡೆ ಎಂಬುವವರು ಆನ್‌ಲೈನ್‌ ಆಹಾರ ಸರಬರಾಜು ಕಂಪನಿ ‘ಸ್ವಿಗ್ಗಿ’ಯಲ್ಲಿ ಫುಡ್‌ ಡೆಲಿವರಿ ಮಾಡುವ ಕೆಲಸ ಮಾಡುತ್ತಾರೆ.

ಬೆಂಕಿ ಕಾಣಿಸಿಕೊಂಡಿದ್ದ ವೇಳೆಯಲ್ಲಿಯೇ ಸಿಧು ಅವರು ಆಸ್ಪತ್ರೆಯ ಸಮೀಪ ಹೋಗುತ್ತಿದ್ದರು. ತನ್ನ ಬೈಕ್‌ ಅನ್ನು ನಿಲ್ಲಿಸಿದ ಅವರು ರಕ್ಷಣಾ ಕಾರ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಜತೆ ಕೈಜೋಡಿಸಲು ಮನವಿ ಮಾಡಿದರು. ಅವರ ಒಪ್ಪಿಗೆ ಪಡೆದು ಬೆಂಕಿ ಕಾಣಿಸಿಕೊಂಡಿದ್ದ ನಾಲ್ಕನೇ ಮಹಡಿಗೆ ಅಗ್ನಿಶಾಮಕ ಸಿಬ್ಬಂದಿಯ ಏಣಿ ಸಹಾಯದಿಂದ  ಏರಿದ್ದರು. ಅಲ್ಲಿ ಸಿಲುಕಿಕೊಂಡಿದ್ದ ರೋಗಿಗಳು ಮತ್ತು ಆಸ್ಪತ್ರೆಗೆ ಬಂದಿದ್ದವರನ್ನು ಅವರು ರಕ್ಷಿಸಿದರು.

ಭಾರಿ ಪ್ರಮಾಣದಲ್ಲಿ ಮಹಡಿಯಿಂದ ಹೊಗೆ ಬರುತ್ತಿದ್ದರೂ ಹೆದರದೆ ಸಿಧು ಅವರು 10 ಜನರನ್ನು ಎರಡು ಗಂಟೆಯಲ್ಲಿ ರಕ್ಷಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ಕಾರ್ಯದ ವೇಳೆ ಹೊಗೆ ನುಂಗಿರುವ ಅವರು ಸದ್ಯ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜನ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಇದನ್ನು ಕೇಳಿ ನಾನು ನಿಲ್ಲಲು ಸಾಧ್ಯವಾಗಲೇ ಇಲ್ಲ. ಅಗ್ನಿಶಾಮಕ ಸಿಬ್ಬಂದಿ ಜತೆ ಸೇರಿ ರಕ್ಷಣಾ ಕಾರ್ಯಕ್ಕೆ ಧುಮುಕಿದೆ. ಸಿಬ್ಬಂದಿಯ ಏಣಿ ಬಳಸಿ ನಾಲ್ಕನೇ ಮಹಡಿ ತಲುಪಿದೆ. ಅಲ್ಲಿ ಕೊಡಲಿಯಿಂದ ಗಾಜು ಒಡೆದು ಒಳನುಗ್ಗಿದೆ’ ಎಂದು ಸಿಧು ತಿಳಿಸಿದ್ದಾರೆ.

‘ಕಿಟಕಿಯ ಬದಿಗೆ ಬರುವಂತೆ ರೋಗಿಗಳಿಗೆ ನಾನು ತಿಳಿಸಿದೆ. ಅವರನ್ನು ಒಬ್ಬೊಬ್ಬರನ್ನಾಗಿ ಕೆಳಗೆ ಕರೆತಂದೆ. ಒಬ್ಬರು ರೋಗಿ ನನ್ನ ಕೈಯಿಂದ ಜಾರಿದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಲಿಲ್ಲ’ ಎಂದು ತಮ್ಮ ಕಾರ್ಯಾಚರಣೆಯ ಬಗ್ಗೆ ತಿಳಿಸಿದ್ದಾರೆ.

ಐರೋಲಿಯವರಾದ ಸಿಧು ಸದ್ಯ ಅಂಧೇರಿಯಲ್ಲಿ ವಾಸಿಸುತ್ತಿದ್ದಾರೆ. ಇದೇ ಪ್ರದೇಶದಲ್ಲೇ ಆಸ್ಪತ್ರೆ ಇದೆ. ಕೆಲ ದಿನಗಳ ಹಿಂದೆ ತನ್ನ ಚಿಕ್ಕಪ್ಪ ಅವರ ಜತೆ ಸ್ವಿಗ್ಗಿ ಕಂಪನೆಯಲ್ಲಿ ಕೆಲಸಕ್ಕೆ ಸೇರಿದ್ದರು.

ಬರಹ ಇಷ್ಟವಾಯಿತೆ?

 • 24

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !