ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ರದ್ದತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ

Last Updated 10 ಸೆಪ್ಟೆಂಬರ್ 2019, 11:29 IST
ಅಕ್ಷರ ಗಾತ್ರ

ಬೆಂಗಳೂರು: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನಕಾನೂನುಗಳ ಕುರಿತು ಹೇಳಿದಹೇಳಿಕೆಗಳೆಲ್ಲ ನಿಜವಲ್ಲ.

ಮೋದಿ ಪ್ರಸ್ತಾಪಿಸಿದ ವಿಷಯಗಳಲ್ಲಿ ನಾಲ್ಕು ಹೇಳಿಕೆಗಳು ಸುಳ್ಳಾಗಿವೆ, 3 ಅರ್ಧ ಸತ್ಯ ಹಾಗೂನಾಲ್ಕು ಹೇಳಿಕೆಗಳು ಮಾತ್ರ ಸತ್ಯವಾಗಿದೆ ಎನ್ನುತ್ತಿದೆ ಫ್ಯಾಕ್ಟ್‌ಚೆಕ್ಕರ್‌ ವಿಶ್ಲೇಷಣೆ.

‘.. ಆ ಒಂದು ಕಾನೂನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ನಮ್ಮ ಅಣ್ಣ, ತಂಗಿಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದರು. ಅಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಆ ಕಾನೂನನ್ನು ತೆಗೆದುಹಾಕಲಾಗಿದೆ’ ಎಂದು ಮೋದಿ ಆಗಸ್ಟ್‌ 8ರಂದು ಮಾಡಿದ ಭಾಷಣದಲ್ಲಿ ಹೇಳಿದ್ದರು.

ಶಿಕ್ಷಣ ಹಕ್ಕು ಕಾಯ್ದೆ, ಬಾಲ್ಯ ವಿವಾಹ ತಡೆ ಕಾಯ್ದೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವುದಿಲ್ಲ. ಆದರೆ, ಅಲ್ಲಿಯ ರಾಜ್ಯ 14 ವರ್ಷದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದಕ್ಕೆ ಪ್ರತ್ಯೇಕ ಕಾನೂನನ್ನು ಹೊಂದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ.ಹೂಡಿಕೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಈ ರಾಜ್ಯ ಹಿಂದಿದ್ದರೂ, ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಸೂಚಕಗಳು ದೇಶದ ಇತರೆ ರಾಜ್ಯಗಳಿಗಿಂತ ಉತ್ತಮವಾಗಿಯೇ ಇವೆ.

ಬಡತನ, ಸಾಮಾಜಿಕ ಅಭಿವೃದ್ಧಿ ಕುರಿತ ಮಾತು: ಸುಳ್ಳು

307ನೇ ಹಾಗೂ 35ಎ ವಿಧಿಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಪ್ರಧಾನಿ ಹೇಳಿದ್ದರು. ಆದರೆ, ರಾಜ್ಯದ ಸಾಮಾಜಿಕ ಅಭಿವೃದ್ಧಿ ಸೂಚಕ (ಜೀವಿತಾವಧಿ, ಸಾಕ್ಷರತೆ ಮತ್ತು ಬಡತನದ) ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿಯೇ ಇದೆ ಎನ್ನುತ್ತದೆ ಫ್ಯಾಕ್ಟ್‌ಚೆಕ್ಕರ್‌ ವಿಶ್ಲೇಷಣೆ.

ಬಾಲ್ಯ ವಿವಾಹ ತಡೆ ಕಾಯ್ದೆ ಇಲ್ಲದಿದ್ದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಅಂತಹ ಪ್ರಕರಣಗಳು ಕಡಿಮೆ ಇವೆ. 2015–16ರಲ್ಲಿ 18ವರ್ಷದ ಒಳಗೆ ವಿವಾಹವಾಗಿದ್ದವರ ಪ್ರಮಾಣ ಶೇ 8.7ರಷ್ಟಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಬಾಲ್ಯವಿವಾಹದ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ 26.8ರಷ್ಟಿದೆ. ಬಿಹಾರದಲ್ಲಿ ಶೇ 42.5ರಷ್ಟು ಹಾಗೂ ಮೋದಿ ಅವರ ಕ್ಷೇತ್ರವಾದ ಗುಜರಾತ್‌ನಲ್ಲಿ ಶೇ 24.9ರಷ್ಟಿದೆ.

‘ಕೇರಳದಲ್ಲಿ ಕಮ್ಯುನಿಷ್ಟ್‌ ಪಕ್ಷ ಭೂ ಸುಧಾರಣೆ ಕಾನೂನುಗಳನ್ನು ಜಾರಿಗೆ ತರುವ ಮುನ್ನವೇ ನಾವು ಜಾರಿಗೆ ತಂದಿದ್ದೇವೆ. 1951 ರಿಂದ 1973ರವರೆಗೆ ಸಾಕಷ್ಟು ಜನರ ಸಾಲಮನ್ನ ಮಾಡಿದ್ದೇವೆ. ಇದರಿಂದ ಗ್ರಾಮೀಣ ಜನರ ಮತ್ತು ಬಡತನ ರೇಖೆಗಿಂತ ಕೆಳಗಿನವರ ಬದುಕು ಸುಧಾರಣೆಗೆಯಾಗಿದ್ದು, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ’ ಎಂದು ಜಮ್ಮು ಕಾಶ್ಮೀರದ ಮಾಜಿ ಹಣಕಾಸು ಸಚಿವ ಹಸೀಬ್ ದರ್ಬು ವಿವರಿಸಿದ್ದಾರೆ.

ಕೈಗಾರಿಕೆಗೆ ಉತ್ತೇಜನ: ಸುಳ್ಳು

370ನೇ ಹಾಗೂ 35ಎ ವಿಧಿ ತಿದ್ದುಪಡಿ ನಂತರ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಘಟಕಗಳು ಮತ್ತು ಖಾಸಗಿ ಕಂಪನಿಗಳಿಗೆ ಉತ್ತೇಜನ ಸಿಗಲಿದೆ ಮತ್ತು ಹೊಸ ಉದ್ಯೋಗ ಅವಕಾಶಗಳು ದೊರೆಯಲಿವೆ’ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು.

2018ರ ಮಾರ್ಚ್‌ 31ರವರೆಗೆ ಭಾರತದಲ್ಲಿ 339 ಸಾರ್ವಜನಿಕ ವಲಯದ ಉದ್ಯಮಗಳು ₹ 23 ಲಕ್ಷ ಕೋಟಿ ಹೂಡಿಕೆ ಮಾಡಿವೆ ಮತ್ತು 1.08 ಮಿಲಿಯನ್‌ ಜನರಿಗೆ ಉದ್ಯೋಗ ನೀಡಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವುದು 3 ಕಂಪನಿಗಳು ಹಾಗೂ ಅವು ₹165 ಕೋಟಿ ಹೂಡಿಕೆ ಮಾಡಿದ್ದು, 21 ಜನರಿಗೆ ಉದ್ಯೋಗ ನೀಡಿದೆ.ಕೇಂದ್ರ ಸರ್ಕಾರಕ್ಕೆ ಮತ್ತು ಅದರ ಕಂಪನಿಗಳಿಗೆ 35ಎ ವಿಧಿ ಅಡ್ಡಿಯಾಗಿಲ್ಲ. ಹೀಗಿದ್ದೂ ಕಳೆದ 70 ವರ್ಷಗಳಲ್ಲಿ ಸಾರ್ವಜನಿಕ ವಲಯದಲ್ಲಿ ಹೂಡಿಕೆಯಾಗಿದ್ದು ಮಾತ್ರ ಸೊನ್ನೆ ಎಂದು ದರ್ಬು ಅವರು ಮಿಂಟ್‌ ವೆಬ್‌ಸೈಟ್‌ಗೆ ಬರೆದ ಲೇಖನದಲ್ಲಿ ವಿವರಿಸಿದ್ದಾರೆ.

370ನೇ ವಿಧಿ ಸಂಘರ್ಷಕ್ಕೆ ಕಾರಣವಾಗಿದೆ: ಸುಳ್ಳು

‘370ನೇ ವಿಧಿಯಿಂದ ಈ ರಾಜ್ಯದಲ್ಲಿ ಪ್ರತ್ಯೇಕತಾವಾದ, ಕುಟುಂಬ ರಾಜಕಾರಣ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ಹೊರತಾಗಿ ಏನೂ ಲಾಭವಾಗಿಲ್ಲ. ಪಾಕಿಸ್ತಾನಈ ವಿಧಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದೇಶದ ವಿರುದ್ಧ ಇಲ್ಲಿನ ಜನರನ್ನು ಎತ್ತುಕಟ್ಟುತ್ತಿದೆ. ಇದರಿಂದಾಗಿ 42 ಸಾವಿರ ಅಮಾಯಕರು ಜೀವ ಕಳೆದುಕೊಂಡಿದ್ದಾರೆ’ ಎಂದು ಮೋದಿ ಹೇಳಿದ್ದರು.

ಕಾಶ್ಮೀರದಲ್ಲಿ ಜೀವಂತವಾಗಿರುವ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ 370ನೇ ವಿಧಿ ಕಾರಣವಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೇ 2002ರಲ್ಲಿ ನೀಡಿರುವ ವರದಿಯಲ್ಲಿ ತಿಳಿಸಿದೆ. ‘ಜಮ್ಮು–ಕಾಶ್ಮೀರವನ್ನು ಕಿತ್ತುಕೊಳ್ಳುವುದಕ್ಕಾಗಿ ಪಾಕಿಸ್ತಾನ ಹಿಂಸಾತ್ಮಕ ಮಾರ್ಗವನ್ನೇ ಅನುಸರಿಸಿದೆ. ಇಲ್ಲಿನ ಜನರು ಬದುಕು, ಆಸ್ತಿ, ಕಾನೂನು ಸುವ್ಯವಸ್ಥೆ ಹಾಳಾಗುವುದಕ್ಕೆ ಭಯೋತ್ಪಾದಕರು ಮತ್ತು ಪಾಕಿಸ್ತಾನ ಬೆಂಬಲಿತ ಉಗ್ರವಾದವೇ ಕಾರಣ ಹೊರತು, 370ನೇ ವಿಧಿ ಅಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಮೈತ್ರಿ ಸರ್ಕಾರ ರಚನೆ ನಂತರ 2015ರಲ್ಲಿ ಇಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು,3 ವರ್ಷಗಳಲ್ಲಿ ಸುಮಾರು 800 ಭಯೋತ್ಪಾದನಾ ಕೃತ್ಯಗಳು ವರದಿಯಾಗಿದೆ ಎಂದು ಸರ್ಕಾರದ ದಾಖಲೆಗಳು ತಿಳಿಸುತ್ತವೆ. 2017ರಲ್ಲಿ ಬರೋಬ್ಬರಿ 488 ಭಯೋತ್ಪಾದನಾ ಘಟನೆಗಳು ನಡೆದಿವೆ.

ಸರ್ಕಾರಿ ನೌಕರರ ಹಕ್ಕು ಮತ್ತು ಕನಿಷ್ಠ ವೇತನ: ಸುಳ್ಳು

ಇತರೆ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುವ ಎಲ್ಲಾ ಸೌಲಭ್ಯಗಳು2018ರಿಂದ ಇಲ್ಲಿರುವ ನೌಕರರಿಗೂ ಲಭಿಸುತ್ತಿದೆ. ಮೋದಿ ಅವರು ಹೇಳಿದಂತೆ 370ನೇ ವಿಧಿ ತಿದ್ದುಪಡಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದರ ಹೊರತಾಗಿ ಜಮ್ಮು–ಕಾಶ್ಮೀರದಲ್ಲಿಪೊಲೀಸರಿಗಾಗಿ ಕಲ್ಯಾಣ ಯೋಜನೆಗಳು ಇವೆ.

ಕನಿಷ್ಠ ವೇತನ ಕಾಯ್ದೆ ಕೇವಲ ಕಾಗದಗಳಲ್ಲಷ್ಟೇ ಇದೆ ಎಂದು ಮೋದಿ ಹೇಳಿದ್ದರು. ಆದರೆ, ಅದರಲ್ಲಿ ಸ್ಪಷ್ಟತೆ ಇಲ್ಲ. ಕನಿಷ್ಠ ವೇತನ ಕಾಯ್ದೆ 1948 ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯವಾಗುತ್ತದೆ ಮತ್ತು 2017ರಲ್ಲಿ ಇದಕ್ಕೆ ತಿದ್ದುಪಡಿ ತರಲಾಗಿದೆ. ವಿವಿಧ ರಾಜ್ಯಗಳು ಅವುಗಳದ್ದೇ ಆದ ಪ್ರತ್ಯೇಕ ಕನಿಷ್ಠ ವೇತನವನ್ನು ನಿಗದಿಪಡಿಸಿವೆ.

ಕಾನೂನುಅನ್ವಯ ಮತ್ತು ಅದರ ಪರಿಣಾಮ: ಅರ್ಧ ಸತ್ಯ

ಸಂಸತ್ತಿನಲ್ಲಿ ರೂಪಿಸಿದ ಕಾನೂನುಗಳನ್ನು ಸ್ವೀಕರಿಸದಿರಲು ರಾಜ್ಯ ಸರ್ಕಾರಕ್ಕೆ 370ನೇ ವಿಧಿ ನೆರವಾಗಿತ್ತು ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದ್ದರು. ಆದರೆ, 1950ರಿಂದರಾಷ್ಟಪತಿ ಆದೇಶಗಳು 370ನೇ ವಿಧಿಗೆ ಸಾಕಷ್ಟು ತಿದ್ದುಪಡಿ ತಂದಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೂ ಸಂಸತ್ತು ರಚಿಸುವ ಬಹುತೇಕಕಾನೂನು ಅನ್ವಯವಾಗುವಂತೆ ಮಾಡಿದೆ.

1954ರಲ್ಲಿ ರಾಷ್ಟ್ರಪತಿ ಆದೇಶ ಬಹುತೇಕಸಾಂವಿಧಾನಿಕ ಅಧಿಕಾರವನ್ನು (ತಿದ್ದುಪಡಿ ಮಸೂದೆಗಳನ್ನೂ ಒಳಗೊಂಡು) ಜಮ್ಮು ಮತ್ತು ಕಾಶ್ಮೀರಕ್ಕೂ ವಿಸ್ತರಿಸಿದೆ.ಸಂವಿಧಾನದ 7ನೇ ಅನುಸೂಚಿಯಲ್ಲಿನ ಒಕ್ಕೂಟ ಪಟ್ಟಿಯಲ್ಲಿನ (UNION LIST)97 ವಿಷಯಗಳಲ್ಲಿ 94 ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯವಾಗುತ್ತದೆ. 395 ವಿಧಿಗಳಲ್ಲಿ 260 ಇಲ್ಲಿ ಅನ್ವಯವಾಗುತ್ತದೆ ಎನ್ನುತ್ತಾರೆ ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಪಕರು.

ಆರ್ಥಿಕ ಅಭಿವೃದ್ಧಿ: ಅರ್ಧ ಸತ್ಯ

ಆರ್ಥಿಕ ಅಭಿವೃದ್ಧಿ ವಿಚಾರದಲ್ಲಿ ಉತ್ತಮ ಜಿಡಿಪಿ ಹೊಂದಿರುವ ಮಹಾರಾಷ್ಟ್ರಕ್ಕೆ (2016–17ರ ತಲಾ ಆದಾಯ ₹133,141) ಹೋಲಿಸಿದರೆ ಅದರ ಅರ್ಧದಷ್ಟು ಜಿಡಿಪಿ (ತಲಾ ಆದಾಯ ₹62,145) ಹೊಂದಿರುವ ಜಮ್ಮು–ಕಾಶ್ಮೀರ ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದಿದೆ. ಆದರೆ, ಬಿಹಾರಕ್ಕೆ ಹೋಲಿಸಿದರೆ (ವಾರ್ಷಿಕ ತಲಾ ಆದಾಯ ₹25,950) ಉತ್ತಮ ಸ್ಥಿತಿಯಲ್ಲಿದೆ.

ಖಾಸಗಿ ಹೂಡಿಕೆ ವಿಚಾರದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಬಿಹಾರಕ್ಕಿಂತ ಹಿಂದುಳಿದಿರುವುದಕ್ಕೆ 370ನೇ ವಿಧಿ ಅಥವಾ ಸಂಘರ್ಷದಿಂದ ಕೂಡಿದ ಈ ರಾಜ್ಯದಲ್ಲಿನ ಅನಿಶ್ಚಿತ ಭದ್ರತಾ ಪರಿಸ್ಥಿತಿಯೂ ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು.

ಈ ರಾಜ್ಯ ಅತಿ ಹೆಚ್ಚು ಸಾಲವನ್ನು ಹೊಂದಿದ್ದು, ಕೇಂದ್ರದ ಅನುದಾನವನ್ನೇ ಅವಲಂಬಿಸಿದೆ ಎಂದುಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಈಶಾನ್ಯ ರಾಜ್ಯಗಳಂತೆ ಭೌಗೋಳಿಕ ಪರಿಸ್ಥಿತಿಯ ಕಾರಣಕ್ಕಾಗಿಯೇ ಕಾಶ್ಮೀರವೂ ಕೇಂದ್ರದ ಅನುದಾನದ ಮೇಲೆ ಅವಲಂಬಿತವಾಗಿದೆ. 2011 ರಿಂದ 2019ರ ಅವಧಿಯಲ್ಲಿ ಕಾಶ್ಮೀರ ಶೇ 54ರಷ್ಟು ಕೇಂದ್ರದ ಅನುದಾನ ಪಡೆದಿದೆ. ಅಭಿವೃದ್ಧಿ ಹೊಂದಿದ ಮಹಾರಾಷ್ಟ್ರಕ್ಕೆ ಅಥವಾ ಗುಜರಾತ್‌ಗೆ ಹೋಲಿಸಿದರೆ ಅದು ಹೆಚ್ಚಿದೆ. ಆದರೆ, ಈಶಾನ್ಯ ರಾಜ್ಯಗಳಾದ ಮಿಜೋರಾಂ (ಶೇ 61) ಮತ್ತು ನಾಗಾಲೆಂಡ್‌ಗೆ ( ಶೇ 67) ಹೋಲಿಸಿದರೆ ಇದು ಕಡಿಮೆ ಎನ್ನುತ್ತದೆ ರಾಜ್ಯ ಸರ್ಕಾರದ ಬಜೆಟ್‌ ಕುರಿತ ಸಂಶೋಧನೆ.

ಶಿಕ್ಷಣ ಹಕ್ಕು: ಅರ್ಧ ಸತ್ಯ

ಶಿಕ್ಷಣ ಇಲ್ಲಿ ಮೂಲಭೂತ ಹಕ್ಕು ಆಗಿಲ್ಲ ಮತ್ತು ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಶೇ 25ರಷ್ಟು ಮೀಸಲಾತಿಯನ್ನು ಕಲ್ಪಿಸಿಲ್ಲ ಆದರೂ ಪ್ರೌಢಶಾಲೆಗಳಲ್ಲಿನ ಒಟ್ಟು ದಾಖಲಾತಿ ದೇಶದ ಇತರೆ ರಾಜ್ಯಗಳಿಗಿಂತ ಉತ್ತಮವಾಗಿದೆ. 2015–16ರ ವರದಿ ಪ್ರಕಾರ ಇಲ್ಲಿನ ದಾಖಲಾತಿ ಶೇ 58.6ರಷ್ಟಿದೆ. (ದೇಶದ ಒಟ್ಟು ಸರಾಸರಿ ದಾಖಲಾತಿ ಪ್ರಮಾಣ ಶೇ 56.6) ಶಿಕ್ಷಣಕ್ಕಾಗಿ ಇಲ್ಲಿ ಪ್ರತ್ಯೇಕ ಕಾನೂನು ಇದೆ. 14ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಇಲ್ಲಿ ಜಾರಿಯಲ್ಲಿದೆ.

ಎಸ್‌.ಸಿ/ಎಸ್‌.ಟಿ ಕಾಯ್ದೆ ಅನ್ವಯವಾಗುವುದಿಲ್ಲ: ಸತ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವುದಿಲ್ಲ ಎಂಬ ಬಗ್ಗೆ ಮೋದಿ ಅವರು ಹೇಳಿದ್ದು ಸರಿಯಿದೆ.

ಸಫಾಯಿ ಕರ್ಮಚಾರಿಗಳ ಹಕ್ಕು: ಸತ್ಯ

ಸಫಾಯಿ ಕರ್ಮಚಾರಿಗಳ ಪುನರ್ವಸತಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಜಾರಿಗೆ ತರಲಾದ ಎನ್‌ಸಿಎಸ್‌ಕೆ ಕಾಯ್ದೆ1993 ( ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಕಾಯ್ದೆ) ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.

ಮತದಾನದ ಹಕ್ಕು: ಸತ್ಯ

ದೇಶ ವಿಭಜನೆ ನಂತರ ಭಾರತಕ್ಕೆ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಅನೇಕರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿದೆ. ಆದರೆ, ಅವರು ರಾಜ್ಯ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ’ ಎಂದು ಮೋದಿ ಹೇಳಿದ್ದರು. ಪಶ್ಚಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಕುರಿತು ಮೋದಿ ಅವರು ಹೇಳಿದ ಈ ಹೇಳಿಕೆ ಸರಿಯಾಗಿದೆ.

2017ರ ಎನ್‌ಡಿಟಿವಿ ವರದಿ ಮಾಡಿದ ಪ್ರಕಾರ, ಪಾಕ್‌ ಆಕ್ರಮಿತ ಕಾಶ್ಮೀರದಿಂದ ಬಂದ32 ಸಾವಿರ ಕುಟುಂಬಗಳು ಹಾಗೂ ಪಶ್ಚಿಮ ಕಾಶ್ಮೀರದಿಂದ ಬಂದ 20 ಸಾವಿರ ನಿರಾಶ್ರಿತಕುಟುಂಬಗಳುಜಮ್ಮು–ಕಾಶ್ಮೀರದಲ್ಲಿವೆ.

ಅಲ್ಪಸಂಖ್ಯಾತ ಹಕ್ಕುಗಳು: ಸತ್ಯ

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ 1992ಜಮ್ಮು–ಕಾಶ್ಮೀರದಲ್ಲಿ ಅನ್ವಯವಾಗುವುದಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಈ ಕಾಯ್ದೆ ರೂಪಿಸಲಾಗಿದೆ. ಜಮ್ಮು–ಕಾಶ್ಮೀರದ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಮತ್ತು ಇತರೆ ಸಮುದಾಯಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ನೆರವುಗಳನ್ನು ಕಲ್ಪಿಸಿದೆ. ಮುಸ್ಲೀಮೇತರ ಸಮುದಾಯದವರು ( ಶೇ 31.7ರಷ್ಟು ಜನಸಂಖ್ಯೆ) ಇಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT