ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಬರುವ ಬಯಕೆಯೇ ಇರಲಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ

ಎನ್‌ಸಿಸಿ ಕೆಡೆಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದ
Last Updated 25 ನವೆಂಬರ್ 2019, 2:44 IST
ಅಕ್ಷರ ಗಾತ್ರ

ನವದೆಹಲಿ: ‘ರಾಜಕೀಯಕ್ಕೆ ಬರಬೇಕು ಎಂಬ ಬಯಕೆ ನನ್ನಲ್ಲಿ ಎಂದೂ ಇರಲಿಲ್ಲ. ಆದರೆ ಈಗ ಅದರ ಭಾಗವಾಗಿರುವುದರಿಂದ, ಜನರ ಸೇವೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಿಂಗಳ ರೇಡಿಯೊ ಕಾರ್ಯಕ್ರಮ ‘ಮನದ ಮಾತು’ದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳ ಜೊತೆ ಭಾನುವಾರ ನಡೆಸಿದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ನೀವು ರಾಜಕಾರಣಿಯಾಗಿರದಿದ್ದಲ್ಲಿ ಏನಾಗುತ್ತಿದ್ದಿರಿ’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಇದು ತುಂಬಾ ಕಷ್ಟದ ಪ್ರಶ್ನೆ. ಪ್ರತಿಯೊಬ್ಬರೂ ಜೀವನದಲ್ಲಿ ಹಲವು ಹಂತಗಳನ್ನು ದಾಟಿ ಬಂದಿರುತ್ತಾರೆ. ‘ನಾನು ಅದಾಗಬೇಕು– ಇದಾಗಬೇಕು’ ಎಂದೆಲ್ಲ ಲೆಕ್ಕಾಚಾರ ಹಾಕಿರುತ್ತಾರೆ. ಆದರೆ ನಾನು ಅಂಥ ಯೋಚನೆ ಮಾಡಿರಲಿಲ್ಲ. ಮುಂದೆ ಏನು ಮಾಡಬೇಕು ಎಂಬ ಯೋಚನೆಯೇ ನನ್ನ
ಮನಸ್ಸಿಗೆ ಬಂದಿರಲಿಲ್ಲ. ಆದರೆ ರಾಜಕಾರಣಿಯಾಗಬೇಕು ಎಂದು ಯಾವತ್ತೂ ಬಯಸಿರಲಿಲ್ಲ. ಈಗ ನಾನು ರಾಜಕಾರಣಿ ಆಗಿರುವುದರಿಂದ ಇಡೀ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟಿದ್ದೇನೆ ಎಂದರು.

ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೋದಿ, ‘ಗೂಗಲ್‌ನಿಂದಾಗಿ ನನ್ನಲ್ಲೂ ಓದುವ ಹವ್ಯಾಸ ಕಡಿಮೆಯಾಗಿದೆ. ಓದು ನನ್ನ ಹವ್ಯಾಸವಾಗಿತ್ತು. ಟಿ.ವಿ., ಸಿನಿಮಾ ವೀಕ್ಷಣೆಯಲ್ಲಿ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ ಗೂಗಲ್‌ನಿಂದಾಗಿ ಈಗ ನನ್ನ ಓದು ಕಡಿಮೆಯಾಗಿದೆ. ಯಾವ ಮಾಹಿತಿ ಬೇಕಿದ್ದರೂ ಈಗ ಗೂಗಲ್‌ನಲ್ಲಿ ಲಭಿಸುತ್ತದೆ. ಎಲ್ಲರ ಸ್ಥಿತಿಯೂ ಇದೇ ಆಗಿದೆ’ ಎಂದರು. ವಿದ್ಯಾರ್ಥಿ ಜೀವನದ ಕೆಲ ಘಟನೆಗಳನ್ನೂ ಅವರು ಸ್ಮರಿಸಿಕೊಂಡರು.

ಅಯೋಧ್ಯೆ: ಸಂಯಮಕ್ಕೆ ಮೆಚ್ಚುಗೆ

‘ಅಯೋಧ್ಯೆ ತೀರ್ಪಿನ ಬಗ್ಗೆ ದೇಶದ ಜನರು ತಾಳ್ಮೆ, ಸಂಯಮ ಹಾಗೂ ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಭಾರತೀಯರಿಗೆ ರಾಷ್ಟ್ರದ ಹಿತಕ್ಕಿಂತ ದೊಡ್ಡ ಆದ್ಯತೆ ಇನ್ನೊಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಇದಕ್ಕಾಗಿ ಜನರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ’ ಎಂದು ಮೋದಿ ಹೇಳಿದರು.

‘ಸುಪ್ರೀಂ ಕೋರ್ಟ್‌ನ ತೀರ್ಪು ಹೊಸ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಮೂಡಿಸಿದೆ. ನವ ಭಾರತವು ಇದೇ ಭಾವನೆಗಳನ್ನು ಮುಂದಿಟ್ಟುಕೊಂಡು ಶಾಂತಿ–ಏಕತೆ ಹಾಗೂ ಸದ್ಭಾವನೆಗಳನ್ನು ಬೆಳೆಸಿಕೊಂಡು ಮುನ್ನಡೆಯಲಿದೆ ಎಂಬುದು ನನ್ನ ವಿಶ್ವಾಸ’ ಎಂದರು.

‘ಅಯೋಧ್ಯೆ ಕುರಿತ ತೀರ್ಪಿನಿಂದಾಗಿ ದೀರ್ಘಕಾಲದ ವ್ಯಾಜ್ಯವೊಂದು ಕೊನೆಗೊಂಡಿದ್ದು ಒಂದು ಸಮಾಧಾನವಾದರೆ, ಭಾರತೀಯ ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಿದೆ ಎಂಬುದು ಇನ್ನೊಂದು ಪ್ರಮುಖ ಅಂಶವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ತೀರ್ಪು ಒಂದು ಮೈಲಿಗಲ್ಲು ಎಂದು ಮೋದಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT