ಪ್ರತ್ಯೇಕತೆಗೆ ‘ದೀದಿ’ ಬೆಂಬಲ: ಮೋದಿ

ಶನಿವಾರ, ಏಪ್ರಿಲ್ 20, 2019
32 °C

ಪ್ರತ್ಯೇಕತೆಗೆ ‘ದೀದಿ’ ಬೆಂಬಲ: ಮೋದಿ

Published:
Updated:

 ಕೋಲ್ಕತ್ತ: ‘ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಮತ್ತು ಪ್ರತ್ಯೇಕ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ದಿನಗಳು ಬರಬಹುದು’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಈಚೆಗೆ ನೀಡಿರುವ ಹೇಳಿಕೆಯನ್ನು ಉಲ್ಲೀಖಿಸಿ ಪ್ರಧಾನಿ ಮೋದಿ ಅವರು ಭಾನುವಾರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ಮಾಡಿದರು.

ಕೂಚ್‌ಬಿಹಾರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರಕ್ಕೆ ಒಬ್ಬ ಪ್ರಧಾನಿ ಮತ್ತು ಭಾರತದ ಉಳಿದ ಭಾಗಕ್ಕೆ ಒಬ್ಬ ಪ್ರಧಾನಿ ಎಂಬ ವಾದವನ್ನು ನೀವು ಊಹಿಸಬಲ್ಲಿರಾ? ಆದರೆ, ಅಂಥ ವಾದವನ್ನು ಮುಂದಿಟ್ಟ ವ್ಯಕ್ತಿಯನ್ನು ಮಮತಾ ಬೆಂಬಲಿಸುತ್ತಾರೆ’ ಎಂದು ಹೇಳಿದರು.

‘ಭಾರತವು ಬಾಹ್ಯಾಕಾಶದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕೆಲವರಿಗೆ ರುಚಿಸುವುದಿಲ್ಲ. ‘ದೀದಿ’ಗೂ ಇದು ಇಷ್ಟವಾಗುವುದಿಲ್ಲ. ಅವರು ಎಷ್ಟು ಹತಾಶರಾಗಿದ್ದಾರೆ ಎಂದರೆ ದಿನವಿಡೀ ‘ಮೋದಿ ಹಠಾವೊ’ ಘೋಷಣೆ ಕೂಗುತ್ತಲೇ ಇರುತ್ತಾರೆ ಎಂದು ಲೇವಡಿ ಮಾಡಿದರು.

‘ವೋಟ್‌ಬ್ಯಾಂಕ್‌ಗಾಗಿ ಮಮತಾ ನುಸುಳುಕೋರರಿಗೂ ರಕ್ಷಣೆ ಕೊಡುತ್ತಿದ್ದಾರೆ. ಈ ಉದ್ದೇಶದಿಂದಲೇ ಮಹಾಘಟಬಂಧನ ಸೇರಿರುವ ಪಕ್ಷಗಳು ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸುತ್ತಿವೆ ಎಂದರು.

ಹಗರಣಗಳ ಮೂಲಕ ಮಮತಾ ಅವರು ಪಶ್ಚಿಮ ಬಂಗಾಳದ ಹೆಸರನ್ನು ಕೆಡಿಸಿದ್ದಾರೆ ಎಂದು ಆರೋಪಿಸಿದ ಮೋದಿ, ‘ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್‌ಫಂಡ್‌ಗಳ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಲಾಗುವುದು. ಪ್ರತಿ ಪೈಸೆಗೂ ಈ ಚೌಕೀದಾರ ಲೆಕ್ಕ ಕೇಳುತ್ತಾನೆ’ ಎಂದರು.

ಸರ್ಕಾರಿ ಯಂತ್ರದ ದುರ್ಬಳಕೆ: ಮಮತಾ
ಜಲಪೈಗುರಿ (ಪಶ್ಚಿಮ ಬಂಗಾಳ) (ಪಿಟಿಐ): ಲೋಕಸಭಾ ಚುನಾವಣೆಗೂ ಮುನ್ನ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿರುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ‘ವಿರೋಧ ಪಕ್ಷಗಳಲ್ಲಿ ಭಯಹುಟ್ಟಿಸುವ ಸಲುವಾಗಿ ಪ್ರಧಾನಿ ಮೋದಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಚುನಾವಣಾ ಆಯೋಗವು ಶುಕ್ರವಾರ ಆಂಧ್ರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅನಿಲ್‌ ಚಂದ್ರ ಪುನೀತ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಎಲ್‌.ವಿ. ಸುಬ್ರಹ್ಮಣ್ಯಂ ಅವರನ್ನು ನಿಯುಕ್ತಿಗೊಳಿಸಿತ್ತು.

ಚುನಾವಣಾ ರ್‍ಯಾಲಿಯೊಂದರಲ್ಲಿ ಭಾನುವಾರ ಇದನ್ನು ಉಲ್ಲೇಖಿಸಿದ ಮಮತಾ, ‘ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ತನಿಖೆಯನ್ನು ಕೇಂದ್ರ ಸರ್ಕಾರ ಯಾಕೆ ಮಾಡುತ್ತಿದೆ? ಆಂಧ್ರದ ಮುಖ್ಯ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದ್ದೇಕೆ? ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆ, ಸಿಬಿಐಯಂಥ ಸಂಸ್ಥೆಗಳನ್ನು ಸಹ ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿ ಆಯೋಗಕ್ಕೆ ಪತ್ರ ಬರೆದಿರುವ ಮಮತಾ, ‘ಇದು ದೌರ್ಭಾಗ್ಯಪೂರ್ಣ ಮತ್ತು  ಪಕ್ಷಪಾತದ ಧೋರಣೆ. ಕೂಡಲೇ ಈ ನಿರ್ಧಾರವನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಎಸ್‌ಪಿ–ಬಿಎಸ್‌ಪಿ ಜಂಟಿ ರ್‍ಯಾಲಿ
ದೇವಬಂದ್‌: ‘ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ ಹಾಗೂ ಬಿಜೆಪಿಗಳೇ ದೇಶವನ್ನು ಬಹುಕಾಲ ಆಳಿದ್ದು ಎರಡೂ ಪಕ್ಷಗಳು ಅಸಮರ್ಪಕ ಯೋಜನೆಗಳನ್ನೇ ಜಾರಿ ಮಾಡಿವೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದರು.

ಎಸ್‌ಪಿ–ಬಿಎಸ್‌ಪಿ ಪಕ್ಷಗಳು ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ಮೊದಲ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಈಗ ಭಯ ಹುಟ್ಟಿದೆ. ಅವರು ಈ ಬಾರಿ ಅಧಿಕಾರದಿಂದ ಇಳಿಯುವುದು ಖಚಿತ’ ಎಂದರು.

‘ತಪ್ಪು ನೀತಿಗಳನ್ನೇ ಅನುಸರಿಸಿದ್ದರಿಂದ ಕಾಂಗ್ರೆಸ್‌ ಪಕ್ಷವು ಜನರ ವಿಶ್ವಾಸವನ್ನು ಕಳೆದುಕೊಂಡಿತು. ಬಡತನ ನಿರ್ಮೂಲನೆಗಾಗಿ ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ಘೋಷಿಸಿದ್ದರು. ಅದು ಯಶಸ್ವಿಯಾಗಿತ್ತೇ? ಎಂದು ಜನರನ್ನು ಪ್ರಶ್ನಿಸಿದ ಮಾಯಾವತಿ, ಈಗ ಅದೇ ಪಕ್ಷ ಘೋಷಿಸಿರುವ ‘ನ್ಯಾಯ್‌’ ಯೋಜನೆ ಯಶಸ್ವಿಯಾಗದು. ನಾವು ಅಧಿಕಾರಕ್ಕೆ ಬಂದರೆ ಕನಿಷ್ಠ ಆದಾಯ ಖಚಿತಪಡಿಸುವ ಬದಲು ಜನರಿಗೆ ಉದ್ಯೋಗ ನೀಡುವುದು ಎಂದರು.

‘ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ‘ಉದಾತ್ತ’ ವಿಚಾರಗಳನ್ನು ಮುಂದಿಟ್ಟು ಜನರ ಹಾದಿ ತಪ್ಪಿಸುತ್ತಿದೆ. ‘ಚೌಕೀದಾರ’ ಆಂದೋಲನದ ಮೂಲಕ ಅವರು ಹಬ್ಬಿಸಿರುವ ದ್ವೇಷದ ಮಾತುಗಳೇ ಅವರಿಗೆ ಮುಳುವಾ ಗಲಿವೆ’ ಎಂದರು.

ಕಾಂಗ್ರೆಸ್‌ ಪಕ್ಷ ಮುಸ್ಲಿಂ ಮತಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಸಮುದಾಯ ಒಗ್ಗಟ್ಟಾಗಿದ್ದು ಮತಗಳು ಒಡೆದುಹೋಗದಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.


ಸಹರನ್‌ಪುರದಲ್ಲಿ ಎಸ್‌ಪಿ, ಆರ್‌ಎಲ್‌ಡಿ, ಬಿಎಸ್‌ಪಿ ಜಂಟಿ ಸಮಾವೇಶದಲ್ಲಿ ಅಖಿಲೇಶ್‌, ಅಜಿತ್‌ ಸಿಂಗ್‌ ಹಾಗೂ ಮಾಯಾವತಿ ಭಾಗಿಯಾಗಿದ್ದರು. –ಪಿಟಿಐ ಚಿತ್ರ

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !