ನಕ್ಸಲ್‌ ರಕ್ತದಾಹ: ಶಾಸಕನ ಹತ್ಯೆ

7
ವಿಶಾಖಪಟ್ಟಣ ಸಮೀಪ ಭೀಕರ ಕೃತ್ಯ: ಮಾಜಿ ಶಾಸಕನೂ ಗುಂಡಿಗೆ ಬಲಿ

ನಕ್ಸಲ್‌ ರಕ್ತದಾಹ: ಶಾಸಕನ ಹತ್ಯೆ

Published:
Updated:

ಹೈದರಾಬಾದ್‌: ಸರ್ಕಾರದ ಸಚೇತಕ ಮತ್ತು ಶಾಸಕ ಕಿಡಾರಿ ಸರ್ವೇಶ್ವರ ರಾವ್‌ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಅವರನ್ನು ವಿಶಾಖಪಟ್ಟಣ ಜಿಲ್ಲೆಯ ಲಿಪಿಟ್ಟಿಪಟ್ಟು ಎಂಬಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರು ಭಾನುವಾರ ಬೆಳಿಗ್ಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಆಂಧ್ರ ಪ‍್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಹಾವಳಿ ತಗ್ಗಿತ್ತು. ಆದರೆ ಒಮ್ಮಿಂದೊಮ್ಮೆಲೆ ಭೀಕರವಾಗಿ ದಾಳಿ ನಡೆಸಿದ್ದಾರೆ.

ಸರ್ವೇಶ್ವರ ರಾವ್ ಮತ್ತು ಸಿವೇರಿ ಸೋಮು ಅವರು ‘ಗ್ರಾಮ ದರ್ಶಿನಿ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಿಪ್ಪಿಟಿಪುಟ್ಟ ಗ್ರಾಮಕ್ಕೆ ಹೋಗಿದ್ದಾಗ ನಕ್ಸಲರು ಈ ದುಷ್ಕೃತ್ಯ ಎಸಗಿದ್ದಾರೆ. ಈ ಇಬ್ಬರಿಗೂ ಅತ್ಯಂತ ಹತ್ತಿರದಿಂದ ಗುಂಡಿಕ್ಕಲಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟರು.

‘ಗ್ರಾಮಸ್ಥರ ಜತೆಗೆ ಬಂದ ನಕ್ಸಲರ ಗುಂಪು ಶಾಸಕರ ಕಾರನ್ನು ತಡೆದಿದೆ. ಶಾಸಕ ಮತ್ತು ಮಾಜಿ ಶಾಸಕರ ಭದ್ರತಾ ಸಿಬ್ಬಂದಿ ಕಾರಿನಿಂದ ಇಳಿದಾಗ ಅವರಲ್ಲಿದ್ದ ಎ.ಕೆ–47 ಬಂದೂಕನ್ನು ನಕ್ಸಲರು ಕಸಿದುಕೊಂಡರು. ಅದೇ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದರು’ ಎಂದು ವಿಶಾಖಪಟ್ಟಣ ವಿಭಾಗದ ಪೊಲೀಸ್‌ ಉಪ ಮಹಾನಿರೀಕ್ಷಕ ಸಿ.ಎಚ್‌. ಶ್ರೀಕಾಂತ್‌ ತಿಳಿಸಿದ್ದಾರೆ.

ಹತ್ಯೆಗೆ ಮೊದಲು ಶಾಸಕ ಮತ್ತು ಮಾಜಿ ಶಾಸಕರ ಜತೆಗೆ ನಕ್ಸಲರ ಗುಂಪು ವಾಗ್ವಾದ ನಡೆಸಿದೆ.

ಸರ್ವೇಶ್ವರ ಅವರು 2014ರ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅರಕು ಕ್ಷೇತ್ರದಲ್ಲಿ ಗೆದ್ದಿದ್ದರು. ಬಳಿಕ ಅವರು ಟಿಡಿಪಿಗೆ ಸೇರ್ಪಡೆಯಾಗಿದ್ದರು.

‘ನಕ್ಸಲರು ಬಂದೂಕು ತೋರಿಸಿ ಎಲ್ಲರೂ ಒಂದೆಡೆ ನಿಲ್ಲುವಂತೆ ಮಾಡಿದರು. ಸರ್ವೇಶ್ವರ ಮತ್ತು ಸೋಮ ಅವರನ್ನು ಕೆಲವು ನಕ್ಸಲರು ಬೇರೆ ಬೇರೆ ಕಡೆಗೆ ಕರೆದೊಯ್ದರು. ಇಬ್ಬರ ಕೈಗಳನ್ನೂ ಹಿಂದಕ್ಕೆ ಕಟ್ಟಿದ್ದರು’ ಎಂದು ಸೋಮ ಅವರ ಕಾರು ಚಾಲಕ ಕೆ. ಚಿಟ್ಟಿಬಾಬು ತಿಳಿಸಿದ್ದಾರೆ.

‘ನಕ್ಸಲರನ್ನು ಕಂಡಾಗ ವಾಹನವನ್ನು ಹಿಂದಕ್ಕೆ ತಿರುಗಿಸಲು ನಾನು ಯತ್ನಿಸಿದೆ. ಆದರೆ ವಾಹನ ತಡೆಯುವಲ್ಲಿ ಅವರು ಯಶಸ್ವಿಯಾದರು. ಶಾಸಕ ಯಾರು ಎಂದು ತೋರಿಸುವಂತೆ ನಕ್ಸಲರು ಹೇಳಿದರು. ಮಿಸುಕಾಡಿದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಹೆದರಿಸಿದರು. ನಮ್ಮ ಶಾಸಕರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಚಿಟ್ಟಿಬಾಬು ಘಟನೆಯನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮೆರಿಕದ ಪ್ರವಾಸದಲ್ಲಿದ್ದಾರೆ. ಘಟನೆಯ ಬಗ್ಗೆ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಚಿನ ರಾಜಪ್ಪ ಅವರನ್ನು ವಿಶಾಖಪಟ್ಟಣಕ್ಕೆ ತೆರಳುವಂತೆ  ಸೂಚಿಸಿದ್ದಾರೆ. ನಕ್ಸಲರ ಹಾವಳಿ ಇರುವ ಪ್ರದೇಶಗಳಲ್ಲಿನ ಜನಪ್ರತಿನಿಧಿಗಳ ಭದ್ರತೆ ಬಿಗಿಗೊಳಿಸಲು ನಿರ್ದೇಶಿಸಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜನರ ಆಕ್ರೋಶ

ಮೃತ ದೇಹಗಳನ್ನು ಡುಂಬ್ರಿಗುಡಕ್ಕೆ ತರಲಾಯಿತು. ಅಲ್ಲಿ ಸೇರಿದ್ದ ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಮುಖಂಡರನ್ನು ರಕ್ಷಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಯನ್ನು ಸುಟ್ಟು ಹಾಕಿದ್ದಾರೆ. ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಮೃತದೇಹಗಳನ್ನು ವಿಶಾಖಪಟ್ಟಣಕ್ಕೆ ಸಾಗಿಸುವುದಕ್ಕೂ ಅಡ್ಡಿ‍ಪಡಿಸಿದ್ದಾರೆ.

ಗಡಿ ಭಾಗದಲ್ಲಿ ಸಕ್ರಿಯ

ಆಂಧ್ರ ಪ್ರದೇಶ ಮತ್ತು ಒಡಿಶಾ ಗಡಿ ಭಾಗದಲ್ಲಿ ನಕ್ಸಲರು ಸಕ್ರಿಯರಾಗಿದ್ದಾರೆ. ಈ ಪ್ರದೇಶದಲ್ಲಿ ‘ವರೋತ್ಸವಂ’ ಎಂಬ ಕಾರ್ಯಕ್ರಮವನ್ನು ಇದೇ 21ರಿಂದ ನಡೆಸುತ್ತಿದ್ದಾರೆ. ಆಂಧ್ರ–ಒಡಿಶಾ ಗಡಿ ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ ನೇತೃತ್ವದಲ್ಲಿ ಈ ಭೀಕರ ದಾಳಿ ನಡೆಸಲಾಗಿದೆ. ಕೃತ್ಯ ಎಸಗುವಾಗ 5–60 ನಕ್ಸಲರು ಇದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಬೆದರಿಕೆಗೆ ಸೊಪ್ಪು ಹಾಕದ ಶಾಸಕ

ಸರ್ವೇಶ್ವರ ರಾವ್‌ ಅವರ ಮೇಲೆ ನಕ್ಸಲರು ಮೊದಲಿನಿಂದಲೂ ಕಣ್ಣಿಟ್ಟಿದ್ದರು. ಇತ್ತೀಚೆಗೆ ಅವರಿಗೆ ಬೆದರಿಕೆ ಕರೆಗಳೂ ಬಂದಿದ್ದವು. ಆದರೆ, ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಹೇಳುತ್ತಿದ್ದ ಅವರು, ಬೆದರಿಕೆಯನ್ನು ನಿರ್ಲಕ್ಷಿಸಿದ್ದರು ಎಂದು ಸರ್ವೇಶ್ವರ ಅವರ ಆಪ್ತರು ಹೇಳಿದ್ದಾರೆ.

ಸರ್ವೇಶ್ವರ ಅವರು ತಮ್ಮ ಭಾವನ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಕಪ್ಪುಕಲ್ಲು ಗಣಿಗಾರಿಕೆಯಿಂದ ತಮ್ಮ ಮನೆಗಳು ಹಾನಿಯಾಗುತ್ತಿವೆ ಎಂದು ಈ ಪ್ರದೇಶದ ಬುಡಕಟ್ಟು ಜನರು ಆರೋ‍ಪಿಸಿದ್ದರು. ಜುಲೈಯಲ್ಲಿ ಸರ್ವೇಶ್ವರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.

ಕಾರಣ ಏನು?

ಸಿವೇರಿ ಸೋಮ ಅವರು ಗಡಿ ಭಾಗದಲ್ಲಿ ನಕ್ಸಲರ ಚಲನವಲನಗಳ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ನಕ್ಸಲರು ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !