ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ರಕ್ಷಣೆಗೆ ಬಾರದ ಪೊಲೀಸರು

ಕೇರಳ ಸರ್ಕಾರದ ಒಪ್ಪಿಗೆ ಪಡೆಯಲಾಗಿತ್ತು: ಮನ್ನಿಧಿ
Last Updated 23 ಡಿಸೆಂಬರ್ 2018, 19:18 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆಗೆ ಕೇರಳ ಸರ್ಕಾರ ಒಪ್ಪಿಗೆ ಪಡೆದು ಇಲ್ಲಗೆ ಬಂದರೂ ನಮಗೆ ಅವಕಾಶ ಸಿಗಲಿಲ್ಲ ಎಂದು ತಮಿಳುನಾಡಿನ ಮಹಿಳೆಯರು ಅಸಮಾಧಾನ ತೋಡಿಕೊಂಡರು.

‘ಪೊಲೀಸರು ಭದ್ರತೆ ನೀಡುವ ಭರವಸೆ ನೀಡಿದ್ದರು. ಇಲ್ಲಿಗೆ ಬಂದ ನಂತರ ನಮಗೆ ಭದ್ರತೆ ಸಿಗಲಿಲ್ಲ’ ಎಂದು ತಮಿಳುನಾಡಿನ ‘ಮನ್ನಿಧಿ’ ಸಂಘಟನೆಯ ನಾಯಕಿ ಎಲ್‌. ವಾಸಂತಿ ತಿಳಿಸಿದ್ದಾರೆ.

‘ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು 22 ರಿಂದ 45 ವರ್ಷದೊಳಗಿನ 40 ಮಹಿಳೆಯರು ಬಂದಿದ್ದೇವೆ. ಕೊಟ್ಟಾಯಂ ಹಾಗೂ ಇರುಮೆಲಿ ತಲುಪಿದ್ದು, ಸಣ್ಣ ಸಣ್ಣ ತಂಡಗಳಲ್ಲಿ ದೇವಸ್ಥಾನಕ್ಕೆ ಹೊರಟಿದ್ದೆವು. ನಮ್ಮಲ್ಲಿ ಹೆಚ್ಚಿನವರು ಉಪವಾಸ ವೃತ ಕೈಗೊಂಡಿದ್ದು, ಯಾತ್ರಾರ್ಥಿಗಳಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಅವರು ಹೇಳಿದರು.

‘ಈ ಕುರಿತು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು. ಆದರೆ, ಈಗ ಪೊಲೀಸರು ಮರಳಿ ಹೋಗುವಂತೆ ಹೇಳುತ್ತಿದ್ದಾರೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ನಮಗೂ ಇದೆ. ದರ್ಶನ ಪಡೆಯದೇ ನಾವು ಹಿಂತಿರುಗುವುದಿಲ್ಲ’ ಎಂದು ಮನ್ನಿಧಿ ಸಂಘಟನೆಯ ಸಂಚಾಲಕಿ ಸೆಲ್ವಿ ಹೇಳಿದರು.

11 ಮಹಿಳೆಯರ ಮೊದಲ ತಂಡ ಇದಾಗಿದ್ದು, ಇನ್ನೂ ಹೆಚ್ಚಿನ ತಂಡಗಳು ಬರಲಿವೆ. ತಮಿಳುನಾಡು,ಕರ್ನಾಟಕ, ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಮಹಿಳೆಯರು ಈ ತಂಡದಲ್ಲಿದ್ದಾರೆ. ಪೊಲೀಸ್‌ ಭದ್ರತೆಯಲ್ಲಿ ಆಗಮಿಸಿದ ಎಲ್ಲ ಮಹಿಳೆಯರು 40 ವರ್ಷ ವಯಸ್ಸಿನವರು ಎಂದು ಹೇಳಲಾಗಿದೆ.

ಪಟ್ಟು ಹಿಡಿದ ಮಹಿಳೆಯರು: ‘ದೇವಸ್ಥಾನ ಆವರಣದಲ್ಲಿನ ಪರಿಸ್ಥಿತಿಯನ್ನು ತಿಳಿಸಿದರೂ, ಮಹಿಳೆಯರು ಕೇಳಲಿಲ್ಲ. ಅಯ್ಯಪ್ಪಸ್ವಾಮಿಯ ದರ್ಶನ ಪಡೆದೇ ತೀರುತ್ತೇವೆ ಎಂದು ಪಟ್ಟು ಹಿಡಿದರು’ ಎಂದು ಸ್ಥಳದಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರ ಮನವಿಯನ್ನು ತಿರಸ್ಕರಿಸಿದ ಮಹಿಳೆಯರು ಆರು ತಾಸುಗಳ ಕಾಲ ರಸ್ತೆಯಲ್ಲಿಯೇ ಕುಳಿತರು.

ದೇವಸ್ಥಾನದ ಆವರಣ ಹಾಗೂ ಎರಡೂ ಮೂಲ ಶಿಬಿರಗಳಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು ಮಹಿಳೆಯರನ್ನು ತಡೆದಿದ್ದಾರೆ.

ಹೆಚ್ಚಿನ ಪ್ರತಿಭಟನಾಕಾರರು ದೇವಾಲಯದ ಆವರಣದಲ್ಲಿ ಸೇರಬಹುದೆಂಬ ನಿರೀಕ್ಷೆಯಿಂದ ಪೊಲೀಸರು ತಾತ್ಕಾಲಿಕವಾಗಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಮೋಜು, ಮಸ್ತಿ ತಾಣವಲ್ಲ: ‘ಋತುಸ್ರಾವ ಆಗುವ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಯಾವುದೇ ಕಾರಣಕ್ಕೂ ಪ್ರವೇಶ ನೀಡುವುದಿಲ್ಲ’ ಶಬರಿಮಲೆ ಕರ್ಮ ಸಮಿತಿ ನಾಯಕಿ ಕೆ.ಪಿ.ಶಶಿಕಲಾ ಹೇಳಿದ್ದಾರೆ.

‘ಇಂತಹ ಮಹಿಳೆಯರನ್ನು ಪತ್ತೆ ಹಚ್ಚಿ, ಅಲ್ಲಿಯೇ ತಡೆಯಲು ನಮ್ಮ ಕಾರ್ಯಕರ್ತರು ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿದ್ದಾರೆ. ದೇವಸ್ಥಾನದ ಸಂಪ್ರದಾಯವನ್ನು ಮುರಿಯಲು ಅವಕಾಶ ನೀಡುವುದಿಲ್ಲ’ಎಂದಿದ್ದಾರೆ.

ಶಬರಿಗಿರಿಯ ಸುತ್ತಮುತ್ತ

*ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ಸೆಪ್ಟಂಬರ್‌ 28 ರಂದು ತೀರ್ಪು ನೀಡಿತ್ತು.

* ರಾಜ್ಯ ಸರ್ಕಾರ ತೀರ್ಪು ಅನುಷ್ಠಾನಕ್ಕೆ ಮುಂದಾಗುತ್ತಿದ್ದಂತೆ ಕೇರಳದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಶಬರಿಮಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು.

* ಅಂದಿನಿಂದಲೂ ಶಬರಿಮಲೆ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದ್ದು ಭಾರಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

*ವಾರ್ಷಿಕ ಪೂಜೆಗಾಗಿ ನವೆಂಬರ್‌ 17 ರಂದು ದೇವಸ್ಥಾನದ ಬಾಗಿಲು ತೆರೆಯಲಾಗಿದೆ.

* ತೀರ್ಪು ಮರುಪರಿಶೀಲಿಸಲು ಕೋರಿ ಹಲವು ಅರ್ಜಿ ಸಲ್ಲಿಕೆ.

* ಸುಪ್ರೀಂ ಕೋರ್ಟ್‌ ಜನೆವರಿ 22ಕ್ಕೆ ತೀರ್ಪು ಕಾಯ್ದಿರಿಸಿದೆ.

ಸತ್ಯಾಗ್ರಹ

ಕೇರಳದ ದಲಿತ ಕಾರ್ಯಕರ್ತೆ ಅಮ್ಮಿನಿ ಎಂಬುವರು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹೋಗುವುದಾಗಿ ಭಾನುವಾರ ಪಂಪಾಕ್ಕೆ ಬರುತ್ತಿದ್ದಂತೆ ಪ್ರತಿಭಟನಕಾರರು ತಡೆದರು. ಇದನ್ನು ಖಂಡಿಸಿ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT