ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡಾಸ್ ಹತ್ತಿದವ್ರು ಬರಬ್ಯಾಡ್ರೀ..

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ರಾಯಚೂರು: ‘ಸಂಡಾಸ್ಹತ್ತಿದವ್ರು ನನ್ನತ್ರ ಬರಬ್ಯಾಡ್ರಿ. ಒಂದು ಗುಳಿಗಿ ನುಂಗ್ರಿ, ಸಂಡಾಸ್ ಬಂದ್...! ಡ್ಯುಟಿ ಮಾಡಾಕ್ ಬರಲಿಲ್ಲಂದ್ರ ನೌಕರಿ ತಗೀತೀವಿ...’

ರಾಯಚೂರು ನಗರ ಕ್ಷೇತ್ರದ ಚುನಾವಣಾಧಿಕಾರಿ (ಉಪ ವಿಭಾಗಾಧಿಕಾರಿ) ವೀರಮಲ್ಲಪ್ಪ ಪೂಜಾರಿ ಅವರು ಚುನಾವಣೆಗೆ ನಿಯೋಜನೆಯಾದ ಸರ್ಕಾರಿ ನೌಕರರಿಗೆ ಶುಕ್ರವಾರ ಧ್ವನಿವರ್ಧಕದ ಮೂಲಕ ಹೇಳುತ್ತಿದ್ದ ಇಂತಹ ಮಾತುಗಳನ್ನು ಕೇಳಿಸಿಕೊಂಡವರೆಲ್ಲ ನಗುವಂತಾಗಿತ್ತು.

ಸಿಬ್ಬಂದಿಗೆ ಸೂಚನೆ ನೀಡುವುದಕ್ಕೆ ಪೂಜಾರಿ ಅವರ ಕೈಗೆ ಮೈಕ್‌ ನೀಡಲಾಗಿತ್ತು. ಆದರೆ, ಅವರು ಎಲ್ಲ ಮಾತುಗಳನ್ನೂ ಮೈಕ್‌ ಮೂಲಕವೇ ಹೇಳುತ್ತಿದ್ದರು. ಅದರಿಂದಾಗಿ ಅಲ್ಲಿ ಒಂದು ರೀತಿ ತಮಾಷೆಯ ವಾತಾವರಣ ಸೃಷ್ಟಿಯಾಗಿತ್ತು.

ರಾಯಚೂರು ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಸಿಬ್ಬಂದಿಗೆ ನಗರದ ಎಲ್‌ವಿಡಿ ಕಾಲೇಜು ಕ್ಯಾಂಪಸ್‌ನಲ್ಲಿ ಮತಗಟ್ಟೆ ಸಲಕರಣೆಗಳನ್ನು ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಾರಣ ಹೇಳಲು ಹಲವರು ಪೂಜಾರಿ ಅವರ ಬಳಿಗೆ ಬಂದಿದ್ದರು.

ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಬಂದಿದ್ದ ಮಹಿಳಾ ಸಿಬ್ಬಂದಿಗೆ ಮಾತ್ರ ರಿಯಾಯ್ತಿ ಕೊಟ್ಟ ಪೂಜಾರಿ ಅವರು, ಅನಾರೋಗ್ಯ ಮತ್ತು ಇತರ ಕಾರಣ ಹೇಳುತ್ತಿದ್ದವರನ್ನು ಧ್ವನಿವರ್ಧಕದ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದರು. ಮೊಬೈಲ್‌ ಕರೆ ಸ್ವೀಕರಿಸುವಾಗಲೂ ಇನ್ನೊಂದು ಕೈಯಲ್ಲಿ ಮೈಕ್‌ ಹಿಡಿದುಕೊಂಡಿದ್ದರಿಂದ ಏನು ಮಾತನಾಡುತ್ತಿದ್ದಾರೆ ಎಂಬುದು ಊರಿಗೇ ಕೇಳಿಸುವಂತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT