ಗುರುವಾರ , ನವೆಂಬರ್ 21, 2019
26 °C
ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಎದಿರೇಟು

ಸೈನಿಕರ ಕಳೇಬರ ಪಡೆಯಲು ‘ಬಿಳಿ ಬಾವುಟ’ ಹಾರಿಸಿದ ಪಾಕ್‌

Published:
Updated:

ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ನಡೆದ ಗುಂಡಿನ ಚಕಮಕಿಯಲ್ಲಿಮೃತಪಟ್ಟ ಇಬ್ಬರು ಸೈನಿಕರ ಮೃತದೇಹ ಪಡೆಯಲು ಪಾಕಿಸ್ತಾನವು ಕದನ ವಿರಾಮ ಸಂಕೇತವಾದ ಬಿಳಿ ಬಾವುಟ ಹಾರಿಸಿದೆ ಎಂದು ಭಾರತೀಯ ಸೇನೆ ಮೂಲಗಳು ಶನಿವಾರ ತಿಳಿಸಿವೆ.

ಸೆ. 10 ಹಾಗೂ 11ರಂದು ನಡೆದ ಈ ಘಟನೆ ಕುರಿತ 1.47 ನಿಮಿಷದ ವಿಡಿಯೊವೊಂದನ್ನು ಸೇನೆ ಶನಿವಾರ ಬಿಡುಗಡೆ ಮಾಡಿದೆ. ಪಾಕಿಸ್ತಾನ ಸೇನೆಯ ಸಿಬ್ಬಂದಿ ಬಿಳಿ ಬಾವುಟ ಹಾರಿಸುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಯೋಧರು ಎಲ್‌ಒಸಿ ಬಳಿ ಪಾಕ್‌ ಆಕ್ರಮಿತ ಕಾಶ್ಮೀರದ ಹಾಜಿಪಿರ್ ಸೆಕ್ಟರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಭಾರತ ನೀಡಿದ್ದ ಪ್ರತ್ಯುತ್ತರಕ್ಕೆ ಪಾಕಿಸ್ತಾನದ ಯೋಧನೊಬ್ಬ ಮೃತಪಟ್ಟಿದ್ದ.

‘ದಾಳಿಯನ್ನು ತೀವ್ರಗೊಳಿಸಿ, ಯೋಧನ ಮೃತದೇಹ ಒಯ್ಯಲು ಪಾಕಿಸ್ತಾನ ಮುಂದಾದಾಗ, ನಾವು ಪ್ರತಿದಾಳಿ ನಡೆಸಿ ಮತ್ತೊಬ್ಬ ಸೈನಿಕನನ್ನು ಹೊಡೆದುರುಳಿಸಿದೆವು. ನಂತರ ಈ ಇಬ್ಬರು ಸೈನಿಕರ ಮೃತದೇಹ ಪಡೆಯಲು ಮಾಡಿದ ಪ್ರಯತ್ನಗಳು ಕೈಗೂಡದಾದಾಗ ಪಾಕಿಸ್ತಾನ ಬಿಳಿ ಬಾವುಟ ಹಾರಿಸಿ ಸೈನಿಕರ ಮೃತದೇಹ ಪಡೆಯಿತು’ ಎಂದು ಇವೇ ಮೂಲಗಳು ಹೇಳಿವೆ.

ಈ ಕುರಿತು ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವಿಡಿಯೊವನ್ನು ಟ್ವೀಟ್‌ ಮಾಡಿದೆ.

ಹಜೀಪುರ್ ಪ್ರದೇಶದಲ್ಲಿ ಸೆಪ್ಟೆಂಬರ್ 10–11ರಂದು ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಯೋಧ ಗುಲಾಂ ರಸೂಲ್ ಹತ್ಯೆಯಾಗಿದ್ದ. ಮೃತದೇಹವನ್ನು ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಭಾರತೀಯ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ ಮತ್ತೊಬ್ಬ ಯೋಧ ಹತ್ಯೆಗೀಡಾಗಿದ್ದ. ಸತತ ಎರಡು ದಿನಗಳ ದಾಳಿಯ ಬಳಿಕವೂ ಮೃತದೇಹಗಳನ್ನು ವಶಕ್ಕೆ ಪಡೆಯುವುದು ಪಾಕಿಸ್ತಾನ ಸೇನೆಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ಸೆಪ್ಟೆಂಬರ್ 13ರಂದು ಬಿಳಿ ಬಾವುಟ ತೋರಿಸಿ ಶವಗಳನ್ನು ಕೊಂಡೊಯ್ದಿದೆ.

ಜುಲೈ 30–31ರಂದು ಕೇರನ್ ಪ್ರದೇಶದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 7 ಯೋಧರು ಹತರಾಗಿದ್ದರು. ಆದರೆ, ಅವರ ಮೃತದೇಹಗಳನ್ನು ಕೊಂಡೊಯ್ಯುವ ಪ್ರಯತ್ನವನ್ನೂ ಪಾಕಿಸ್ತಾನ ಸೇನೆ ಮಾಡಿರಲಿಲ್ಲ.

ಪ್ರತಿಕ್ರಿಯಿಸಿ (+)