ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಹಿನ್ನೆಲೆಯನ್ನು ಪ್ರಕಟಿಸಿ: ರಾಜಕೀಯ ಪಕ್ಷಗಳಿಗೆ ‘ಸುಪ್ರೀಂ‘ ಸೂಚನೆ

Last Updated 13 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಅಪರಾಧ ಪ್ರಕರಣಗಳ ವಿವರಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು’ ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ.

‘ಅಪರಾಧ ಪ್ರಕರಣಗಳು ಬಾಕಿ ಇರುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಪಕ್ಷಗಳು ಕಾರಣ ಪ್ರಕಟಿಸಬೇಕು. ಅದು ಅವರ ಶೈಕ್ಷಣಿಕ ಅರ್ಹತೆಯನ್ನು ಸಮರ್ಥಿಸಿಕೊಳ್ಳುವಂತಿರಬೇಕು. ಕೇವಲ ಅವರು ಗೆಲ್ಲುವ ಸಾಧ್ಯತೆಯನ್ನು ಆಧರಿಸಿ ಇರಬಾರದು’ ಎಂದುನ್ಯಾಯಮೂರ್ತಿ ಆರ್‌.ಎಫ್. ನರಿಮನ್ ನೇತೃತ್ವದ ನ್ಯಾಯಪೀಠಆದೇಶದಲ್ಲಿ ಸೂಚಿಸಿದೆ.

48 ತಾಸುಗಳಲ್ಲಿ ಘೋಷಿಸಿ: ‘ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 48 ತಾಸುಗಳ ಒಳಗಾಗಿ ಅಥವಾ ನಾಮಪತ್ರ ಸಲ್ಲಿಕೆಯ ಆರಂಭಕ್ಕೂ ಎರಡು ವಾರ ಮೊದಲು ವಿವರಗಳನ್ನು ಪ್ರಕಟಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 72 ತಾಸುಗಳ ಒಳಗೆ ಈ ಸಂಬಂಧ ಚುನಾವಣಾ ಆಯೋಗಕ್ಕೆ ಪಕ್ಷಗಳು ವರದಿ ಸಲ್ಲಿಸಬೇಕು. ಒಂದು ವೇಳೆ ಪಕ್ಷಗಳು ಇದನ್ನು ಪಾಲಿಸಲು ವಿಫಲವಾದಲ್ಲಿ, ಈ ವಿಷಯವನ್ನು ಆಯೋಗ ಸುಪ್ರೀಂ ಕೋರ್ಟ್‌ ಗಮನಕ್ಕೆ ತರಬೇಕು’ ಎಂದು ಆದೇಶಿಸಿದೆ.

‘ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ಚುನಾವಣಾ ಆಯೋಗಕ್ಕೆ ತಿಳಿಸಬೇಕು ಮತ್ತು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇದು ವಿವರವಾಗಿ ಪ್ರಚಾರವಾಗಬೇಕು’ ಎಂದು 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ನಿರ್ದೇಶನ ನೀಡಿತ್ತು.ರಾಜಕೀಯ ಪಕ್ಷಗಳು ಇದನ್ನು ಪಾಲಿಸದೇ ಇರುವುದು ನ್ಯಾಯಾಂಗಕ್ಕೆ ತೋರಿದ ಅಗೌರವ ಎಂದು ಪೀಠ ಹೇಳಿದೆ.

‘ಪ್ರಜಾಪ್ರಭುತ್ವ ಸದೃಢವಾಗುತ್ತದೆ’

‘ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಚುನಾವಣಾ ಪ್ರಜಾಪ್ರಭುತ್ವ ಸದೃಢವಾಗುತ್ತದೆ. ಮತದಾರರು ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ ಚಲಾಯಿಸಲು ನೆರವಾಗುತ್ತದೆ’ ಎಂದು ಬಿಜೆಪಿ ವಕ್ತಾರ ನಲಿನ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ವಿರುದ್ಧ ಕಾಂಗ್ರೆಸ್ ಟೀಕೆ

‘ಅಪರಾಧ ಪ್ರಕರಣಗಳು ಬಾಕಿ ಇರುವವರನ್ನು ಕರ್ನಾಟಕದಲ್ಲಿ ನೂತನ ಸಚಿವರಾಗಿ ನೇಮಿಸಲಾಗಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕಡೆಗಣಿಸಿದಂತಾಗಿದೆ’ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಗಣಿಗಾರಿಕೆ ಹಾಗೂ ಅರಣ್ಯ ಪ್ರದೇಶ ನಾಶ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಆನಂದ್‌ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವರನ್ನಾಗಿ ನೇಮಿಸಿದ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT