ಕೇರಳ ಪ್ರವಾಹ: ಶಬರಿಮಲೆ ಯಾತ್ರೆಗೆ ಮೂಲಸೌಕರ್ಯ ಕೊರತೆ

7
ತಿರುವಾಂಕೂರು ದೇವಸ್ವಂ ಮಂಡಳಿ ಮುಂದೆ ಸವಾಲುಗಳ ಸಾಲು

ಕೇರಳ ಪ್ರವಾಹ: ಶಬರಿಮಲೆ ಯಾತ್ರೆಗೆ ಮೂಲಸೌಕರ್ಯ ಕೊರತೆ

Published:
Updated:

ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ್ದ ಪ್ರವಾಹ, ಪ್ರಾಕೃತಿಕ ವಿಕೋಪ ಈ ಬಾರಿಯ ಶಬರಿಮಲೆ ಯಾತ್ರೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾರ್ಷಿಕ ಮಂಡಲಮ್–ಮಕರವಿಳಕ್ಕು ಯಾತ್ರೆ ಅವಧಿ ಆರಂಭಗೊಳ್ಳಲು ಇನ್ನು ಸುಮಾರು ಎರಡು ತಿಂಗಳಷ್ಟೇ ಬಾಕಿ ಇದೆ. ಆದರೆ, ಶಬರಿಮಲೆಗೆ ತೆರಳುವುದಕ್ಕೂ ಮುನ್ನ ಭಕ್ತರು ಆಗಮಿಸುವ ಪಂಪಾದಲ್ಲಿ ಪ್ರವಾಹದಿಂದಾಗಿ ಮೂಲಸೌಕರ್ಯಗಳೇ ಇಲ್ಲವಾಗಿವೆ. ಶೌಚಾಲಯಗಳು, ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು ಪೈಪ್‌ಲೈನ್, ತ್ಯಾಜ್ಯ ಸಂಗ್ರಹಾಗಾರ ನಾಶವಾಗಿವೆ. ಕೇರಳ ಜಲಪ್ರಾಧಿಕಾರದ ಪಂಪ್‌ಹೌಸ್‌ನಲ್ಲಿ ಸಂಪೂರ್ಣ ಮರಳು ತುಂಬಿಕೊಂಡಿದ್ದು, ಕಾರ್ಯಾಚರಿಸುವ ಸ್ಥಿತಿಯಲ್ಲಿಲ್ಲ. ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸಾಲುಸಾಲು ಸವಾಲುಗಳನ್ನೆದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶಬರಿಮಲೆಗೆ ತೆರಳುವುದಕ್ಕೂ ಮುನ್ನ ಭಕ್ತರು ಪಂಪಾಗೆ ಬರುತ್ತಾರೆ. ಪಂಪಾದ ಸ್ನಾನಘಟ್ಟಗಳಲ್ಲಿ ಪುಣ್ಯಸ್ನಾನ ಮಾಡಿದ ನಂತರ ‘ಪಿತೃ ತರ್ಪಣ’ ಬಿಡುತ್ತಾರೆ. ನಂತರ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುತ್ತಾರೆ. ಪಂಪಾದ ಅನ್ನದಾನ ಮಂಟಪ, ಸಮೀಪದ ಹೋಟೆಲ್‌ ಕಟ್ಟಡಗಳಿಗೂ ಹಾನಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವಾಹದಿಂದಾಗಿ ಮರಳು ತುಂಬಿಕೊಂಡಿದೆ. ಟಿಡಿಬಿಯ ಗೋದಾಮು ಪ್ರವಾಹದಿಂದ ಮುಳುಗಡೆಯಾಗಿ ಬೆಲ್ಲದ ಸಂಗ್ರಹ ಸಂಪೂರ್ಣ ನಾಶವಾಗಿದೆ.

ನಿಳಕ್ಕಲ್‌ನಲ್ಲಿ ಬೇಸ್‌ಕ್ಯಾಂಪ್

ಪಂಪಾಗೆ ಬದಲಾಗಿ ಅಲ್ಲಿಂದ 20 ಕಿಲೋಮೀಟರ್ ದೂರದಲ್ಲಿರುವ ನಿಳಕ್ಕಲ್‌ನಲ್ಲಿ ಯಾತ್ರಿಕರಿಗೆ ಬೇಸ್‌ಕ್ಯಾಂಪ್ ನಿರ್ಮಿಸಲು ಟಿಡಿಬಿ ಉದ್ದೇಶಿಸಿದೆ. ಅಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಯಾತ್ರಿಕರು ಪಂಪಾಗೆ ತೆರಳಬೇಕು. ಪಂಪಾಗೆ ತೆರಳಲು ಮತ್ತು ನಿಳಕ್ಕಲ್‌ಗೆ ವಾಪಸಾಗಲು ಯಾತ್ರಿಕರಿಗೆ ಕೇರಳ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ ಸೇವೆ ಒದಗಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಯಾತ್ರಿಗಳು ನಿಳಕ್ಕಲ್‌ನಲ್ಲೇ ವಾಹನಗಳನ್ನು ನಿಲುಗಡೆಗೊಳಿಸಿ ಮುಂದುವರಿಯಬೇಕು . ಪಂಪಾಗೆ ವಾಹನ ಪ್ರವೇಶ ನಿರ್ಬಂಧಿಸಲಾಗುವುದು ಎಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ನಿಳಕ್ಕಲ್‌ನಲ್ಲಿಯೂ ಮೂಲಸೌಕರ್ಯ ಕೊರತೆ ಇದೆ. ವಾಹನ ನಿಲುಗಡೆ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ವರ್ಷದ ಹಿಂದೆ ದೇವಸ್ವಂ ಸಚಿವರು ಉದ್ಘಾಟಿಸಿದ್ದ, ಭಕ್ತರಿಗೆ ಸೌಕರ್ಯ ಕಲ್ಪಿಸುವ ಕೇಂದ್ರ ಕಾರ್ಯಾಚರಿಸುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.

ರಸ್ತೆ ದುರಸ್ತಿ, ಮೂಸೌಕರ್ಯಕ್ಕೆ ₹200 ಕೋಟಿ

ಶಬರಿಮಲೆಗೆ ತೆರಳುವ ರಸ್ತೆ ದುರಸ್ತಿ ಮತ್ತು ಯಾತ್ರಿಕರಿಗೆ ಇತರ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲು ₹200 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಸುರೇಂದ್ರನ್ ತಿಳಿಸಿದ್ದಾರೆ. ಪ್ರಸಕ್ತ ವರ್ಷದ ಯಾತ್ರೆಗೆ ಪೂರ್ವತಯಾರಿ ನಡೆಸುವ ವಿಷಯಕ್ಕೆ ಸಂಬಂಧಿಸಿ ಬುಧವಾರ ನಡೆಸಲಾದ ಉನ್ನತಮಟ್ಟದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ನಿಳಕ್ಕಲ್ ಮತ್ತು ಪಂಪಾ ಮಧ್ಯ ರಸ್ತೆ ಸಂಪರ್ಕ ಮತ್ತು ಇತರ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಬಗ್ಗೆ ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್ ಜತೆ ಸರ್ಕಾರ ಮಾತುಕತೆ ನಡೆಸಲಿದೆ. ಪಂಪಾದಲ್ಲಿ ಹೊಸ ಸೇತುವೆ ನಿರ್ಮಿಸಲೂ ಸರ್ಕಾರ ಶಿಫಾರಸು ಮಾಡಲಿದೆ.

ಸೆಪ್ಟೆಂಬರ್ 12ರ ಒಳಗೆ ವಿದ್ಯುತ್ ಸಂಪರ್ಕ ಮರಳಿ ಕಲ್ಪಿಸಲಾಗುವುದು. ವಿದ್ಯುತ್ ಸಂರ್ಪಕ ದೊರೆತ ಕೂಡಲೇ ಕುಡಿಯುವ ನೀರು ಸರಬರಾಜು ಸಹ ಆರಂಭಗೊಳ್ಳಲಿದೆ. 300ರಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗುವುದು. ಪಂಪಾದ ಸರ್ಕಾರಿ ಆಸ್ಪತ್ರೆ ಮರಳಿ ಕಾರ್ಯಾಚರಿಸುವಂತೆ ಮಾಡಲು ಆರೋಗ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !