ಮಂಗಳವಾರ, ಏಪ್ರಿಲ್ 20, 2021
27 °C
ಹಿಂದಿಯಲ್ಲಿ ಪ್ರಶ್ನೆ ಕೇಳಿದ ವಕೀಲರಿಗೆ ಪ್ರತಿಕ್ರಿಯೆ

ಹಿಂದಿಯಲ್ಲಿ ಪ್ರಶ್ನಿಸಬೇಡಿ, ನಾನು ತಮಿಳಿಗ: ಸುಬ್ರಮಣಿಯನ್‌ ಸ್ವಾಮಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದೂರುದಾರ, ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಹಾಗೂ ಸೋನಿಯಾ ಗಾಂಧಿ ಪರ ವಕೀಲ ಆರ್.ಎಸ್.ಚೀಮಾ ನಡುವೆ ವಾಗ್ವಾದ ನಡೆದಿದೆ. 

ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಸಮ್ಮುಖದಲ್ಲಿ ನಡೆದ ವಿಚಾರಣೆ ವೇಳೆ, ಚೀಮಾ ಅವರು ಹಿಂದಿಯಲ್ಲಿ ಪ್ರಶ್ನಿಸಿದನ್ನು ವಿರೋಧಿಸಿದ ಸ್ವಾಮಿ, ‘ನಾನು ತಮಿಳಿಗ’ ಎಂದಿದ್ದಾರೆ.

‘ಇಂಡಿಯನ್‌ ಎಕ್ಸ್‌ಪ್ರೆಸ್‌ ಕಟ್ಟಡ ನಿರ್ಮಾಣವಾಗಿರುವ ರಸ್ತೆಯಲ್ಲಿ...’ ಎಂದು ಹಿಂದಿಯಲ್ಲಿ ಸ್ವಾಮಿ ಅವರನ್ನು ಪ್ರಶ್ನಿಸಲು ಚೀಮಾ ಮುಂದಾದರು. ಇದನ್ನು ವಿರೋಧಿಸಿದ ಸ್ವಾಮಿ, ‘ದಯವಿಟ್ಟು ಇಂಗ್ಲೀಷ್‌ನಲ್ಲಿ ಮಾತನಾಡಿ. ನಾನು ತಮಿಳಿಗ ಎಂದು ನೆನಪಿಸಿಕೊಳ್ಳಿ. ಇಂಗ್ಲಿಷ್‌ ನ್ಯಾಯಾಲಯದ ಭಾಷೆ’ ಎಂದರು. 

ಈ ಸಂದರ್ಭದಲ್ಲಿ ಪ್ರಾರಂಭವಾದ ವಾಗ್ವಾದ ತಾರಕಕ್ಕೇರುವ ಮುನ್ನವೇ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ‘ಇಂಗ್ಲಿಷ್‌ ಹಾಗೂ ಹಿಂದಿ ಎರಡೂ ನ್ಯಾಯಾಲಯದ ಭಾಷೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ‘ನಾನು ಸಂಸ್ಕೃತ ಮಿಶ್ರಿತ ಹಿಂದಿಯನ್ನಷ್ಟೇ ಅರ್ಥಮಾಡಿಕೊಳ್ಳಬಲ್ಲೆ. ಉರ್ದು ಮಿಶ್ರಿತ ಹಿಂದಿ ಅರ್ಥವಾಗುವುದಿಲ್ಲ’ ಎಂದರು. ನಂತರದಲ್ಲಿ ಚೀಮಾ ಹಿಂದಿ ಬಳಸಲಿಲ್ಲ. 

ಕಾಂಗ್ರೆಸ್‌ ಕಾರ್ಯಕರ್ತರೇ ಸಂತ್ರಸ್ತರು

‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳೇ ವಂಚಿಸಿದವರು. ಕಾಂಗ್ರೆಸ್‌ ಕಾರ್ಯಕರ್ತರು ಈ ವಂಚನೆಯ ಸಂತ್ರಸ್ತರು. 2016 ಏಪ್ರಿಲ್‌ 7ರಂದು ಬೇರೊಂದು ಸ್ಥಳದಿಂದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪುನರಾರಂಭವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 2014 ಜೂನ್‌ 26ರಂದು ಸಮನ್ಸ್‌ ನೀಡಲಾಗಿತ್ತು. ಹೆರಾಲ್ಡ್‌ ಹೌಸ್‌ ವಶಕ್ಕೆ ಪಡೆದುಕೊಳ್ಳಲು ಡಿಡಿಎ ಮುಂದಾದಾಗ ಮುದ್ರಣ ಪುನರಾರಂಭವಾಯಿತು. ಪತ್ರಿಕೆ ಸ್ಥಗಿತವಾದಾಗ ಎಲ್ಲ ಸಿಬ್ಬಂದಿಗೂ ಸ್ವಯಂ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿತ್ತು’ ಎಂದು ಸುಬ್ರಮಣಿಯನ್‌ ಸ್ವಾಮಿ ವಿಚಾರಣೆ ವೇಳೆ ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು