ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌, ಬಿಜೆಪಿಯಿಂದ ಕೇರಳ ಸಾಮರಸ್ಯ ಹಾಳು

ಶಬರಿಮಲೆ ವಿವಾದ ದುರ್ಬಳಕೆ: ಸ್ವಾಮಿ ಅಗ್ನಿವೇಶ್‌ ಆರೋಪ
Last Updated 24 ನವೆಂಬರ್ 2018, 20:00 IST
ಅಕ್ಷರ ಗಾತ್ರ

ತಿರುವನಂತಪುರ: ಆರ್‌ಎಸ್‌ಎಸ್‌ ಮತ್ತು ಬಿಜೆಪಿಯು ಶಬರಿಮಲೆ ವಿವಾದವನ್ನು ಕೇರಳದ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯ ಹಾಳು ಮಾಡಲು ಬಳಸಿಕೊಳ್ಳುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಸ್ಟ್‌ನಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪ ಕೇರಳದ ಜನರನ್ನು ಒಂದುಗೂಡಿಸಿತು. ಆದರೆ, ಶಬರಿಮಲೆ ಹೆಸರಿನಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹುಟ್ಟು ಹಾಕಿರುವ ಅನೈಸರ್ಗಿಕ ವಿಕೋಪ ಆ ಪಕ್ಷದ ಚುನಾವಣಾ ಭವಿಷ್ಯವನ್ನು ಉತ್ತಮಗೊಳಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೊದಲಿನಿಂದಲೂ ಶಬರಿಮಲೆ ಅಯ್ಯಪ್ಪ ದೇಗುಲದೊಳಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬ ನಿಲುವಿಗೆ ಅಂಟಿಕೊಂಡಿದ್ದವು. ರಾಜಕೀಯ ಲಾಭಕ್ಕಾಗಿ ಏಕಾಏಕಿ ಬಣ್ಣ ಬದಲಿಸಿವೆ ಎಂದು ಅಗ್ನಿವೇಶ್‌ ಆರೋಪಿಸಿದ್ದಾರೆ.

ಕೋಮುವಾದ ಮತ್ತು ಜಾತಿ ಆಧಾರಿತ ರಾಜಕೀಯವನ್ನು ಕೇರಳದ ಜನರು ಎಂದಿಗೂ ಒಪ್ಪುವುದಿಲ್ಲ ಎಂಬ ಅರಿವು ಸಂಘ ಪರಿವಾರಕ್ಕಿದೆ ಎಂದು ಅವರು ಹೇಳಿದ್ದಾರೆ.

ಕೇರಳದ ಜನರು ಬಿಜೆಪಿ–ಆರ್‌ಎಸ್‌ಎಸ್‌ ರೂಪಿಸಿರುವ ರಾಜಕೀಯ ಒಳಸಂಚನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಕೇರಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಶಬರಿಗಿರಿಗೆ ಭಕ್ತರ ದಂಡು

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಳೆದ ಎರಡ್ಮೂರು ದಿನಗಳಿಂದ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು.

ಶಬರಿಮಲೆ ವಿವಾದವನ್ನು ಮುಖ್ಯಮಂತ್ರಿಗಳು ಸರಿಯಾಗಿ ನಿರ್ವಹಿಸದಿರುವುದು ಹಿಂಸಾಚಾರಕ್ಕೆ ಕಾರಣ ಎಂದು ಕಾಂಗ್ರೆಸ್‌ ನಾಯಕ ಎ.ಕೆ.ಆಂಟನಿ ಆರೋಪಿಸಿದ್ದಾರೆ.

ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್‌) ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

‘ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇರಳ ಹೈಕೋರ್ಟ್‌ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುಗೇಟು ನೀಡಿದ್ದಾರೆ.

ಶಬರಿಮಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದೂ ಪಿಣರಾಯಿ ಹೇಳಿದ್ದಾರೆ.

***

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ‘ಗಾಡ್‌ಫಾದರ್‌’ನಂತೆ ವರ್ತಿಸುತ್ತಿದ್ದಾರೆ

-ರಮೇಶ್ ಚೆನ್ನಿತಲ,ಕಾಂಗ್ರೆಸ್ ನಾಯಕ

ಕೇರಳದಲ್ಲಿ ಈಚೆಗೆ ಸಂಭವಿಸಿದ ಪ್ರವಾಹಕ್ಕಿಂತಲೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ನಡೆಸುತ್ತಿರುವ ಪ್ರಹಸನ ಅಪಾಯಕಾರಿ

–ಸ್ವಾಮಿ ಅಗ್ನೀವೇಶ್‌ ,ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT