ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‌ಡಿಎ, ವಿಪಕ್ಷಗಳ ನಡುವೆ ತೀವ್ರ ಹಣಾಹಣಿ

7
ಕನ್ನಡಿಗ ಬಿ.ಕೆ. ಹರಿಪ್ರಸಾದ್‌ ಕಣಕ್ಕೆ

ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‌ಡಿಎ, ವಿಪಕ್ಷಗಳ ನಡುವೆ ತೀವ್ರ ಹಣಾಹಣಿ

Published:
Updated:

ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವಿನ ತೀವ್ರ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

ಕುರಿಯನ್ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ಗುರುವಾರ ಬೆಳಿಗ್ಗೆ 11ಕ್ಕೆ ಚುನಾವಣೆ ನಿಗದಿಯಾಗಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್‌ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್‌ನಿಂದ ಕನ್ನಡಿಗ ಬಿ.ಕೆ. ಹರಿಪ್ರಸಾದ್‌ ಕಣಕ್ಕಿಳಿದಿದ್ದಾರೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದ್ದು, ಉಪಸಭಾಪತಿ ಆಯ್ಕೆಗೆ ಕನಿಷ್ಠ 123 ಸದಸ್ಯರ ಬೆಂಬಲದ ಅಗತ್ಯವಿದೆ. ಆಡಳಿತಾರೂಢ ಎನ್‌ಡಿಎ ಅಥವಾ ಕಾಂಗ್ರೆಸ್‌ ಬಳಿ ಅಗತ್ಯ ಸಂಖ್ಯೆಯ ಸದಸ್ಯರು ಇಲ್ಲದ್ದರಿಂದ, ಚುನಾವಣೆಯ ಕಣ ತೀವ್ರ ಕುತೂಹಲಕಾರಿಯಾಗಿದೆ. ತಟಸ್ಥ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸುವುದು ದಿಟ ಎಂಬಂತಾಗಿದೆ.

‘125 ಸದಸ್ಯರ ಬೆಂಬಲ ಇದೆ’ ಎಂದು ತಿಳಿಸುತ್ತಲೇ ಆತ್ಮವಿಶ್ವಾಸದಲ್ಲಿರುವ ಬಿಜೆಪಿ, ‘ಮತದಾನದ ದಿನವೇ ತನ್ನ ಶಕ್ತಿ ಸಾಬೀತಾಗಲಿದೆ’ ಎಂದು ಹೇಳಿದೆ.

ಎಐಎಡಿಎಂಕೆಯ 13, ತೆಲಂಗಾಣ ರಾಷ್ಟ್ರೀಯ ಸಮಿತಿಯ (ಟಿಆರ್‌ಎಸ್‌) 6, ಬಿಜು ಜನತಾದಳದ 9 ಸದಸ್ಯರು ಎನ್‌ಡಿಎ ಪರ ಮತ ಚಲಾಯಿಸುವ ಸಾಧ್ಯತೆಗಳಿದ್ದು, ಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌, ತೆಲುಗು ದೇಶಂ, ಎನ್‌ಸಿಪಿ, ಆಮ್‌ಆದ್ಮಿ ಪಕ್ಷಗಳು ಕಾಂಗ್ರೆಸ್‌ ಪರ ನಿಲುವು ತಾಳುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಬಳಿಯೂ 115 ಸದಸ್ಯರ ಬೆಂಬಲ ಇದೆ. ಆದರೆ, ತಂದೆಯ ನಿಧನದಿಂದಾಗಿ ಡಿಎಂಕೆ ಸದಸ್ಯೆ ಕನ್ನಿಮೋಳಿ ಹಾಗೂ ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರು ಅನಾರೋಗ್ಯದಿಂದಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಗಳು ಕ್ಷೀಣ. ಇದು ಕಾಂಗ್ರೆಸ್‌ ಪಾಳಯದ ಚಿಂತೆಗೆ ಕಾರಣವಾಗಿದೆ. ಇಬ್ಬರು ಸದಸ್ಯರನ್ನು ಹೊಂದಿರುವ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಮತದಾನದಿಂದ ದೂರ ಉಳಿಯುವುದಾಗಿ ಘೋಷಿಸಿದೆ.

ರಾಹುಲ್‌ ಗಾಂಧಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಬೆಂಬಲವನ್ನು ಕೋರಿದಲ್ಲಿ ಮಾತ್ರ ಆಮ್‌ ಆದ್ಮಿ ಪಕ್ಷದ 3 ಮತಗಳು ಕಾಂಗ್ರೆಸ್‌ಗೆ ದೊರೆಯಲಿವೆ. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಬೆಂಬಲ ನೀಡುವ ಆಸಕ್ತಿ ಇಲ್ಲ ಎಂದು ಆ ಪಕ್ಷದ ಸದಸ್ಯ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

ಒಮ್ಮತದ ಅಭ್ಯರ್ಥಿ: ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಹಾಗೂ ಡಿಎಂಕೆ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ ನಂತರವಷ್ಟೇ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ಬಿ.ಕೆ. ಹರಿಪ್ರಸಾದ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿತು.

ಬಿಜು ಜನತಾದಳ (ಬಿಜೆಡಿ)ದ ಮುಖ್ಯಸ್ಥ ನವೀನ್‌ ಪಟ್ನಾಯಕ್‌ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರ ಕೋರಿಕೆಯ ಮೇರೆಗೆ ಎನ್‌ಡಿಎಗೆ ಬೆಂಬಲ ಸೂಚಿಸಿದ್ದರಿಂದ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ ಎನ್‌ಸಿಪಿ, ಕಾಂಗ್ರೆಸ್‌ ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿದೆ.

ಆದರೆ, ನಿರ್ಣಾಯಕವಾದ ಬೆಂಬಲದ ನಿರ್ಧಾರವನ್ನು ಗುರುವಾರ ಬೆಳಿಗ್ಗೆ ನಡೆಯಲಿರುವ ಎನ್‌ಡಿಎ ಸಭೆಯ ನಂತರವೇ ಪ್ರಕಟಿಸುವುದಾಗಿ ಬಿಜೆಡಿಯ 9 ಸದಸ್ಯರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಬಲ್ಯ ಕಡಿಮೆ ಮಾಡಲೇಬೇಕು ಎಂದು ಪಣ ತೊಟ್ಟಿರುವ ವಿಪಕ್ಷಗಳಿಗೆ ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಚುನಾವಣೆ ಮೊದಲ ಅಗ್ನಿಪರೀಕ್ಷೆಯಾಗಿದೆ.

ವಿಪಕ್ಷಗಳ ಒಗ್ಗಟ್ಟಿನ ಬಲದ ಪರೀಕ್ಷೆಯೆಂದೇ ಕರೆಯಲಾಗಿರುವ ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನಿಯಂತ್ರಿಸಲು ಕಾಂಗ್ರೆಸ್‌ ಅಗತ್ಯ ಕಾರ್ಯತಂತ್ರ ರೂಪಿಸಿದೆ. ಆದರೆ, ಫಲಿತಾಂಶ ಹೊರ ಬಿದ್ದ ನಂತರವೇ ಎನ್‌ಡಿಎ ವಿರುದ್ಧದ ಹೋರಾಟ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದಕ್ಕೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !