ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆ ಕೆನ್ನೆ ಸವರಿ ಕ್ಷಮೆ ಕೇಳಿದ ರಾಜ್ಯಪಾಲ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಮಹಿಳಾ ಪತ್ರಕರ್ತೆಯ ಕೆನ್ನೆ ಸವರಿ ಸುದ್ದಿಯಾದ ತಮಿಳುನಾಡು ರಾಜ್ಯಪಾಲ ಬನವಾರಿಲಾಲ್‌ ಪುರೋಹಿತ್‌ ತಮ್ಮ ವರ್ತನೆಗಾಗಿ ಬುಧವಾರ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಸುಬ್ರಮಣಿಯನ್‌ ಎಂಬ ಪತ್ರಕರ್ತೆಯ ಕೆನ್ನೆಯನ್ನು ಪುರೋಹಿತ್‌ ಎಲ್ಲರ ಎದುರು ಸವರಿದ್ದರು.

ರಾಜ್ಯಪಾಲರ ಈ ವರ್ತನೆಯಿಂದ ತೀವ್ರ ಮಜುಗರಕ್ಕೀಡಾಗಿದ್ದ ಪತ್ರಕರ್ತೆ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯಪಾಲರಿಗೆ ಕಳಿಸಿದ ಇ–ಮೇಲ್‌ನಲ್ಲಿ ‘ನಿಮ್ಮ ಈ ವರ್ತನೆ ನನಗೆ ಮುಜುಗರ ತಂದಿದೆ’ ಎಂದು ಅಸಮಾಧಾನ ಹೊರಹಾಕಿದ್ದರು.

70 ವರ್ಷದ ರಾಜ್ಯಪಾಲರ ವರ್ತನೆ ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಅಲ್ಲದೇ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಭಾರಿ ಸದ್ದು ಮಾಡಿತ್ತು.

ಮಂಗಳವಾರ ರಾತ್ರಿ ಚೆನ್ನೈ ಪ್ರೆಸ್‌ ಕ್ಲಬ್‌ನಲ್ಲಿ ಸಭೆ ಸೇರಿದ್ದ 200ಕ್ಕೂ ಹೆಚ್ಚು ಪತ್ರಕರ್ತರು ರಾಜ್ಯಪಾಲರ ವರ್ತನೆ ಖಂಡಿಸಿದ್ದರು.

ಮಹಿಳಾ ಪತ್ರಕರ್ತೆಯೊಂದಿಗಿನ ಅಸಭ್ಯ ವರ್ತನೆಗೆ ಬೇಷರತ್‌ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.

ಡಿಎಂಕೆ ಪ್ರತಿಭಟನೆ: ರಾಜಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದ ಡಿಎಂಕೆ ಕಾರ್ಯಕರ್ತರು, ಮಹಿಳಾ ಪತ್ರಕರ್ತೆಯ ಜತೆ ಅಸಭ್ಯವಾಗಿ ವರ್ತಿಸಿದ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜ್ಯವನ್ನು ಬೆಚ್ಚಿಬೀಳಿಸಿದ್ದ ವಿಶ್ವವಿದ್ಯಾಲಯ ಲೈಂಗಿಕ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ವಿವರಣೆ ನೀಡಲು ರಾಜ್ಯಪಾಲರು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯ ವೇಳೆ ಈ ಅನಿರೀಕ್ಷಿತ ಘಟನೆ ನಡೆದಿತ್ತು. ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳಿಗೆ ಲೈಂಗಿಕವಾಗಿ ಸಹಕರಿಸುವಂತೆ ವಿದ್ಯಾರ್ಥಿನಿಯರನ್ನು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಮಹಿಳಾ ಕಾಲೇಜಿನ ಉಪನ್ಯಾಸಕಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ಉಪನ್ಯಾಸಕಿಗೆ ರಾಜಭವನದೊಂದಿಗೆ ನಂಟಿದೆ ಎಂಬ ವಿಷಯ ತನಿಖೆಯ ವೇಳೆ ಬಹಿರಂಗವಾಗಿತ್ತು. ಸುದ್ದಿಗೋಷ್ಠಿ ಮುಗಿಸಿ ಹೊರಡಲು ಅಣಿಯಾಗಿದ್ದ ರಾಜ್ಯಪಾಲರನ್ನು ಪತ್ರಕರ್ತೆ ಈ ಕುರಿತು ಪ್ರಶ್ನಿಸಿದ್ದರು.

‘ನನ್ನ ಮೊಮ್ಮಗಳ ಸಮಾನ’
‘ಪತ್ರಕರ್ತೆ ನನ್ನ ಮೊಮ್ಮಗಳ ಸಮಾನ ಎಂದು ಭಾವಿಸಿ ಪ್ರೀತಿಯಿಂದ ಆಕೆಯ ಗಲ್ಲ ಮುಟ್ಟಿದೆ. ಪತ್ರಕರ್ತೆಯಾಗಿ ಆಕೆಯ ವೃತ್ತಿಪರತೆ ಮತ್ತು ಕೇಳಿದ ಪ್ರಶ್ನೆಗೆ ಮೆಚ್ಚುಗೆ ಸೂಚಿಸಲು ಆ ರೀತಿ ಪ್ರತಿಕ್ರಿಯಿಸಿದೆ’ ಎಂದು ರಾಜ್ಯಪಾಲರು ಸಮಜಾಯಿಷಿ ಕೊಟ್ಟಿದ್ದಾರೆ.

ರಾಜಭವನದ ಅಧಿಕೃತ ‘ಲೆಟರ್‌ ಹೆಡ್‌’ನಲ್ಲಿ ಲಿಖಿತ ಕ್ಷಮಾಪಣೆ ಕೋರಿ ರಾಜ್ಯಪಾಲರು ಬರೆದ ಪತ್ರವನ್ನು ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್‌ ಬಹಿರಂಗಗೊಳಿಸಿದ್ದಾರೆ.

‘ಈ ಘಟನೆಯಿಂದ ನಿಮಗೆ ನೋವಾಗಿದೆ ಎಂಬ ವಿಷಯ ನಿಮ್ಮ ಇ–ಮೇಲ್‌ನಿಂದ ತಿಳಿಯಿತು. ನಾನೂ ಪತ್ರಿಕಾರಂಗದಲ್ಲಿ 40 ವರ್ಷ ಕೆಲಸ ಮಾಡಿದವನು’ ಎಂದು ಪುರೋಹಿತ್‌ ಹೇಳಿದ್ದಾರೆ.

‘ಹಲವು ಬಾರಿ ಮುಖ ತೊಳೆದೆ’
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲರು ಕೆನ್ನೆ ಸವರಿದ ಬಳಿಕ ಹಲವು ಬಾರಿ ಮುಖತೊಳೆದುಕೊಂಡರೂ ಸಮಾಧಾನವಾಗಲಿಲ್ಲ. ಈಗಲೂ ಆ ಘಟನೆ ಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಮುಜುಗರ ಅನುಭವಿಸುತ್ತಿದ್ದೇನೆ ಎಂದು ಪತ್ರಕರ್ತೆ ಲಕ್ಷ್ಮಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯಪಾಲರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮಹಿಳೆಯ ಒಪ್ಪಿಗೆ ಇಲ್ಲದೆ ಆಕೆಯ ಕೆನ್ನೆ ಮುಟ್ಟುವುದು ಎಷ್ಟು ಸರಿ. ನಿಜಕ್ಕೂ ಅವರ ಈ ನಡವಳಿಕೆ ಅವರ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT