ಸೋಮವಾರ, ಆಗಸ್ಟ್ 2, 2021
21 °C
ಹಗರಣಕ್ಕೆ ಅಂತರರಾಷ್ಟ್ರೀಯ ಸಂಚಿನ ಬಣ್ಣ lಪಾಕಿಸ್ತಾನ–ಚೀನಾ ಹೆಸರು ತೇಲಿಬಿಟ್ಟ ಬಿಜೆಪಿ

ರಫೇಲ್‌ ಒಪ್ಪಂದ ರದ್ದು: ಕೇಂದ್ರ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಬಹುಕೋಟಿ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟವಾಗಿ ಹೇಳಿದೆ.

ರಫೇಲ್‌ ಹಗರಣದ ತನಿಖೆ ಕೋರಿ ಕಾಂಗ್ರೆಸ್‌ ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ಮೊರೆ ಹೋದ ಬೆನ್ನಲ್ಲೇ ಕೇಂದ್ರ ಸರ್ಕಾರದ ನಿರ್ಧಾರ ಹೊರಬಿದ್ದಿದೆ.

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಒಲಾಂಡ್‌ ಹೊಸ ಬಾಂಬ್ ಸಿಡಿಸಿದ ನಂತರ ಬಿಜೆಪಿ ಮತ್ತು ಕೇಂದ್ರ ಸರ್ಕಾರ ‘ಭಾವನಾತ್ಮಕ ಯುದ್ಧ’ದ ತಂತ್ರಕ್ಕೆ ಮೊರೆ ಹೋಗಿವೆ.

ಸೇನೆಗೆ ಯುದ್ಧ ವಿಮಾನಗಳ ತುರ್ತು ಅಗತ್ಯವಿರುವುದರಿಂದ ಒಪ್ಪಂದ ರದ್ದು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಜೇಟ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಒಲಾಂಡ್‌ ಅವರ ಹೇಳಿಕೆ ವೈರುಧ್ಯದಿಂದ ಕೂಡಿದೆ. ಹೀಗಾಗಿ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಉದ್ಯಮಿಯನ್ನು ಪಾಲುದಾರರನ್ನಾಗಿ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಭಾವ ಬೀರಿತ್ತು ಎಂದು ಫ್ರಾನ್ಸ್‌ ಮಾಜಿ ಅಧ್ಯಕ್ಷರು ಬಹಿರಂಗ ಪಡಿಸಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಅಂತರ ರಾಷ್ಟ್ರೀಯ ಸಂಚು: ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಫೇಲ್‌ ಹಗರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಂಚು ಎಂದು ಕೇಂದ್ರ ಸರ್ಕಾರ, ಬಿಜೆಪಿ ಬಿಂಬಿಸಿವೆ.  

ಹಗರಣದಲ್ಲಿ ಇದೇ ಮೊದಲ ಬಾರಿಗೆ ದೇಶದ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಕಾಂಗ್ರೆಸ್‌ ಪಕ್ಷ ಪಾಕಿಸ್ತಾನ ಮತ್ತು ಚೀನಾ ಜತೆ ಸೇರಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಇದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಒಲಾಂಡ್‌ ಕೂಡ ಶಾಮೀಲಾಗಿದ್ದಾರೆ ಎಂದು ಹೇಳಿದೆ.

ಕಾಕತಾಳೀಯವಲ್ಲ: ರಫೇಲ್‌ ಹಗರಣಕ್ಕೆ ಅಂತರರಾಷ್ಟ್ರೀಯ ಆಯಾಮವಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿಗಳು ಹೊರಬೀಳುತ್ತವೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಇದು ಕಾಕತಾಳೀಯವಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸಂದೇಹ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಸಚಿವ ಗಜೇಂದ್ರ ಶೇಖಾವತ್‌ ಅವರು ಗಾಂಧಿ ಕುಟುಂಬದ ಹೆಸರನ್ನು ಈ ಹಗರಣದಲ್ಲಿ ಎಳೆ ತಂದಿದ್ದಾರೆ.

ರಾಬರ್ಟ್‌ ವಾದ್ರಾ ಅವರ ಸ್ನೇಹಿತ ಹಾಗೂ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್‌ ಭಂಡಾರಿ ಅವರನ್ನು ಪಾಲುದಾರ ಎಂದು ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಒಪ್ಪಿಕೊಳ್ಳದ ಕಾರಣ ಯುಪಿಎ ಸರ್ಕಾರ ರಫೇಲ್‌ ಒಪ್ಪಂದ ರದ್ದುಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಮುಂದಿನ ಪ್ರಧಾನಿ ಎಂದು ಪಾಕಿಸ್ತಾನದ ಮಾಜಿ ಸಚಿವ ರೆಹಮಾನ್‌ ಮಲಿಕ್‌ ಟ್ವೀಟ್‌ ಮಾಡಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕೈವಾಡ ಅಲ್ಲಗಳೆಯುವಂತಿಲ್ಲ ಎಂದು ಶೇಖಾವತ್‌ ಶಂಕೆ ವ್ಯಕ್ತಪಡಿಸಿದ್ದಾರೆ.

‘ರಫೇಲ್‌ ಒಪ್ಪಂದದಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ಇದನ್ನು ಅಸ್ತ್ರವಾಗಿ ಬಳಸುತ್ತಿದೆ’ ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಬಳಸಿಕೊಂಡು ಪಾಕಿಸ್ತಾನ, ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ದೂರಿದ್ದಾರೆ.

ಸಿವಿಸಿ ಮೊರೆ ಹೋದ ಕಾಂಗ್ರೆಸ್‌
ನವದೆಹಲಿ:
ರಫೇಲ್‌ ಹಗರಣದ ತನಿಖೆ ಕೋರಿ ಕಾಂಗ್ರೆಸ್‌ ಸೋಮವಾರ ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ಮೊರೆ ಹೋಗಿದೆ.

ಒಪ್ಪಂದದ ಪ್ರತಿ ಕಡತ ಮತ್ತು ದಾಖಲೆಗಳನ್ನು ಎಳೆಎಳೆಯಾಗಿ ಪರೀಕ್ಷಿಸುವಂತೆ ಮನವಿ ಮಾಡಿದೆ.

ಕೇಂದ್ರೀಯ ಜಾಗೃತ ಆಯುಕ್ತ ಕೆ.ವಿ. ಚೌಧರಿ ಅವರನ್ನು ಸೋಮವಾರ ಭೇಟಿ ಮಾಡಿದ ಕಾಂಗ್ರೆಸ್‌ ನಿಯೋಗ ಎರಡು ಡಜನ್‌ ದಾಖಲೆ ಸಲ್ಲಿಸಿದೆ. ಅಲ್ಲದೇ ತಕ್ಷಣ ಎಫ್ಐಆರ್‌ ದಾಖಲಿಸುವಂತೆಯೂ ಒತ್ತಾಯಿಸಿದೆ.

ಪ್ರಧಾನಿ ಮೋದಿ ಸರ್ಕಾರ ಸಾಕ್ಷ್ಯಗಳನ್ನು ನಾಶಪಡಿಸುವ ಆತಂಕವಿದೆ. ಒಪ್ಪಂದಕ್ಕೆ ಸಂಬಂಧಿಸಿದ ಕಡತ ಮತ್ತು ದಾಖಲೆ ವಶಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ನಾಯಕ ಆನಂದ್ ಶರ್ಮಾ ತಿಳಿಸಿದ್ದಾರೆ.

ಯುಪಿಎ ಸರ್ಕಾರದಲ್ಲಿ ನಿಗದಿಯಾಗಿದ್ದ ದರಕ್ಕಿಂತ ಮೂರು ಪಟ್ಟು ಅಧಿಕ ಬೆಲೆ ತೆತ್ತು ಸರ್ಕಾರ ರಫೇಲ್‌ ಯುದ್ಧ ವಿಮಾನ ಖರೀದಿಸುತ್ತಿದೆ. ಮೋದಿ ಅವರು ತಮ್ಮ ಮಿತ್ರ ಹಾಗೂ ಉದ್ಯಮಿ ಅನಿಲ್‌ ಅಂಬಾನಿ ಅವರಿಗೆ ಲಾಭ ಮಾಡಿಕೊಡಲು ಒಪ್ಪಂದ ಬದಲಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಸೈನಿಕರ ಬೆನ್ನಿಗೆ ಇರಿದ ಚೌಕಿದಾರ’
ಅಮೇಠಿ:
ಈ ದೇಶದ ಚೌಕಿದಾರ (ಪ್ರಧಾನಿ ಮೋದಿ) ತಮ್ಮ ಉದ್ಯಮಿ ಮಿತ್ರ ಅನಿಲ್‌ ಅಂಬಾನಿ ಅವರಿಗೆ ನೆರವು ನೀಡಲು ಸೈನಿಕರ ಬೆನ್ನಿಗೆ ಚೂರಿ ಇರಿದಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

*
ಸರ್ಕಾರ ರಫೇಲ್‌ ಯುದ್ಧ ಎದುರಿಸಲು ಸಿದ್ಧವಾಗಿದೆ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಿದೆ. ಸರ್ಕಾರಕ್ಕೆ ಕಳಂಕ ತರುವ ಕಾಂಗ್ರೆಸ್‌ ಯತ್ನ ಸಫಲವಾಗದು.
-ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

*
ರಫೇಲ್‌ ಹಗರಣ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಪಕ್ಷ ಭಾರತೀಯ ಸೈನ್ಯದ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ.
-ಬಿಜೆಪಿ

*
ರಫೇಲ್‌ ಒಪ್ಪಂದದ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ.
-ಕಾಂಗ್ರೆಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು