‘ಡಸಾಲ್ಟ್‌ಗೆ ರಿಲಯನ್ಸ್‌ ಜೊತೆಗಿನ ಒಪ್ಪಂದ ಅನಿವಾರ್ಯ ಮತ್ತು ಕಡ್ಡಾಯವಾಗಿತ್ತು’

7

‘ಡಸಾಲ್ಟ್‌ಗೆ ರಿಲಯನ್ಸ್‌ ಜೊತೆಗಿನ ಒಪ್ಪಂದ ಅನಿವಾರ್ಯ ಮತ್ತು ಕಡ್ಡಾಯವಾಗಿತ್ತು’

Published:
Updated:

ಬೆಂಗಳೂರು: ‘ರಫೇಲ್ ಯುದ್ಧ ವಿಮಾನ ಖರೀದಿ ಮಾತುಕತೆ ವೇಳೆ ರಿಲಯನ್ಸ್‌ ಡಿಫೆನ್ಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಗೆ ನಮ್ಮನ್ನು ದೂಡಲಾಯಿತು. ಭಾರತದ ಜೊತೆಗೆ ‘ರಫ್ತು ಒಪ್ಪಂದ’ ಮಾಡಿಕೊಳ್ಳಲು ರಿಲಯನ್ಸ್‌ ಡಿಫೆನ್ಸ್‌ ಜೊತೆಗಿನ ಪಾಲುದಾರಿಕೆ ‘ಅನಿವಾರ್ಯ’ ಮತ್ತು ‘ಕಡ್ಡಾಯ’ವಾಗಿತ್ತು’ ಎಂದು ರಫೇಲ್‌ ಯುದ್ಧವಿಮಾನಗಳನ್ನು ತಯಾರಿಸುವ ‘ಡಸಾಲ್ಟ್ ಏವಿಯೇಶನ್‌’ನ ಉಪಾಧ್ಯಕ್ಷರ ಹೇಳಿಕೆ ಉಲ್ಲೇಖಿಸಿ ತನಿಖಾ ವರದಿಗಳನ್ನು ಪ್ರಕಟಿಸುವ ಫ್ರಾನ್ಸ್‌ನ ನಿಯತಕಾಲಿಕೆ ‘ಮೀಡಿಯಾಪಾರ್ಟ್‌’ ಅ.10ರಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಹೇಳಿದೆ.

‘ನಾಗಪುರದಲ್ಲಿ ರಿಲಯನ್ಸ್‌ ಏರೊಸ್ಪೇಸ್‌ ಜೊತೆಗೂಡಿ ಅಭಿವೃದ್ಧಿಪಡಿಸುತ್ತಿರುವ ಉದ್ಯಮದ ಬಗ್ಗೆ 11ನೇ ಮೇ, 2017ರಂದು ಡಸಾಲ್ಟ್ ಏವಿಯೇಷನ್‌ನ ಉಪಮುಖ್ಯಸ್ಥ ಲೊಯಿಕ್ ಸೆಗಲೆನ್ ಸಂಸ್ಥೆಯ ಕಾರ್ಮಿಕ ಪ್ರತಿನಿಧಿಗಳಿಗೆ ನೀಡಿದ ಪ್ರೆಸೆಂಟೇಶನ್‌ನ ಪ್ರತಿ ತನ್ನ ಬಳಿ ಇದೆ. ಸಂಸ್ಥೆಯ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಈ ವರದಿ ಸಿದ್ಧಪಡಿಸಲಾಗಿದೆ’ ಎಂದು ಮೀಡಿಯಾಪಾರ್ಟ್ ಹೇಳಿಕೊಂಡಿದೆ. 

‘ಭಾರತದೊಂದಿಗೆ ರಫ್ತು ಒಪ್ಪಂದ ಮಾಡಿಕೊಳ್ಳಲು ರಿಲಯನ್ಸ್‌ಗೆ ನಮ್ಮ ಪಾಲುದಾರ ಸಂಸ್ಥೆಯ ಮಾನ್ಯತೆ ಕೊಡುವುದು ಅನಿವಾರ್ಯವಾಗಿತ್ತು. ಇದು ಒಪ್ಪಂದಕ್ಕಾಗಿ ನಾವು ಕೊಟ್ಟ ‘ಪರಿಹಾರ’ (contrepartie) ಎಂದು ಸೆಗಲೆನ್ ಪ್ರೆಸೆಂಟೇಶನ್ ನೀಡುವಾಗ ವಿವರಿಸಿದ್ದರು’ ಎಂದು ವರದಿ ಹೇಳುತ್ತದೆ.

ಮೀಡಿಯಾಪಾರ್ಟ್‌ ವರದಿಯನ್ನು ನಿರಾಕರಿಸಿ ಫ್ರಾನ್ಸ್ ಮಾಧ್ಯಮಗಳಿಗೆ ಡಸಾಲ್ಟ್ ನೀಡಿರುವ ಪತ್ರಿಕಾ ಹೇಳಿಕೆಯನ್ನು ಎನ್‌ಡಿಟಿವಿ ಪ್ರಕಟಿಸಿದೆ. ‘ನಮ್ಮ ಸಹವರ್ತಿ ಸಂಸ್ಥೆಯಾಗಿ ರಿಲಯನ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಯಾರೂ ನಮ್ಮ ಮೇಲೆ ಒತ್ತಡ ಹೇರಿರಲಿಲ್ಲ. ಇದು ನಮ್ಮ ಸ್ವತಂತ್ರ ನಿರ್ಧಾರ’ ಎಂದು ಡಸಾಲ್ಟ್ ಹೇಳಿದೆ.

ವಿವಾದದ ಹಿನ್ನೆಲೆ

ನಮ್ಮ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸದಲ್ಲಿದ್ದಾಗ (2015ರಲ್ಲಿ) ರಫೇಲ್ ವಿಮಾನ ಖರೀದಿ ಘೋಷಣೆ ಮಾಡಿದ್ದರು. ಆಗ ಫ್ರಾನ್ಸ್ ಅಧ್ಯಕ್ಷರಾಗಿದ್ದ ಫ್ರಾಂಕ್ವಾ ಒಲಾಂಡ್. 'ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಸಹವರ್ತಿಯಾಗಿ ಮಾಡಿಕೊಳ್ಳಬೇಕು ಎಂದು ಭಾರತ ಸರ್ಕಾರ ಸೂಚಿಸಿತ್ತು' ಎಂದು ಈಚೆಗೆ ಹೇಳಿಕೆ ನೀಡಿದ್ದರು. 'ಹೀಗೆ ಮಾಡುವ ಮೂಲಕ ಮೋದಿ ಅವರು ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ' ಎಂದು ಭಾರತದ ವಿರೋಧ ಪಕ್ಷಗಳು ಟೀಕಿಸಿದ್ದವು. ನಂತರದ ದಿನಗಳಲ್ಲಿ ಒಲಾಂಡ್ ಅವರ ಹೇಳಿಕೆಯನ್ನು ಡಸಾಲ್ಟ್ ಮತ್ತು ಫ್ರಾನ್ಸ್ ಸರ್ಕಾರ ತಳ್ಳಿಹಾಕಿದ್ದವು. 'ಸ್ವಂತ ನಿರ್ಧಾರದಿಂದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಂಡೆವು' ಎಂದು ಡಸಾಲ್ಟ್ ಹೇಳಿತ್ತು.

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !