ಶುಕ್ರವಾರ, ನವೆಂಬರ್ 15, 2019
21 °C

ಒಬಿಸಿ ಸಂಸದರ ಜತೆ ಮೋದಿ ಮಾತುಕತೆ

Published:
Updated:
Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಬಿಜೆಪಿಯ 40ಕ್ಕೂ ಹೆಚ್ಚು ಸಂಸದರನ್ನು ತಮ್ಮ ನಿವಾಸದಲ್ಲಿ ಬುಧವಾರ ಭೇಟಿಯಾದರು. 

ವಿವಿಧ ಜಾತಿಗಳಿಗೆ ಸೇರಿದ ಸಂಸದರನ್ನು ಪ್ರಧಾನಿ ಭೇಟಿಯಾಗುವ ಸರಣಿ ಸಭೆಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ಇದು ಮೊದಲನೆಯ ಸಭೆ. ಪರಿಶಿಷ್ಟ ಜಾತಿಗೆ ಸೇರಿದ ಸಂಸದರನ್ನು ಮೋದಿ ಅವರು ಗುರುವಾರ ಭೇಟಿಯಾಗಲಿದ್ದಾರೆ. 

ಬುಧವಾರದ ಸಭೆಗೆ ನಿರ್ದಿಷ್ಟ ಕಾರ್ಯಸೂಚಿ ಇರಲಿಲ್ಲ. ಪ್ರಧಾನಿ ಜತೆಗೆ ಸಂಸದರು ಅನೌಪಚಾರಿಕ ಮಾತುಕತೆ ನಡೆಸಿದರು ಎಂದು ಸಭೆಯಲ್ಲಿ ಹಾಜರಿದ್ದ ಸಂಸದರೊಬ್ಬರು ಹೇಳಿದ್ದಾರೆ. 

ಮೋದಿ ಅವರು ಸಂಸದರ ಜತೆಗೆ ಸ್ವಲ್ಪ ಹೊತ್ತು ಕಳೆದರು. ಸಂಸದರು ತಮ್ಮನ್ನು ಪರಿಚಯಿಸಿಕೊಂಡರು ಎಂದು ಅವರು ತಿಳಿಸಿದರು. ಸಭೆಯಲ್ಲಿ 43 ಸಂಸದರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಜರಿದ್ದರು. 

ಬಿಜೆಪಿ ಸಂಸದರನ್ನು ಯುವ ಸಂಸದರು, ಸಂಸದೆಯರು, ಪರಿಶಿಷ್ಟ ಜಾತಿಯ ಸಂಸದರು ಮುಂತಾದ ಏಳು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಜತೆಗೂ ಪ್ರಧಾನಿ ಪ್ರತ್ಯೇಕವಾಗಿ ಮಾತನಾಡಲಿದ್ದಾರೆ.

ಪ್ರತಿಕ್ರಿಯಿಸಿ (+)