ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

Last Updated 3 ಅಕ್ಟೋಬರ್ 2018, 6:04 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪು ವಿರುದ್ಧ ಹಿಂದೂ ಸಂಘಟನೆಗಳು ಮಂಗಳವಾರ ಪತ್ತನಂತಿಟ್ಟ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ನಡೆಸಿವೆ.
ಪ್ರತಿಭಟನೆಗಳಲ್ಲಿ ಮಹಿಳೆಯರೂ ಭಾಗವಹಿಸಿದ್ದರು.ಪಂಪಾ ತೀರದಲ್ಲಿ ನಾಮಜಪ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಪಾಲಕ್ಕಾಡ್ಮರುತ ರೋಡ್‍ನಲ್ಲಿ ಹಿಂದೂ ಪರಿಷತ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದಾರೆ, ಕೊಯಂಬತ್ತೂರ್- ತ್ರಿಶ್ಶೂರ್ ರಸ್ತೆಯಲ್ಲಿ ಅರ್ಧ ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.ಕೊಚ್ಚಿಯಲ್ಲಿ ಪ್ರತಿಭಟನಾಕಾರರು ವಾಹನಗಳಿಗೆ ತಡೆಯೊಡ್ಡಿದಾಗ ಸಂಘರ್ಷವೇರ್ಪಟ್ಟಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ. ಆಲಪ್ಪುಳದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಶಬರಿಮಲೆ ವಿಷಯದಲ್ಲಿ ಅಂತಿಮ ತೀರ್ಪು ಪ್ರಕಟಿಸುವ ಮುನ್ನವೇ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಪಿಣರಾಯಿ ವಿಜಯನ್ ಸರ್ಕಾರ ಉತ್ಸಾಹ ತೋರಿಸುತ್ತಿದೆ .ಮಹಿಳಾ ಪೊಲೀಸರೊಂದಿಗೆ ಪಿಣರಾಯಿ ಸರ್ಕಾರ ಶಬರಿಮಲೆಗೆ ಬಂದರೆ ಗಾಂಧೀ ಮಾರ್ಗದ ಮೂಲಕ ತಾವು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ ಪಿಳ್ಳೆ ಕಣ್ಣೂರಿನಲ್ಲಿ ಹೇಳಿದ್ದಾರೆ.

ಈ ನಡುವೆ, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕೆ? ಎಂಬುದರ ಬಗ್ಗೆ ತೀರ್ಮಾನಿಸಲು ದೇವಸ್ವಂ ಮಂಡಳಿ ಬುಧವಾರ ಸಭೆ ಸೇರಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ದೇವಸ್ವಂಮಂಡಳಿ ಹೇಳಿದೆ.

ಏತನ್ಮಧ್ಯೆ, ಮಹಿಳೆಯರಿಗೆ ಶಬರಿಮಲೆ ಪ್ರವೇಶ ನೀಡಿರುವ ಸುಪ್ರೀಂ ತೀರ್ಪು ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಪ್ರತಿಕ್ರಿಯಿಸಿದ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ, ಸುಪ್ರೀಂ ತೀರ್ಪನ್ನು ನಾವು ಗೌರವಿಸುತ್ತೇವೆ ಅದೇ ಹೊತ್ತಿಗೆ ಕೋಟಿ ಭಕ್ತರ ಭಾವನೆಗಳನ್ನು ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ, ಭಕ್ತರಿಗೆ ಬೇಸರವಾಗಿದೆ ಎಂದಿದ್ದಾರೆ.

ನಮ್ಮ ಪಕ್ಷ ಹಿಂದೂಗಳ ಒಳಿತು ಬಯಸುತ್ತದೆ.ಈ ವಿಷಯದಲ್ಲಿ ಸಂಘ ಪರಿವಾರ್ ಮತ್ತು ನಮಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಉತ್ತರ ಭಾರತದಲ್ಲಿನ ದೇವಾಲಯಗಳಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿರುವುದನ್ನು ನೋಡಿ ರಾಷ್ಟ್ರ ಮಟ್ಟದಲ್ಲಿನ ಆರ್‌‍ಎಸ್ಎಸ್ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದೆ. ಆದರೆ ಕೇರಳದಲ್ಲಿನ ಪರಿಸ್ಥಿತಿಯೇ ಬೇರೆ.ಸುಪ್ರೀಂಕೋರ್ಟಿನ ತೀರ್ಪಿನ ನೆಪದಲ್ಲಿ ಶಬರಿಮಲೆಯನ್ನು ನಾಶಪಡಿಸುವ ಸಿಪಿಎಂ ಯತ್ನಗಳನ್ನು ತಡೆಯಲು ಬಿಜೆಪಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪಿ.ಎಸ್ ಶ್ರೀಧರನ್ ಪಿಳ್ಳೆ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಪ್ರಕಾರ ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು ಬಗ್ಗೆ ತಮ್ಮ ನಿಲುವು ಪ್ರಕಟಿಸಲು ಬಿಜೆಪಿ ಮತ್ತು ಸಂಘ ಪರಿವಾರ ಅಕ್ಟೋಬರ್ 8ರಂದು ಕೊಚ್ಚಿಯಲ್ಲಿ ಸಭೆ ಸೇರಲಿದೆ.ಮಹಿಳೆಯರ ಪ್ರವೇಶ ಬಗ್ಗೆ ಕೇರಳ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಾಯಿಸುವುದರ ಜತೆಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಲಿದೆ.

ಅದೇ ವೇಳೆ ಪುನಃ ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಕಾಂಗ್ರೆಸ್ ಕೂಡಾ ಒಲವು ತೋರಿಸಿದೆ.ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಪುನಃ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಕೇರಳದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ದೇವಸ್ವಂ ಮಂಡಳಿಗೆ ಸಲಹೆ ನೀಡಿದ್ದಾರೆ.ತೀರ್ಪು ಪ್ರಕಟಿಸುವಾಗ ಸಾಮಾಜಿಕ ಮತ್ತು ಧಾರ್ಮಿಕ ಪರಿಣಾಮಗಳ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಿತ್ತು.ಧಾರ್ಮಿಕ ಕ್ಷೇತ್ರಗಳಲ್ಲಿ ಅದರದ್ದೇ ಆದ ನಂಬಿಕೆಗಳಿವೆ. ಅದನ್ನು ಉಲ್ಲಂಘನೆ ಮಾಡಿದರೆ ಭಕ್ತರಿಗೆ ನೋವಾಗುತ್ತದೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ತೀರ್ಮಾನವನ್ನು ಅದೇ ರೀತಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ಟ್ರಾವೆಂಕೂರ್ ದೇವಸ್ವಂ ಮಂಡಳಿ ವಿರೋಧಿಸಿದೆ.ಅಯ್ಯಪ್ಪ ದೇವರ ನಿಜವಾದ ಭಕ್ತೆಯರು ದೇವಾಲಯಕ್ಕೆ ಪ್ರವೇಶಿಸಲು ಹಿಂಜರಿಯುತ್ತಾರೆ. ಆದರೆ ಮಹಿಳಾ ಹೋರಾಟಗಾರರು ಮಾತ್ರ ಅಯ್ಯಪ್ಪನಲ್ಲಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ಹೇಳಿದ್ದಾರೆ.

ಏತನ್ಮಧ್ಯೆ, ಸುಪ್ರೀಂ ತೀರ್ಪು ಬಗ್ಗೆ ಪುನಃ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಪಂದಳಂ ರಾಜ ಕುಟುಂಬ ಹೇಳಿದೆ. ಶಬರಿಮಲೆಯಲ್ಲಿನ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸುತ್ತಿರುವ ಈ ರಾಜಮನೆಯತನದ ಸದಸ್ಯ ಆರ್.ಆರ್. ವರ್ಮಾ ಅವರು, ಪಂದಂಳಂ ರಾಜ ಕುಟುಂಬದ ದೇವಾಲಯವಾಗಿದೆ ಶಬರಿಮಲೆ. ನಾವು ಅದನ್ನು ಸರ್ಕಾರದ ಕೈಗೊಪ್ಪಿಸಿದ್ದೆವು.ಶಬರಿಮಲೆಯ ಪರಿಸ್ಥಿತಿಯನ್ನು ಕೋರ್ಟ್ ಸಂಪೂರ್ಣವಾಗಿ ಪರಿಶೀಲಿಸಿಲ್ಲ. ಈ ತೀರ್ಮಾನ ಭಕ್ತರನ್ನು ಅವಮಾನಿಸಿದಂತಾಗಿದೆ ಎಂದಿದ್ದಾರೆ.

ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ತೀರ್ಪನ್ನು ಅನುಷ್ಠಾನಕ್ಕೆ ತರುವ ಮುನ್ನ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ,
ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರಿಗೆ ಎಲ್ಲ ರೀತಿಯಸೌಕರ್ಯಗಳನ್ನು ಒದಗಿಸಲಾಗುವುದು.ಈಗ ಅಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸಾಲು ವ್ಯವಸ್ಥೆ ಇಲ್ಲ.ಬಸ್ಸುಗಳಲ್ಲಿ ಪ್ರತ್ಯೇಕ ಸೀಟುಗಳನ್ನು ಕಾಯ್ದಿರಿಸುವ ಸೌಕರ್ಯಮತ್ತು ಪ್ರತ್ಯೇಕ ಸ್ನಾನದ ಘಾಟ್ ಗಳನ್ನು ಮಾಡಲಾಗುವುದು.ಶಬರಿಮಲೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ದೇವಸ್ವಂ ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

ಆದಾಗ್ಯೂ, ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ ಸಚಿವರು, ಉದ್ದನೆಯ ಸರತಿ ಸಾಲುಗಳಲ್ಲಿ ತಾಸುಗಟ್ಟಲೆ ಕಾಯಲು ಸಿದ್ಧರಿರುವರು ಮಾತ್ರ ಮಾತ್ರ ಶಬರಿಮಲೆ ಯಾತ್ರೆ ಕೈಗೊಂಡರೆ ಸಾಕು.ದರ್ಶನ ಮುಗಿದ ನಂತರ ಭಕ್ತರು ಅಲ್ಲಿ ತಂಗಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ.

ಶಬರಿಮಲೆ ಪ್ರವೇಶಕ್ಕೆ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ: ಶಬರಿಮಲೆ ಪ್ರವೇಶಕ್ಕೆ ಸಂಪೂರ್ಣವಾಗಿ ಆನ್‍ಲೈನ್ ಬುಕ್ಕಿಂಗ್ ಮೂಲಕ ನಡೆಸಲು ಎಲ್ಲ ಸಿದ್ಥತೆ ಪೂರ್ಣಗೊಂಡಿದೆ, ಪ್ರತ್ಯೇಕ ವೆಬ್‍ಸೈಟ್‍ನಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನದ ದಿನಾಂಕ ಮುಂಗಡ ಬುಕ್ ಮಾಡಿವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು.ಪುಲ್ಲುಮೇಡ್ ದಾರಿಯಾಗಿರುವ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ, ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದಾಗಿ ಡಿಜಿಪಿ ಲೋಕನಾಥ್ ಬೆಹರಾ ಹೇಳಿದ್ದಾರೆ. ಒಂದು ದಿನದಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಜನರಿಗೆ ಪ್ರವೇಶ ಅನುಮತಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT