ರಾಜಸ್ಥಾನ ವಿಧಾನಸಭಾ ಚುನಾವಣೆ: ಮುಸ್ಲಿಮರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ

7
ಹಾಲಿ ಶಾಸಕರು, ಸಚಿವರಿಗೆ ಕೊಕ್‌ l 25 ಹೊಸ ಮುಖಗಳಿಗೆ ಮಣೆ

ರಾಜಸ್ಥಾನ ವಿಧಾನಸಭಾ ಚುನಾವಣೆ: ಮುಸ್ಲಿಮರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ

Published:
Updated:
Deccan Herald

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಭಾನುವಾರ ರಾತ್ರಿ ಬಿಡುಗಡೆ ಮಾಡಿದ 131 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ನೀಡಿಲ್ಲ.

ಮುಸ್ಲಿಂ ಸಮುದಾಯದ ಪ್ರಭಾವಿ ಸಚಿವ ಮತ್ತು ಶಾಸಕರ ಹೆಸರನ್ನು ಮೊದಲ ಪಟ್ಟಿಯಲ್ಲಿ ಕೈಬಿಡಲಾಗಿದೆ.

ಮುಖ್ಯಮಂತ್ರಿ ವಸುಧಂರಾ ರಾಜೆ ಸಿಂಧಿಯಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಾರಿಗೆ ಸಚಿವ ಯೂನುಸ್‌ ಖಾನ್‌ ಅವರಿಗೆ ಟಿಕೆಟ್‌ ನೀಡದಿರುವುದು ಅಚ್ಚರಿ ಮೂಡಿಸಿದೆ. ರಾಜೆ ಸಂಪುಟದಲ್ಲಿ ಖಾನ್‌ ಅತ್ಯಂತ ಪ್ರಭಾವಿಯಾಗಿದ್ದರು.

ಯೂನುಸ್‌ ಖಾನ್‌ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಪಕ್ಷದಲ್ಲಿಯೇ ಗೊಂದಲವಿದೆ. ಖಾನ್‌ ಫತೇ‍ಪುರ್‌ ಕ್ಷೇತ್ರದಿಂದ ಸ್ಪರ್ಧಿಸಲಿ ಎನ್ನುವುದು ರಾಜೆ ಸಲಹೆ. ಡಿಂಡ್ವಾನ್‌ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ದೆಹಲಿ ವರಿಷ್ಠರು ಸೂಚಿಸಿದ್ದಾರೆ.ಗೊಂದಲ ಬಗೆಹರಿದರೆ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ನಾಗೋರ್‌ ಶಾಸಕ ಹಬೀಬ್‌ ಉರ್‌ ರೆಹಮಾನ್‌ ಅವರಿಗೂ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಕೈತಪ್ಪಿದೆ. ಎರಡನೇ ಪಟ್ಟಿಯಲ್ಲೂ ಅವರಿಗೆ ಟಿಕೆಟ್‌ ದೊರೆಯುವುದು ಅನುಮಾನ ಎಂದು ಹೇಳಲಾಗಿದೆ.

ಒಂದು ವೇಳೆ ಬಿಜೆಪಿ ಟಿಕೆಟ್‌ ನೀಡದಿದ್ದರೆ ರೆಹಮಾನ್‌ ಪಕ್ಷ ತೊರೆಯುವ ಸಾಧ್ಯತೆ ಇದೆ. ಅವರು ಸ್ವತಂತ್ರರಾಗಿ ಇಲ್ಲವೇ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಾಲ್ವರು ಮುಸ್ಲಿಮರು ಸ್ಪರ್ಧಿಸಿದ್ದರು. ಆ ಪೈಕಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದರು.

ಹಾಲಿ ಶಾಸಕರು, ಸಚಿವರ ಕೈತಪ್ಪಿದ ಟಿಕೆಟ್‌: ಸಚಿವ ಯೂನುಸ್‌ ಖಾನ್‌ ಸೇರಿದಂತೆ ಐವರು ಹಾಲಿ ಸಚಿವರು ಮತ್ತು ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಕೈತಪ್ಪಿದೆ.

ಆರೋಗ್ಯ ಸಚಿವ ಹಾಗೂ ಐದು ಬಾರಿ ಶಾಸಕರಾಗಿರುವ ಕಾಳಿಚರಣ್‌ ಸರಾಫ್‌, ಕೈಗಾರಿಕಾ ಸಚಿವ ರಾಜ್‌ಪಾಲ್‌ ಸಿಂಗ್‌ ಶೇಖಾವತ್‌, ಕಾರ್ಮಿಕ ಸಚಿವ ಜಸ್ವಂತ್‌ ಸಿಂಗ್‌ ಯಾದವ್‌, ಶಾಸಕರಾದ ಕೆ.ಎಲ್‌. ಮೀನಾ, ಚಂದ್ರಕಾಂತ್‌ ಮೇಘ್ವಾಲ್‌ ಅವರಿಗೆ ನಿರಾಸೆಯಾಗಿದೆ.

ಹಾಲಿ ಶಾಸಕರು ಮತ್ತು ಸಚಿವರಿಗೆ ಟಿಕೆಟ್‌ ನೀಡುವ ಬಗ್ಗೆ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಒಮ್ಮತ ಮೂಡದಿರುವುದು ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೊದಲ ಪಟ್ಟಿಯಲ್ಲಿ ಹೊಸ ಮತ್ತು ಹಳೆಯ ಮುಖಗಳಿಗೆ ಸಮನಾಗಿ ಅವಕಾಶ ನೀಡಲಾಗಿದ್ದು, ಆರ್‌ಎಸ್ಎಸ್‌ ಹಿನ್ನೆಲೆಯುಳ್ಳವರಿಗೆ ಆದ್ಯತೆ ನೀಡಲಾಗಿದೆ.

ಮುಸ್ಲಿಂ ಶಾಸಕರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಕಠೋರ ಹಿಂದುತ್ವದ ಮಂತ್ರ ಪಠಿಸುವ ಸುಳಿವು ನೀಡಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ: ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಮಾಜಿ ಪ್ರಧಾನ ಕಾರ್ಯದರ್ಶಿ ಕುಲದೀಪ್‌ ಧನಕರ್‌ ಸೇರಿದಂತೆ ಹಲವರು ರಾಜೀನಾಮೆ ಸಲ್ಲಿಸಿದ್ದಾರೆ.

ಟಿಕೆಟ್‌ ವಂಚಿತ ಆಕಾಂಕ್ಷಿಗಳ ಬೆಂಬಲಿಗರು ಜೈಪುರ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ವರಿಷ್ಠರನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಗೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

 ಕಾಂಗ್ರೆಸ್‌ ಪಟ್ಟಿ ಅಂತಿಮ: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯೂ ಬಹುತೇಕ ಅಂತಿಮಗೊಂಡಿದ್ದು, ಶೇ 15–20ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿರುವುದರಿಂದ ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌,ಶೆಲ್ಜಾ ಕುಮಾರಿ ದೆಹಲಿಯಲ್ಲಿ ಬಿಡಾರ ಹೂಡಿದ್ದು, ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕಸರತ್ತು ನಡೆಸಿದ್ದಾರೆ.

ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್‌ 7ರಂದು ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಹೊರ ಬೀಳಲಿದೆ.

ಶರದ್‌–ಕುಶ್ವಾಹ ಭೇಟಿ

ನವದೆಹಲಿ: ಕೇಂದ್ರ ಸಚಿವ ಮತ್ತು ಎನ್‌ಡಿಎ ಅಂಗಪಕ್ಷ ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಅಧ್ಯಕ್ಷ ಉಪೇಂದ್ರ ಕುಶ್ವಾಹ ಸೋಮವಾರ ಜೆಡಿಯು ಬಂಡಾಯ ನಾಯಕ ಶರದ್‌ ಯಾದವ್‌ ಅವರನ್ನು ಭೇಟಿ ಮಾಡಿದ್ದಾರೆ.

ಉಭಯ ನಾಯಕರ ಭೇಟಿ ಬಿಹಾರದ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕುಶ್ವಾಹ ಅವರು ಎನ್‌ಡಿಎ ಮೈತ್ರಿ ತೊರೆಯಲಿದ್ದಾರೆ ಎಂಬ ಊಹಾಪೋಹಗಳಿಗೆ ಈ ಭೇಟಿ ಪುಷ್ಟಿ ನೀಡಿದೆ.

ಯಾದವ್‌ ನಿವಾಸಕ್ಕೆ ತೆರಳಿದ ಕುಶ್ವಾಹ ಬಿಹಾರ ಸದ್ಯದ ರಾಜಕೀಯ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಆರ್‌ಎಲ್‌ಎಸ್‌ಪಿ ಮೂಲಗಳು ತಿಳಿಸಿವೆ. ಇದೊಂದು ಸೌಜನ್ಯದ ಭೇಟಿ ಎಂದು ಕುಶ್ವಾಹ ಟ್ವೀಟ್‌ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಸ್ಥಾನ ಹೊಂದಾಣಿಕೆ ಮಾತುಕತೆ ನಂತರ ಕುಶ್ವಾಹ ಅವರು ಮುನಿಸಿಕೊಂಡಿದ್ದರು. ಆರ್‌ಎಲ್‌ಎಸ್‌ಪಿ ಇಬ್ಬರು ಶಾಸಕರು ಜೆಡಿಯು ಸೇರಲಿದ್ದಾರೆ ಎಂಬ ವರದಿಯಿಂದ ನಿತೀಶ್‌ ಕುಮಾರ್‌ ವಿರುದ್ಧ ಅವರು ಬಹಿರಂಗವಾಗಿ ಹರಿಹಾಯ್ದಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 31 ಸ್ಥಾನಗಳಲ್ಲಿ ಜಯಗಳಿಸಿತ್ತು. ಆ ಪೈಕಿ ಬಿಜೆಪಿ 22, ರಾಂ ವಿಲಾಸ್ ಪಾಸ್ವಾನ್‌ ಅವರ ಎಲ್‌ಜೆಪಿ ಆರು ಮತ್ತು ಆರ್‌ಎಲ್‌ಎಸ್‌ಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

ಎನ್‌ಡಿಎ ಮಿತ್ರಪಕ್ಷವಾಗಿದ್ದ ಜಿತನ್‌ ರಾಂ ಮಾಂಜಿ ನೇತೃತ್ವದ ಎಚ್‌ಎಎಂ ನಂತರ ಲಾಲು ಪ್ರಸಾದ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಸೇರಿತ್ತು. ಉಪೆಂದ್ರ ಕುಶ್ವಾಹ ಕೂಡ ಅದೇ ದಾರಿಯಲ್ಲಿ ಸಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

2019ರ ಲೋಕಸಭಾ ಚುನಾವಣೆ ಸೀಟು ಹೊಂದಾಣಿಕೆ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ನಿತೀಶ್‌ ಕುಮಾರ್‌ ಮಧ್ಯೆ ಕಳೆದ ತಿಂಗಳು ಮಾತುಕತೆ ನಂತರ ತಮಗೆ ದೊರೆತ ಸ್ಥಾನಗಳ ಬಗ್ಗೆ ಕುಶ್ವಾಹ ಮತ್ತು ರಾಂ ವಿಲಾಸ್‌ ಪಾಸ್ವಾನ್‌ ಅವರಲ್ಲಿ ಅಸಮಾಧಾನ ಭುಗಿಲೆದ್ದಿದೆ.

‘ಒಂದೇ ಕುಟುಂಬದ ಸುತ್ತ ಗಿರಕಿ’

ಬಿಲಾಸಪುರ: ಕಾಂಗ್ರೆಸ್‌ ರಾಜಕಾರಣ ಒಂದು ಕುಟುಂಬದ ಸುತ್ತ ಮಾತ್ರ ಗಿರಕಿ ಹೊಡೆಯುತ್ತಿದೆ. ಬಿಜೆಪಿ ಅಭಿವೃದ್ಧಿ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ ರಾಜಕಾರಣ ತಾಯಿ ಮತ್ತು ಮಗನಿಂದ ಆರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತದೆ ಎಂದು ಸೋಮವಾರ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಅವರು ಆರೋಪ ಮಾಡಿದರು.

ಬಿಜೆಪಿಯ ಅಭಿವೃದ್ಧಿಗೆ ಪ್ರತಿಯಾಗಿ ಯಾವ ಅಸ್ತ್ರ ಪ್ರಯೋಗಿಸಬೇಕು ಎನ್ನುವುದು ತೋಚದೆ ವಿರೋಧ ಪಕ್ಷಗಳು ಪೇಚಿಗೆ ಸಿಲುಕಿವೆ ಎಂದು ಮೋದಿ ವ್ಯಂಗ್ಯವಾಡಿದರು.

‘ಜಾಮೀನಿನ ಮೇಲೆ ಹೊರಗಿರುವ ತಾಯಿ ಮತ್ತು ಮಗ ನನಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ’ ಎಂದು ಅವರು ಹಂಗಿಸಿದರು.

ಛತ್ತೀಸಗಡದಲ್ಲಿ ನವೆಂಬರ್‌ 20ರಂದು ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ತುರುಸಿನ ಪ್ರಚಾರ ಕೈಗೊಂಡರು.

**

ಕೇಂದ್ರ ಎನ್‌ಡಿಎ ಸರ್ಕಾರ ಮತ್ತು ರಾಜಸ್ಥಾನದ ಬಿಜೆಪಿ ಸರ್ಕಾರವು ನಿರುದ್ಯೋಗಿ ಯುವಕರ ಬೆನ್ನಿಗೆ ಚೂರಿ ಹಾಕಿವೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ಬೋಗಸ್‌ ಅಂಕಿ, ಸಂಖ್ಯೆ ನೀಡುತ್ತಿದೆ
– ಕಾಂಗ್ರೆಸ್‌

**

ರಾಷ್ಟ್ರೀಯ ಲೋಕಸಮತಾ ಪಕ್ಷದ ಶಾಸಕರನ್ನು ಸೆಳೆಯಲು ಮುಂದಾಗಿರುವ ಜೆಡಿಯು ಧೋರಣೆ ಎನ್‌ಡಿಎಗೆ ಮುಳುವಾಗಲಿದೆ ಉಪೇಂದ್ರ ಕುಶ್ವಾಹ
- ಆರ್‌ಎಲ್‌ಎಸ್‌ಪಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !