‘ಕೈ’ ಮುನ್ನೆಲೆಗೆ ಪ್ರಿಯಾಂಕಾ; ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್‌

7

‘ಕೈ’ ಮುನ್ನೆಲೆಗೆ ಪ್ರಿಯಾಂಕಾ; ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್‌

Published:
Updated:
Prajavani

ನವದೆಹಲಿ: ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್‌ ಪಕ್ಷವು, ನೆಹರೂ–ಗಾಂಧಿ ಕುಟುಂಬದ ಇನ್ನೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಖ್ಯವಾಹಿನಿ ರಾಜಕಾರಣಕ್ಕೆ ಕರೆ ತಂದಿದೆ.

ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು ಉತ್ತರ ಪ್ರದೇಶದ ಪೂರ್ವದ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಈ ಮೂಲಕ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಭಾರಿ ಸ್ಪರ್ಧೆ ಒಡ್ಡುವ ಇಂಗಿತ ವ್ಯಕ್ತಪಡಿಸಿದೆ. 

ಪ್ರಿಯಾಂಕಾ (47) ಅವರು ಫೆಬ್ರುವರಿ ಮೊದಲ ವಾರದಲ್ಲಿ ಹೊಸ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳಿರುವ ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ನೇಮಕ ಭಾರಿ ಕಾರ್ಯತಂತ್ರ ಎಂದೇ ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಭಾವ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದೆ. ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡದಿರುವುದು ಆ ಪಕ್ಷದ ಪರಿಸ್ಥಿತಿಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಈ ಎಲ್ಲದರಿಂದ ಬಿಡಿಸಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವುದು ಪ್ರಿಯಾಂಕಾ ಅವರಿಗೆ ಸಾಧ್ಯವಾಗ
ಬಹುದು ಎನ್ನಲಾಗುತ್ತಿದೆ. 

ಹರಿಯಾಣ ಮತ್ತು ರಾಜಸ್ಥಾನದಲ್ಲಿ ಭೂ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ರಾಬರ್ಟ್‌ ವಾದ್ರಾ ಅವರ ಹೆಂಡತಿಯಾಗಿರುವ ಪ್ರಿಯಾಂಕಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಿಯಾಂಕಾ ನೇಮಕವು ಉತ್ತರ ಪ್ರದೇಶದಲ್ಲಿ ಹೊಸ ಚಿಂತನೆಗೆ ಚಾಲನೆ ಕೊಡಬಹುದು ಮತ್ತು ಅಲ್ಲಿನ ರಾಜಕಾರಣದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣ ಆಗಬಹುದು ಎಂದು ರಾಹುಲ್‌ ಹೇಳಿದ್ದಾರೆ. 

ಮಧ್ಯ ಪ್ರದೇಶದ ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದು ಇನ್ನೊಂದು ಮಹತ್ವದ ನಿರ್ಧಾರವಾಗಿದೆ. ಈವರೆಗೆ, ಉತ್ತರ ಪ್ರದೇಶದ ಉಸ್ತುವಾರಿಯನ್ನು ಗುಲಾಂ ನಬಿ ಆಜಾದ್‌ ನೋಡಿಕೊಳ್ಳುತ್ತಿದ್ದರು. ಅವರನ್ನು ಈಗ ಹರಿಯಾಣ ಉಸ್ತುವಾರಿಯಾಗಿ ವರ್ಗಾಯಿಸಲಾಗಿದೆ. 

ರಾಹುಲ್‌ ವೈಫಲ್ಯದ ಒಪ್ಪಿಗೆ: ಬಿಜೆಪಿ

‘ರಾಹುಲ್‌ ವಿಫಲರಾಗಿದ್ದಾರೆ ಮತ್ತು ಅವರಿಗೆ ಕುಟುಂಬದ ಊರುಗೋಲು ಬೇಕಾಗಿದೆ ಎಂಬುದನ್ನು ಕಾಂಗ್ರೆಸ್‌ ಬಹಿರಂಗವಾಗಿ ಒಪ್ಪಿಕೊಂಡಿದೆ. ಮಹಾ ಮೈತ್ರಿಕೂಟವು ಅವರನ್ನು ತಿರಸ್ಕರಿಸಿದ್ದರಿಂದ ಕುಟುಂಬದಲ್ಲಿನ ಮೈತ್ರಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

ವೇಣುಗೋಪಾಲ್‌ಗೆ ಬಡ್ತಿ

ಲೋಕಸಭೆ ಚುನಾವಣೆಗೆ ಮುಂಚೆ ಕಾಂಗ್ರೆಸ್‌ನಲ್ಲಿ ಹಲವು ಆಂತರಿಕ ಬದಲಾವಣೆಗಳನ್ನು ರಾಹುಲ್‌ ಅವರು ಮಾಡಿದ್ದಾರೆ. ಕೆ.ಸಿ. ವೇಣುಗೋಪಾಲ್‌ ಅವರಿಗೆ ಪಕ್ಷದ ಸಂಘಟನಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿದೆ. ಈವರೆಗೆ ಈ ಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಇದ್ದರು. ಈಗ ಅವರು ರಾಜಸ್ಥಾನ ಮುಖ್ಯಮಂತ್ರಿಯಾಗಿದ್ದಾರೆ. ವೇಣುಗೋಪಾಲ್‌ ಅವರು ಕರ್ನಾಟಕದ ಉಸ್ತುವಾರಿಯಾಗಿಯೂ ಮುಂದುವರಿಯಲಿದ್ದಾರೆ.

* ಕುಟುಂಬವೇ ಪಕ್ಷವಾಗಿರುವ ಹಲವು ನಿದರ್ಶನಗಳಿವೆ. ಬಿಜೆಪಿಯಲ್ಲಿ ಪಕ್ಷವೇ ಕುಟುಂಬ. ಕಾರ್ಯಕರ್ತರಿಗೆ ಬೇಕಾದಂತೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ

-ನರೇಂದ್ರ ಮೋದಿ, ಪ್ರಧಾನಿ

* ಪ್ರಿಯಾಂಕಾ ನನ್ನ ಜತೆಗೆ ಕೆಲಸ ಮಾಡುತ್ತಾಳೆ ಎಂಬುದು ಸಂತಸದ ವಿಚಾರ. ಕಾಂಗ್ರೆಸ್‌ ಪಕ್ಷವು ಮುಂದಡಿ ಇಟ್ಟು ಆಡುತ್ತದೆಯೇ ಹೊರತು ಹಿಂದಡಿ ಇಟ್ಟು ಅಲ್ಲ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

* ಪ್ರಿಯಾಂಕಾ ವರ್ಚಸ್ಸಿನಿಂದ ಕಾಂಗ್ರೆಸ್‌ಗೆ ಲಾಭ ಆಗಬಹುದು. ಮತ ಹಾಕಲು ಹೋಗುವ ಜನರು ಪ್ರಿಯಾಂಕಾ ಅವರಲ್ಲಿ ಅಜ್ಜಿ ಇಂದಿರಾ ಗಾಂಧಿಯನ್ನು ಕಾಣುತ್ತಾರೆ

-ಮನೀಷಾ ಕಾಯಂದೆ, ಶಿವಸೇನಾ ವಕ್ತಾರೆ

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !