ಭಾರತದ ಮೂರು ನಗರದಲ್ಲಿ ಗೂಗಲ್‌ ನೌಕರರ ಪ್ರತಿಭಟನೆ

7

ಭಾರತದ ಮೂರು ನಗರದಲ್ಲಿ ಗೂಗಲ್‌ ನೌಕರರ ಪ್ರತಿಭಟನೆ

Published:
Updated:

ನವದೆಹಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿ ಭಾರತವೂ ಸೇರಿದಂತೆ ವಿಶ್ವದ ಇತರೆಡೆ ಇರುವ ಗೂಗಲ್‌ನ ಕಚೇರಿಗಳಲ್ಲಿ ಉದ್ಯೋಗಿಗಳು ಕೆಲಸ ಸ್ಥಗಿತಗೊಳಿಸಿ ಗುರುವಾರ ಪ್ರತಿಭಟಿಸಿದ್ದಾರೆ.

ಬೆಂಗಳೂರು, ಹೈದರಾಬಾದ್‌, ಮುಂಬೈ ಹಾಗೂ ಗುರುಗ್ರಾಮದಲ್ಲಿರುವ ಗೂಗಲ್‌ ಕಚೇರಿಗಳಲ್ಲಿ 2, 000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಈ ಪೈಕಿ ಹೈದರಾಬಾದ್‌, ಗುರುಗ್ರಾಮ ಹಾಗೂ ಮುಂಬೈ ಕಚೇರಿಗೆ ಸೇರಿದ ಒಟ್ಟು 150 ಉದ್ಯೋಗಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಕಂಪನಿಯ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

‘ಗೂಗಲ್‌ ವಾಕ್‌ ಔಟ್’ ಎಂದು ಕರೆಯಲಾದ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು, ‘ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಿರಿಯ ಅಧಿಕಾರಿಗಳ ಬಗ್ಗೆ ಕಂಪನಿ ಮೃದು ಧೋರಣೆ ತಳೆದಿದೆ’ ಎಂದು ದೂರಿದರು.

ಗೂಗಲ್‌ ಕಚೇರಿಗಳಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಆರೋಪ ಹೊತ್ತು ವಜಾಗೊಂಡ ಅಧಿಕಾರಿಗಳಿಗೆ ಕೋಟ್ಯಂತರ ಡಾಲರ್‌ ಪರಿಹಾರಧನ ನೀಡುತ್ತಿರುವುದು ಹಾಗೂ ದೌರ್ಜನ್ಯದ ಪ್ರಕರಣಗಳ ವಿಚಾರಣೆಯಲ್ಲಿ ಪಾರದರ್ಶಕತೆ ಕೊರತೆ ಬಗ್ಗೆ ಇತ್ತೀಚೆಗೆ ನ್ಯೂಯಾರ್ಕ್‌ ಟೈಮ್ಸ್‌ ತನಿಖಾ ವರದಿಯನ್ನು ಪ್ರಕಟಿಸಿತ್ತು.

ಮತ್ತೊಬ್ಬ ಅಧಿಕಾರಿ ಹೊರಕ್ಕೆ

ಸ್ಯಾನ್‌ಫ್ರಾನ್ಸಿಸ್ಕೊ ವರದಿ: ಗೂಗಲ್‌ನ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ, ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಉನ್ನತ ಅಧಿಕಾರಿಯೊಬ್ಬರು ಕೆಲಸ ತೊರೆದಿದ್ದಾರೆ. ಇದನ್ನು ಕಂಪನಿ ಬುಧವಾರ ದೃಢಪಡಿಸಿದೆ. ಆದರೆ, ಸಂಸ್ಥೆ ಬಿಡುವಾಗ ನೀಡಲಾಗುವ ಪ್ಯಾಕೇಜ್‌ ಅನ್ನು ಅವರಿಗೆ ಕೊಡಲಾಗಿಲ್ಲ.

ಎಕ್ಸ್ ಲ್ಯಾಬ್‌ ನಿರ್ದೇಶಕರಾಗಿದ್ದ ರಿಚ್‌ ಡಿವಾಲ್ ಅವರು ಗೂಗಲ್‌ ತೊರೆದವರು. ಸಂಸ್ಥೆಯ ಹಲವು ಯೋಜನೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಮಹಿಳಾ ಉದ್ಯೋಗಿಗಳ ಆಕ್ರೋಶ: ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗುವವರ ಬಗ್ಗೆ ಸಂಸ್ಥೆಯು ಸಹಾನುಭೂತಿ ಹೊಂದುವುದರ ವಿರುದ್ಧ ಮಹಿಳಾ ಉದ್ಯೋಗಿಗಳ ಆಕ್ರೋಶ ತೀವ್ರಗೊಂಡಿರುವ ಸಂದರ್ಭದಲ್ಲೇ ರಿಚ್‌ ಕಂಪನಿ ಬಿಟ್ಟಿದ್ದಾರೆ.

ಗೂಗಲ್‌ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವ ವೆಬ್‌ಸೈಟ್‌ ‘ಆರ್ಸ್‌ ಟೆಕ್ನಿಕಾ’ದಲ್ಲಿ ಅದರ ಪ್ರತಿ ಬಹಿರಂಗವಾಗಿದೆ.

‘ಕೆಲಸದ ಸ್ಥಳಗಳಲ್ಲಿ ಅಸಭ್ಯ ನಡವಳಿಕೆ ಬಗ್ಗೆ ಹಲವು ಉದ್ಯೋಗಿಗಳಿಂದ ದೂರುಗಳು ಬಂದಿವೆ. ಇಂತಹ ಕೃತ್ಯದಿಂದ ನೋವು ಅನುಭವಿಸಿದ ಉದ್ಯೋಗಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದು ಪಿಚೈ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !