ಬುಧವಾರ, ಅಕ್ಟೋಬರ್ 21, 2020
25 °C
ಎಸ್‌ಪಿ ಅಭ್ಯರ್ಥಿಯಾಗಿ ಪೂನಂ ನಾಮಪತ್ರ: ರೋಡ್‌ಷೋದಲ್ಲಿ ಶತ್ರುಘ್ನ

ಪತ್ನಿಯೇ, ಪಕ್ಷವೇ: ಶತ್ರುಘ್ನಗೆ ದ್ವಂದ್ವ

ಸಂಜಯ್‌ ಪಾಂಡೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ದೀರ್ಘ ಕಾಲ ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಅವರನ್ನು ಬಿಹಾರದ ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಆದರೆ, ಅವರ ಹೆಂಡತಿ ಪೂನಂ ಸಿನ್ಹಾ ಅವರು ಎಸ್‌ಪಿ ಸೇರಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ವಿರುದ್ಧ ಲಖನೌ ಕ್ಷೇತ್ರದಿಂದ ಅವರನ್ನು ಎಸ್‌ಪಿ ಕಣಕ್ಕಿಳಿಸಿದೆ. ಆಚಾರ್ಯ ಪ್ರಮೋದ್‌ ಕೃಷ್ಣಂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ. ಹೀಗಾಗಿ, ಇಲ್ಲಿ ಈಗ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿ ಶತ್ರುಘ್ನ ಇದ್ದಾರೆ.

ನಾಮಪತ್ರ ಸಲ್ಲಿಸುವ ಮೊದಲು ಪೂನಂ ಅವರು ಭಾರಿ ರೋಡ್‌ಷೋವನ್ನು ಲಖನೌದಲ್ಲಿ ಗುರುವಾರ ನಡೆಸಿದರು. ಈ ರೋಡ್‌ಷೋದಲ್ಲಿ ಶತ್ರುಘ್ನ ಅವರೂ ಇದ್ದರು. ಇದನ್ನು ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಂ ವಿರೋಧಿಸಿದ್ದಾರೆ. ಶತ್ರುಘ್ನ ಅವರು ಪಕ್ಷದ ಬದಲು ಹೆಂಡತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

‘ಶತ್ರುಘ್ನ ಅವರು ಪಕ್ಷದ ಪರವಾಗಿ ‍ಪ್ರಚಾರ ಮಾಡಬೇಕು. ಅವರು ಪಕ್ಷ ಧರ್ಮವನ್ನು ಪಾಲಿಸಬೇಕು’ ಎಂದು ಕೃಷ್ಣಂ ಹೇಳಿದ್ದಾರೆ. 

ನಟ ಶತ್ರುಘ್ನ ಅವರು ರೋಡ್‌ಷೋದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಜನರತ್ತ ಕೈಬೀಸಿದರು. ಶತ್ರುಘ್ನ ಅವರನ್ನು ನೋಡುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. 

ರೋಡ್‌ಷೋದಲ್ಲಿ ಭಾಗವಹಿಸಿದ್ದನ್ನು ಶತ್ರುಘ್ನ ಸಮರ್ಥಿಸಿಕೊಂಡಿದ್ದಾರೆ. ಗಂಡನಾಗಿ ಅಲ್ಲಿ ಹೋಗಿದ್ದೇನೆಯೇ ಹೊರತು ಕಾಂಗ್ರೆಸ್‌ ಮುಖಂಡನಾಗಿ ಅಲ್ಲ ಎಂದು ಅವರು ಹೇಳಿದ್ದಾರೆ. 

ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್‌ ಘಟಕದ ಮುಖಂಡರಿಗೂ ಶತ್ರುಘ್ನ ಅವರ ನಡೆಯಿಂದ ಬೇಸರವಾಗಿದೆ. 

‘ನಮ್ಮ ಅಭ್ಯರ್ಥಿ ಒಂದೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮ ರೋಡ್‌ಷೋದಲ್ಲಿಯೂ ಶತ್ರುಘ್ನ ಭಾಗವಹಿಸುತ್ತಾರೆಯೇ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ. 

ಹೈಕಮಾಂಡ್‌ಗೆ ದೂರು ಸಾಧ್ಯತೆ

ಎಸ್‌ಪಿ ಅಭ್ಯರ್ಥಿಯ ರೋಡ್‌ಷೋದಲ್ಲಿ ಶತ್ರುಘ್ನ ಅವರು ಭಾಗವಹಿಸಿದ್ದನ್ನು ಹೈಕಮಾಂಡ್‌ ಗಮನಕ್ಕೆ ತರಲಾಗುವುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಹೆಂಡತಿ ಪೂನಂ ಅವರ ಪರ ರ‍್ಯಾಲಿಗಳಲ್ಲಿ ಶತ್ರುಘ್ನ ಅವರು ಭಾಗವಹಿಸದಂತೆ ಸೂಚಿಸಲು ಹೈಕಮಾಂಡ್‌ ಅನ್ನು ಕೋರಲಾಗುವುದು ಎಂದೂ ಅವರು ತಿಳಿಸಿದ್ದಾರೆ.

‘ಎಸ್‌ಪಿ ನಮ್ಮ ಪ್ರತಿಸ್ಪರ್ಧಿ ಪಕ್ಷ. ಪೂನಂ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ಶತ್ರುಘ್ನ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಬೇಕಾಗುತ್ತದೆ. ಇಲ್ಲವೇ ಎಸ್‌ಪಿ ಮುಖಂಡರು ಕಾಂಗ್ರೆಸ್‌ ಪಕ್ಷವನ್ನು ದೂರುವಾಗ ಸುಮ್ಮನೆ ಇರಬೇಕಾಗುತ್ತದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. 

***

ಹೆಂಡತಿಗೆ ಬೆಂಬಲ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ನಾನು ಪ್ರಚಾರ ಮಾಡುವುದೇ ಇಲ್ಲ

–ಶತ್ರುಘ್ನ ಸಿನ್ಹಾ, ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು