ಜಿಎಸ್‌ಟಿ ಅನುಷ್ಠಾನ ಲೋಪ: ಪ್ರತಿಪಕ್ಷ ಟೀಕೆ

6

ಜಿಎಸ್‌ಟಿ ಅನುಷ್ಠಾನ ಲೋಪ: ಪ್ರತಿಪಕ್ಷ ಟೀಕೆ

Published:
Updated:
ದೆಹಲಿಯ ಅಂಬೇಡ್ಕರ್‌ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಭಾನುವಾರ ನಡೆದ ಜಿಎಸ್‌ಟಿ ದಿನ ಕಾರ್ಯಕ್ರಮದಲ್ಲಿ ಅರುಣ್‌ ಜೇಟ್ಲಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದರು ಪಿಟಿಐ ಚಿತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಮೊದಲ ವಾರ್ಷಿಕದ ಸಂಭ್ರಮವನ್ನು ಸರ್ಕಾರ ಆಚರಿಸುತ್ತಿರುವಾಗಲೇ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ತೆರಿಗೆ ಸುಧಾರಣೆಯ ಭಾಗವಾಗಿ ಜಾರಿಗೆ ಬಂದ ಜಿಎಸ್‌ಟಿಯ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಜಿಎಸ್‌ಟಿ ಎಂಬುದು ಈಗ ಜನರ ನಡುವೆ ‘ಕೆಟ್ಟ ಪದ’ವಾಗಿ ಬಳಕೆಯಾಗುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

‘ತೆರಿಗೆ ವ್ಯವಸ್ಥೆಯ ವಿನ್ಯಾಸ, ಮೂಲಸೌಕರ್ಯ ವ್ಯವಸ್ಥೆ, ದರ, ಅನುಷ್ಠಾನ ಎಲ್ಲವೂ ಲೋಪಗಳಿಂದ ಕೂಡಿದೆ. ವ್ಯಾಪಾರಿಗಳು, ರಫ್ತುದಾರರು, ಸಾಮಾನ್ಯ ಜನರು ಜಿಎಸ್‌ಟಿಯನ್ನು ಕೆಟ್ಟ ಪದ ಎಂದೇ ಪರಿಗಣಿಸುತ್ತಿದ್ದಾರೆ’ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬಂರ ಹೇಳಿದ್ದಾರೆ.

ಜಿಎಸ್‌ಟಿ ಜಾರಿಯು ಉದ್ಯಮಶೀಲತಾ ಸ್ಫೂರ್ತಿಯನ್ನೇ ಕಸಿದುಕೊಂಡಿದೆ. 2014ರಲ್ಲಿ ಉದ್ಯಮಕ್ಕಾಗಿ ಸಾಲ ಪಡೆಯುತ್ತಿದ್ದವರ ಪ್ರಮಾಣ ಶೇ 9ರಷ್ಟಿತ್ತು. 2017ರಲ್ಲಿ ಅದು ಶೇ 5ಕ್ಕೆ ಇಳಿದಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್‌ ಮಿತ್ರಾ ಹೇಳಿದ್ದಾರೆ. 

ಕಳೆದ ವರ್ಷ ತರಾತುರಿಯಿಂದ ಜಿಎಸ್‌ಟಿ ಜಾರಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮಾದ. ಇದು ವರ್ತಕರನ್ನು ಭಾರಿ ಸಂಕಷ್ಟಕ್ಕೆ ನೂಕಿದೆ’ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡ ಸುಗತಾ ರಾಯ್‌ ಟೀಕಿಸಿದ್ದಾರೆ. 

‘ಆತುರದಿಂದ ಜಿಎಸ್‌ಟಿ ಜಾರಿ ಮಾಡಿದ್ದು ಅರ್ಥ ವ್ಯವಸ್ಥೆಯ ಮೇಲೆ ಮಾಡಿದ ನಿರ್ದಿಷ್ಟ ದಾಳಿ. ಈ ವ್ಯವಸ್ಥೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಮತ್ತು ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಮನ್ನಣೆ ಇರಬೇಕು’ ಎಂದು ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್‌ ಒತ್ತಾಯಿಸಿದ್ದಾರೆ.

ಜಿಎಸ್‌ಟಿಯಿಂದಾಗಿ ಸಂತಸಗೊಂಡಿರುವ ಒಂದೇ ವರ್ಗವೆಂದರೆ ಅಧಿಕಾರಿಗಳು. ಅವರಿಗೆ ಅಸಾಧಾರಣ ಅಧಿಕಾರ ಸಿಕ್ಕಿದೆ. ಈ ಅಧಿಕಾರ ಉಪಯೋಗಿಸಿ ವ್ಯಾಪಾರಿಗಳು ಮತ್ತು ಜನರನ್ನು ಅವರು ಬೆದರಿಸುತ್ತಿದ್ದಾರೆ ಎಂದು ಚಿದಂಬರಂ ಆರೋಪಿಸಿದ್ದಾರೆ. 

‘ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಆರಂಭಿಸಿ ಬಿಜೆಪಿ ಸರ್ಕಾರ ಕೈಗೊಂಡ ಪ್ರತಿ ಕ್ರಮವೂ ಲೋಪಗಳಿಂದ ಕೂಡಿತ್ತು. ಅದರ ಪರಿಣಾಮವಾಗಿ ಬೇರೆಯೇ ವ್ಯವಸ್ಥೆಯೊಂದು ಜಾರಿಗೆ ಬಂದಿದೆ. ಇದು ನಿಜವಾದ ಜಿಎಸ್‌ಟಿ ಅಲ್ಲ’ ಎಂದು ಚಿದಂಬರಂ ಆರೋಪಿಸಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳು ಮತ್ತು ವಿದ್ಯುತ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಾರದು. ಕ್ರಮೇಣ ತೆರಿಗೆ ದರವನ್ನು ತಗ್ಗಿಸಿ ಒಂದೇ ದರ ಜಾರಿಗೆ ಬರಬೇಕು. ಅಗತ್ಯ ಸಾಮಗ್ರಿ ಮತ್ತು ಸೇವೆಗಳಿಗೆ ವಿನಾಯಿತಿ ನೀಡಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !