ಮೋದಿ ದೇಶದ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದ ಭಾಗಿದಾರ: ರಾಹುಲ್‌ ವಾಗ್ದಾಳಿ

7

ಮೋದಿ ದೇಶದ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದ ಭಾಗಿದಾರ: ರಾಹುಲ್‌ ವಾಗ್ದಾಳಿ

Published:
Updated:

ಬೀದರ್‌: ‘ಬೆಂಗಳೂರಿನ ಎಚ್‌ಎಎಲ್‌ 70 ವರ್ಷಗಳಿಂದ ವಿಮಾನ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನದಿಂದ ಫ್ರಾನ್ಸ್‌ ಜತೆ ರೆಫೇಲ್‌ ಯುದ್ಧ ವಿಮಾನ ಖರೀದಿಯ ಒಪ್ಪಂದ ಮಾಡಿಕೊಂಡಿದ್ದಾರೆ. ದೇಶದ ಚೌಕಿದಾರ್‌ ಎಂದು ಹೇಳಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜನಧ್ವನಿ ಸಮಾವೇಶದಲ್ಲಿ ಅವರು ಮೋದಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದರು.

‘ದೇಸಿಯ ತಂತ್ರಜ್ಞಾನ ಬಳಸಿ ಜಾಗ್ವಾರ್‌, ಹಾಕ್ ಯುದ್ಧ ವಿಮಾನಗಳನ್ನು ತಯಾರಿಸಿದ ಸಾರ್ವಜನಿಕ ಕಂಪನಿಯೊಂದಿಗೆ ಹಿಂದಿನ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ನರೇಂದ್ರ ಮೋದಿ ಅವರು 10 ಹತ್ತು ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅನಿಲ ಅಂಬಾನಿ ಅವರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡರು. ಸಂಸತ್ತಿನಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆಸಿರುವ ಭ್ರಷ್ಟಾಚಾರ ಪ್ರಸ್ತಾಪಿಸಿದೆ. ಆದರೆ, ಮೋದಿ ಒಂದು ಶಬ್ದವನ್ನೂ ಮಾತನಾಡಲಿಲ್ಲ’ ಎಂದರು.

‘ರಹಸ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ದೇಶದ ಜನರಿಗೆ ಸುಳ್ಳು ಹೇಳಿದರು. ಆದರೆ ಫ್ರಾನ್ಸ್‌ ಅಧ್ಯಕ್ಷರು ಅದನ್ನು ಅಲ್ಲಗಳೆದರು. ಮೋದಿ ಅವರು ಜನರ ಹಣ ಕಳವು ಮಾಡಿ ಒಂದು ವಿಮಾನಕ್ಕೆ ತಲಾ ₹ 1,600 ಕೋಟಿ ಲೂಟಿ ಮಾಡಿ ಅನಿಲ ಅಂಬಾನಿಗೆ ಕೊಟ್ಟಿರುವುದು ಬಹಿರಂಗವಾಗಿದೆ’ ಎಂದು ಆರೋಪಿಸಿದರು.

‘ಯಾವುದೇ ವೇದಿಕೆಯಲ್ಲಿ ನಿಲ್ಲಿಸಿದರೂ ರಫೇಲ್‌ ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ದೇಶದ ಯುವಕರು, ರೈತರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೋದಿ ಅವರಿಗೆ ಧೈರ್ಯ ಇದ್ದರೆ ನನ್ನ ಕಣ್ಣಲ್ಲಿ ಕಣ್ಣು ಇಟ್ಟು ಮಾತನಾಡಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರ ಅಧಿಕ ಮೊತ್ತದ ಹಳೆಯ ನೋಟುಗಳನ್ನು ರದ್ದುಪಡಿಸಿ ಗಬ್ಬರ್‌ಸಿಂಗ್‌ ತೆರಿಗೆ ವಿಧಿಸಿದೆ. ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಒಂದೇ ಜಿಎಸ್‌ಟಿಯನ್ನಷ್ಟೇ  ವಿಧಿಸಲಿದೆ. ಹಲವು ಬಗೆಯ ತೆರಿಗೆ ಭಾರದಿಂದ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ಒದಗಿಸಲಿದೆ’ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಸಿದ್ಧವಿಲ್ಲ. ಆದರೆ, 15 ಜನ ಉದ್ಯಮಿಗಳ ₹ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಮೋದಿ ಅವರು 15 ಜನರ ಪ್ರಧಾನಿ ಅಲ್ಲ; ದೇಶದ ಪ್ರಧಾನಿ ಎನ್ನುವುದನ್ನು ಅರಿತುಕೊಳ್ಳಬೇಕು. ಬೇಟಿ ಬಚಾವೋ, ಬೇಟಿ ಪಢಾವೋ ಎಂದು ಘೋಷಣೆ ಕೊಡುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಕಾರ್ಯದರ್ಶಿ ಸಾಕೆ ಶೈಲಜನಾಥ್‌, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ, ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಎಂ.ಬಿ.ಪಾಟೀಲ, ಎಚ್.ಕೆ.ಪಾಟೀಲ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !