ಶುಕ್ರವಾರ, ಏಪ್ರಿಲ್ 10, 2020
19 °C

ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ ರೈಲ್ವೆಯ ತತ್ಕಾಲ್ ಟಿಕೆಟ್

ಪಿಟಿಐ Updated:

ಅಕ್ಷರ ಗಾತ್ರ : | |

Railway

ನವದೆಹಲಿ: ರೈಲ್ವೆ ಸುರಕ್ಷಾ ದಳವು (ಆರ್‌ಪಿಎಫ್) ತತ್ಕಾಲ್‌ ಸೇವೆಯಡಿ ರೈಲು ಟಿಕೆಟ್‌ಗಳನ್ನು ಬ್ಲಾಕ್‌ ಮಾಡಲು ಬಳಸಲಾಗುತ್ತಿದ್ದ ಅಕ್ರಮ ಸಾಫ್ಟ್‌ವೇರ್‌ಗಳನ್ನ ಕಿತ್ತು ಹಾಕಿದ್ದು ಮಾತ್ರವಲ್ಲದೆ  ಟಿಕೆಟ್ ಬ್ಲಾಕ್ ಮಾಡುತ್ತಿದ್ದ 60 ಏಜೆಂಟ್‌ಗಳನ್ನು ಬಂಧಿಸಿದೆ. ಹಾಗಾಗಿ ಇನ್ನು ಮುಂದೆ ತತ್ಕಾಲ್ ಸೇವೆಯಡಿ ಹೆಚ್ಚಿನ ಟಿಕೆಟ್‌ಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ.

ತತ್ಕಾಲ್ ಸೇವೆಯಡಿ ಬುಕಿಂಗ್ ಆರಂಭಿಸಿದ ಕೂಡಲೇ ಟಿಕೆಟ್‌ಗಳು  ಕಾಣೆಯಾಗುವಂತೆ ಮಾಡುವ ಸಾಫ್ಟ್‌ವೇರ್‌ಗಳನ್ನು ಕಿತ್ತೊಗೆಯಲಾಗಿದೆ ಎಂದು  ಆರ್‌ಪಿಎಫ್ ಮಹಾ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ. 

ಬಂಧಿತರಾದವರಲ್ಲಿ ಕೋಲ್ಕತ್ತ ಮೂಲದ  ವ್ಯಕ್ತಿಗೆ ಬಾಂಗ್ಲಾದೇಶದ ಉಗ್ರ ಸಂಘಟನೆ  ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಯುಎಂಬಿ) ಜತೆ ನಂಟು ಇದೆ ಎಂದು ಶಂಕಿಸಲಾಗಿದೆ. ಇ- ಟಿಕೆಟ್ ದಂಧೆಗೆ ಉಗ್ರ ಸಂಘಟನೆಗಳಿಗೆ ಹಣ ಒದಗಿಸುವ ಜಾಲದೊಂದಿಗೆ ನಂಟು ಇದೆ ಎಂದು ಆರ್‌ಪಿಎಫ್ ಮಹಾ ನಿರ್ದೇಶಕರು ಜನವರಿಯಲ್ಲಿ ಹೇಳಿದ್ದರು.

ಎಎನ್‌ಎಂಸ್, ಎಂಎಸಿ ಮತ್ತು ಜಾಗ್ವಾರ್ ಮೊದಲಾದ ಅಕ್ರಮ ಸಾಫ್ಟ್‌ವೇರ್‌ಗಳು ಐಆರ್‌ಸಿಟಿಸಿ ಲಾಗಿನ್ ಕ್ಯಾಪ್ಚಾ , ಬುಕಿಂಗ್ ಕ್ಯಾಪ್ಚಾ ಮತ್ತು  ಟಿಕೆಟ್ ಬುಕಿಂಗ್ ಮಾಡುವಾಗ ಸಿಗುವ ಬ್ಯಾಂಕ್ ಒಟಿಪಿ ಬಳಸದೆಯೇ ಟಿಕೆಟ್ ಬುಕಿಂಗ್ ಮಾಡುತ್ತಿದ್ದವು. ಸಾಮಾನ್ಯ ಪ್ರಯಾಣಿಕರೊಬ್ಬರು ತತ್ಕಾಲ್ ಸೇವೆಯಡಿ ಟಿಕೆಟ್ ಪಡೆಯಬೇಕಾದರೆ ಇದೆಲ್ಲ ಪ್ರಕ್ರಿಯೆಗಳನ್ನು ಅನುಸರಿಸಲೇಬೇಕು.

ಸಾಮಾನ್ಯವಾಗಿ ಬುಕಿಂಗ್ ಪ್ರಕ್ರಿಯೆಗೆ ಬೇಕಾಗುವ ಸಮಯ 2.55 ನಿಮಿಷ. ಆದರೆ ಸಾಫ್ಟ್‌ವೇರ್ ಬಳಸಿ ಬುಕಿಂಗ್ ಮಾಡುವುದಾದರೆ 1.48 ನಿಮಿಷ  ಸಾಕು . 

ಕಳೆದ ಎರಡು ತಿಂಗಳಿನಿಂದ  ಏಜೆಂಟ್‌ಗಳಿಗೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ರೈಲ್ವೆ ಅನುಮತಿ ನೀಡುತ್ತಿಲ್ಲ.

ಅಕ್ರಮ ಸಾಫ್ಟ್‌ವೇರ್ ಬಳಸಿ ಇನ್ನು ಮುಂದೆ ಒಂದೇ ಒಂದು ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿರುವ ಎಲ್ಲ ಸಮಸ್ಯೆಗಳನ್ನು ನಾವು ಪರಿಹರಿಸಿದ್ದೆವು ಎಂದು ಮಾಧ್ಯಮದವರಲ್ಲಿ ಮಾತನಾಡಿದ ಮಹಾ ನಿರ್ದೇಶಕರ ಹೇಳಿದ್ದಾರೆ. 

ಈ ಅಕ್ರಮ ಸಾಫ್ಟ್‌ವೇರ್‌ಗಳು ವರ್ಷಕ್ಕೆ ₹50 ಕೋಟಿ- ₹100 ಕೋಟಿಯ ವ್ಯವಹಾರ ಮಾಡುತ್ತಿದ್ದವು ಎಂದು ಕುಮಾರ್ ಹೇಳಿದ್ದಾರೆ.  ರೈಲಿನಲ್ಲಿ  ಪ್ರಯಾಣ ಮಾಡುವ ದಿನದ 24 ಗಂಟೆಗಳ ಮುನ್ನ ತತ್ಕಾಲ್ ಸೇವೆಯಡಿ ಟಿಕೆಟ್ ಸಿಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು