ಹೊಸದಾಗಿ ಪರಿಸರ ಅನುಮತಿಗೆ ಎನ್‌ಜಿಟಿ ಸೂಚನೆ

7
ಬಫರ್‌ ವಲಯದಲ್ಲಿ ವಸತಿ ಕಾಮಗಾರಿ:

ಹೊಸದಾಗಿ ಪರಿಸರ ಅನುಮತಿಗೆ ಎನ್‌ಜಿಟಿ ಸೂಚನೆ

Published:
Updated:

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಮತ್ತು ಅಗರ ಕೆರೆಗಳ ಬಫರ್ ವಲಯದಲ್ಲಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಹೊಸದಾಗಿ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ಮಂತ್ರಿ ಟೆಕ್ ಝೋನ್ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)  ಸೂಚಿಸಿದೆ.

ಮಂತ್ರಿ ಟೆಕ್ ಝೋನ್‌ ಸಂಸ್ಥೆ ನಾಲ್ಕು ವಾರಗಳ ಒಳಗೆ ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರಕ್ಕೆ ತನ್ನ ಸಂಪೂರ್ಣ ಯೋಜನಾ ವರದಿಯ ವಿವರ ಸಲ್ಲಿಸಬೇಕು. ಈ ಯೋಜನೆಗೆ ಸಂಬಂಧಿಸಿದಂತೆ ಹಸಿರು ಪೀಠವು 2016ರಲ್ಲಿ ನೀಡಿದ್ದ ತೀರ್ಪಿನ ಆಧಾರದಲ್ಲಿ ಪರಿಶೀಲಿಸಿ, ಪ್ರಾಧಿಕಾರವೇ ತೀರ್ಮಾನ ಕೈಗೊಳ್ಳಬಹುದಾಗಿದೆ ಎಂದು ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಪೀಠ ಸೋಮವಾರ ಆದೇಶ ನೀಡಿತು.

ಈ ಕೆರೆಗಳ ಬಫರ್‌ ವಲಯದ ವ್ಯಾಪ್ತಿಯಲ್ಲಿ ಸಂಸ್ಥೆಯ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿಗೆ 2012ರಲ್ಲಿ ಪ್ರಾಧಿಕಾರವು ಪರಿಸರ ಅನುಮತಿ ನೀಡಿತ್ತು. ಆದರೆ, ಬೆಳ್ಳಂದೂರು ಕೆರೆಯ ಬಫರ್ ವಲಯ ಒತ್ತುವರಿ ಮಾಡಿ ಕಾಮಗಾರಿ ಆರಂಭಿಸಲಾಗಿದೆ ಎಂದು ದೂರಿ ಎನ್‌ಜಿಟಿಗೆ ಫಾರ್ವಡ್ ಫೌಂಡೇಷನ್‌ ಮೇಲ್ಮನವಿ ಸಲ್ಲಿಸಿತ್ತು.

ಎನ್‌ಜಿಟಿ ನಡೆಸಿದ್ದ ವಿಚಾರಣೆಯಲ್ಲಿ ಅಕ್ರಮ ಒತ್ತುವರಿ ಸಾಬೀತಾದ ಕಾರಣ ಮಂತ್ರಿ ಟೆಕ್‌ ಝೋನ್‌ ಸಂಸ್ಥೆಗೆ ಭಾರಿ ಪ್ರಮಾಣದ ದಂಡ ವಿಧಿಸಿದ್ದಲ್ಲದೇ, ಕಾಮಗಾರಿಗೆ ಷರತ್ತು ಹಾಕಿತ್ತು. ನಂತರ ಪ್ರಾಧಿಕಾರ ಪರಿಸರ ಅನುಮತಿಯನ್ನು ಹಿಂದಕ್ಕೆ ಪಡೆದಿತ್ತು. ಪರಿಸರ ಅನುಮತಿ ನೀಡಿರುವುದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸದಿದ್ದರೂ ಪರಿಸರ ಅನುಮತಿ ಹಿಂದಕ್ಕೆ ಪಡೆದಿರುವುದು ಸೂಕ್ತವಲ್ಲ ಎಂದು ಮಂತ್ರಿ ಟೆಕ್‌ ಝೋನ್‌ ಪರ ವಕೀಲರು ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !