ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧವಿ ಯಾತ್ರೆ ಮೊಟಕು

Last Updated 17 ಅಕ್ಟೋಬರ್ 2018, 19:29 IST
ಅಕ್ಷರ ಗಾತ್ರ

ಪಂಪಾ(ಕೇರಳ): ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೊರಟಿದ್ದ ಆಂಧ್ರ ಪ್ರದೇಶದ 45 ವರ್ಷದ ಮಹಿಳೆ ಮಾಧವಿ ಅರ್ಧ ದಾರಿಯಲ್ಲಿಯೇ ವಾಪಾಸ್‌ ಆಗಿದ್ದಾರೆ.

ಕುಟುಂಬ ಸದಸ್ಯರ ಸಮೇತ ಸ್ವಾಮಿ ಅಯ್ಯಪ್ಪ ಮಾರ್ಗದ ಮೂಲಕ ಶಬರಿಮಲೆಗೆ ಏರುತ್ತಿದ್ದ ಪಶ್ಚಿಮ ಗೋದಾವರಿ ಜಿಲ್ಲೆಯ ಮಾಧವಿ ಅವರನ್ನು ಪ್ರತಿಭಟನಾಕಾರರು ಪ್ರಮುಖ ದ್ವಾರ ಪಂಪಾದಲ್ಲಿಯೇ ತಡೆದರು.

ಪೊಲೀಸ್‌ ಬೆಂಗಾವಲಿನಲ್ಲಿ ಪ್ರಯಾಣ ಮುಂದುವರಿಸಿದ ಮಾಧವಿ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅವರನ್ನು ಸುತ್ತುವರಿದ ಅಯ್ಯಪ್ಪ ಧರ್ಮ ಸೇನಾ ಸದಸ್ಯರು ಮರಳಿ ಹೋಗುವಂತೆ ಒತ್ತಾಯಿಸಿದರು.

ಮಾಧವಿ ಮತ್ತು ಕುಟುಂಬ ಸದಸ್ಯರು ಅರ್ಧದಲ್ಲಿಯೇ ಪ್ರಯಾಣ ಮೊಟಕುಗೊಳಿಸಿ ಮರಳಿದರು.

ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯದ ಒಳಗೆ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಮಾಧವಿ ಶಬರಿಮಲೆಗೆ ಹೊರಟಿದ್ದರು.

ಒಂದು ವೇಳೆ ಅವರು ಅಯ್ಯಪ್ಪ ಸನ್ನಿಧಾನ ಪ್ರವೇಶಿಸಿದ್ದರೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಾಲಯ ಪ್ರವೇಶಿಸಿದ 10ವರ್ಷದಿಂದ 50ವರ್ಷದೊಳಗಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು.

ಶಬರಿಮಲೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಉದ್ದಕ್ಕೂ ಕುಳಿತಿದ್ದ ಪ್ರತಿಭಟನಕಾರರು, ಅಯ್ಯಪ್ಪನ ಭಕ್ತರು ಮತ್ತು ಮಹಿಳೆಯರು ಅಯ್ಯಪ್ಪ ನಾಮಜಪ ಮಾಡುತ್ತಿದ್ದರು.

ಪಂದಳಂ ರಾಜಮನೆತನ ಮತ್ತು ಮುಖ್ಯ ಅರ್ಚಕ ತಂತ್ರಿ ಕುಟುಂಬ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.

ಈ ನಡುವೆ ಐದು ದಿನಗಳ ಪೂಜೆ ಮುಗಿಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.

ಈ ನಡುವೆ ಧಾರ್ಮಿಕ ದತ್ತಿ ಸಚಿವ ಕೆ. ಸುರೇಂದ್ರನ್‌ ಅವರು ಹಿರಿಯ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ.

ಅಯ್ಯಪ್ಪ ಸನ್ನಿಧಾನಕ್ಕೆ ತೆರಳುವ ಭಕ್ತರು ಮತ್ತು ಅವರನ್ನು ಕರೆದೊಯ್ಯುವ ವಾಹನ ತಡೆಯುವವರನ್ನು ಬಂಧಿಸಲಾಗುವುದು ಎಂದು ಡಿಜಿಪಿ ಲೋಕನಾಥ್‌ ಬೆಹ್ರಾ ಎಚ್ಚರಿಕೆ ನೀಡಿದ್ದಾರೆ.

ಶಬರಿಮಲೆಯನ್ನು ಯುದ್ಧಭೂಮಿ ಮಾಡಲು ಹೊರಟಿರುವ ಕೇರಳ ಸರ್ಕಾರ ಮತ್ತು ಪೊಲಿಸರು, ಅಯ್ಯಪ್ಪ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ

-ಎಂ.ಟಿ. ರಮೇಶ್‌,ಬಿಜೆಪಿ ನಾಯಕ

ಪ್ರತಿಭಟನಾಕಾರರು ಭಕ್ತರನ್ನು ತಡೆಯುವ ಮೂಲಕ ಅವರ ವೃತವನ್ನು ಹಾಳು ಮಾಡಿದ್ದಾರೆ. ಆ ಮೂಲಕ ಅಯ್ಯಪ್ಪನ ದೋಷಕ್ಕೆ ಕಾರಣರಾಗಿದ್ದಾರೆ
ಇ.ಪಿ. ಜಯರಾಜನ್‌
ಕೇರಳ ಸಚಿವ

ಪ್ರತಿಭಟನೆ ಜನವಿರೋಧಿ, ಪ್ರಜಾತಂತ್ರ ಮತ್ತು ಸಂವಿಧಾನ ವಿರೋಧಿ
ಕೆ. ಸುರೇಂದ್ರನ್‌
ಧಾರ್ಮಿಕ ದತ್ತಿ ಸಚಿವ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಲಿತ ಶಕ್ತಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ
ಸಿಪಿಐಎಂನ ಮಹಿಳಾ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT