ಬುಧವಾರ, ಫೆಬ್ರವರಿ 26, 2020
19 °C
ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ

ಅನಿರ್ದಿಷ್ಟಾವಧಿ ರಸ್ತೆ ತಡೆ ಸಲ್ಲದು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಕಾರರು ಶಾಹೀನ್‌ಬಾಗ್‌ ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

‘ಸಾರ್ವಜನಿಕ ರಸ್ತೆಗಳನ್ನು ತಡೆದು ಇತರರಿಗೆ ಸಮಸ್ಯೆ ಉಂಟುಮಾಡುವಂತಿಲ್ಲ. ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳ
ಗಳಲ್ಲಿ ಪ್ರತಿಭಟನೆ ನಡೆಸಬೇಕು’ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಕೆ.ಎಂ. ಜೋಸೆಫ್‌ ಅವರಿದ್ದ ಪೀಠ ಹೇಳಿದೆ.

ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯಿಸಬೇಕೆಂದು ಕೇಂದ್ರ, ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ‘ಎರಡೂ ಪಕ್ಷದವರು ಹಾಜರಿಲ್ಲದೆ ತೀರ್ಪು ನೀಡುವುದಿಲ್ಲ. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ’ ಎಂದು ಹೇಳಿತು.

ಸ್ವಯಂಪ್ರೇರಿತ ಪ್ರಕರಣ ದಾಖಲು: ಸಿಎಎ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿ ಪೋಷಕರು ಹಿಂದಿರುಗುವ ವೇಳೆ ಅವರ ನಾಲ್ಕು ತಿಂಗಳ ಶಿಶು ಮೃತಪಟ್ಟ ಸಂಬಂಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಸೋಮವಾರ ನೋಟಿಸ್ ನೀಡಿದೆ.

ಜ.30ರ ರಾತ್ರಿ ಪೋಷಕರು ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿ ಮನೆಗೆ ಮರಳುವ ವೇಳೆ, ನಿದ್ದೆಯಲ್ಲಿಯೇ ಶಿಶು ಮೃತಪಟ್ಟಿತ್ತು.

ಮಕ್ಕಳ ಹಕ್ಕುಗಳ ಕಾರ್ಯಕರ್ತೆಯಾಗಿರುವ 12 ವರ್ಷದ ಬಾಲಕಿ ಝೆನ್ ಗುಣರತ್ನ ಸದಾವರ್ತೆ, ಮುಖ್ಯ ನ್ಯಾಯಮೂರ್ತಿ ಕಚೇರಿಗೆ ಬರೆದಿದ್ದ ಪತ್ರ ಆಧರಿಸಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಶುವಿನ ಸಾವಿನ ಕುರಿತು ತನಿಖೆ ನಡೆಯಬೇಕೆಂದು ಝೆನ್ ಪತ್ರದಲ್ಲಿ ಆಗ್ರಹಿಸಿದ್ದಾಳೆ.

ಮುಂಬೈನಲ್ಲಿ 7ನೇ ತರಗತಿ ಓದುತ್ತಿರುವ ಝೆನ್‌ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತೆಯಾಗಿದ್ದಾಳೆ.

ತಪ್ಪು: ಅಪ್ರಾಪ್ತ ವಯಸ್ಸಿನವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯುವುದು ತಪ್ಪು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟರು.

ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಪೊಲೀಸರು ಸಹ ವಿಫಲರಾಗಿದ್ದಾರೆ. ಶಿಶುವಿನ ಮರಣ ಪ್ರಮಾಣಪತ್ರದಲ್ಲಿ ಸಹ ಸಾವಿಗೆ ಕಾರಣ ಉಲ್ಲೇಖಿಸಲಾಗಿಲ್ಲ’ ಎಂದು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿದೆ.

ಪೊಲೀಸರೊಂದಿಗೆ ಘರ್ಷಣೆ

ಜಾಮಿಯಾ ನಗರದ ನಿವಾಸಿಗಳು ಹಾಗೂ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಸಂಸತ್ತಿನ ಕಡೆಗೆ ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಪೊಲೀಸರು ಅವರನ್ನು ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು–ಪ್ರತಿಭಟನಕಾರರ ನಡುವೆ ಸಂಘರ್ಷ ಉಂಟಾಗಿದೆ.

ಸಂಸತ್ತಿನ ಕಡೆಗೆ ಸಾಗಲು ಪ್ರತಿಭಟನಕಾರರಿಗೆ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ತಿಂಗಳ ಶಿಶು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದೆ?

ಅಲಿಗಡ: ‘ನಾಲ್ಕು ತಿಂಗಳ ಶಿಶು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದೆ. ಸ್ವತಃ ಪ್ರತಿಭಟನಾ ಸ್ಥಳಕ್ಕೆ ಹೋಗಬಹುದೆ?’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹಿಳಾ ವಕೀಲರನ್ನು ಪ್ರಶ್ನಿಸಿತು.

ಅಪ್ರಾಪ್ತ ವಯಸ್ಸಿನವರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಬೇಕೆಂದು ಝೆನ್‌ ಬರೆದಿರುವ ಪತ್ರ ಪರಿಗಣಿಸಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಕೆಲವು ಮಹಿಳಾ ವಕೀಲರು ‘ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿರುವ ಮಕ್ಕಳನ್ನು ಶಾಲೆಗಳಲ್ಲಿ ‘ಪಾಕಿಸ್ತಾನಿ’, ‘ಭಯೋತ್ಪಾದಕ’, ‘ದ್ರೋಹಿ’ ಎಂದು ಕರೆಯಲಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ‘ದಯವಿಟ್ಟು ಇಂತಹ ಪ್ರಚೋದನಾಕಾರಿ ಮಾಹಿತಿಗಳನ್ನು ನ್ಯಾಯಾಲಯದಲ್ಲಿ ನೀಡಬೇಡಿ. ಈ ವೇದಿಕೆಯನ್ನು ಬಳಸಿಕೊಂಡು ಜನರು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದನ್ನು ನಾವು ಬಯಸುವುದಿಲ್ಲ’ ಎಂದು ಹೇಳಿತು.

‘ಬುರ್ಖಾ ನಿಷೇಧಿಸಿ’

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕ ರಘುರಾಜ್ ಸಿಂಗ್‌ ಸೋಮವಾರ ಹೇಳಿದ್ದು, ‘ಶಾಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜನರು ಬುರ್ಖಾ ಧರಿಸುತ್ತಿದ್ದಾರೆ. ಉಗ್ರರು, ಸಮಾಜಘಾತುಕರಿಗೆ
ಬುರ್ಖಾ ನೆರವಾಗುತ್ತದೆ’ ಎಂದಿದ್ದಾರೆ.

‘ಭಯೋತ್ಪಾದನೆ ನಿಗ್ರಹಿಸಲು ಬುರ್ಖಾ ನಿಷೇಧ ಅಗತ್ಯ. ಇದು ಭದ್ರತೆಗೆ ಅಪಾಯ ಒಡ್ಡುತ್ತದೆ’ ಎಂದು ಹೇಳಿದ್ದಾರೆ.

ಪುರಾಣದಲ್ಲಿ ರಾಕ್ಷಸ ಪಾತ್ರವಾದ ರಾವಣನ ಸಹೋದರಿ ಶೂರ್ಪನಖಿಗೂ ಬುರ್ಖಾಗೂ ಸಂಬಂಧ ಕಲ್ಪಿಸಿರುವ ರಘುರಾಜ್ ಸಿಂಗ್, ‘ತನ್ನ ಮೂಗು, ಕಿವಿಗಳು ಕತ್ತರಿಸಿ ಹೋದ ಬಳಿಕ ಮುಖ ಮುಚ್ಚಿಕೊಳ್ಳಲು ಆಕೆ ಬುರ್ಖಾ ಧರಿಸಿದಳು. ಮನುಷ್ಯರಿಗೆ ಬುರ್ಖಾ ಅಗತ್ಯವಿಲ್ಲ’ ಎಂದಿದ್ದಾರೆ. ಆದರೆ ಈ ಹೇಳಿಕೆ ಅವರು ಯಾವುದೇ ಆಧಾರ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು