ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಘರ್ಷಣೆ: ಉಳಿದೆಡೆ ಶಾಂತ

ಐದನೇ ಹಂತದಲ್ಲಿ 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ ಪೂರ್ಣ, ಪುಲ್ವಾಮಾದಲ್ಲಿ ಗ್ರೆನೇಡ್‌ ಎಸೆತ
Last Updated 6 ಮೇ 2019, 20:21 IST
ಅಕ್ಷರ ಗಾತ್ರ

ನವದೆಹಲಿ: ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ನಡೆದ ಐದನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ಕೆಲವೆಡೆ ಘರ್ಷಣೆಗಳು ನಡೆದಿವೆ. ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡುಬಂದಿದ್ದರೆ, ಜಮ್ಮು ಕಾಶ್ಮೀರದ ಒಂದು ಮತಗಟ್ಟೆಯ ಮೇಲೆ ಗ್ರೆನೇಡ್‌ ದಾಳಿ ನಡೆದಿದೆ. ಉಳಿದ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು.

ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೆಲವೆಡೆ ಬಿಜೆಪಿ– ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆಗಳು ಸಂಭವಿಸಿದ್ದವು. ಐದನೇ ಹಂತದಲ್ಲೂ ಅದು ಪುನರಾವರ್ತನೆಯಾಗಿದೆ. ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆದಿದೆ. ಇವುಗಳಲ್ಲಿ ಬನಗಾಂವ್‌, ಬಾರಕ್‌ಪುರ, ಹೂಗ್ಲಿ ಮತ್ತು ಹೌರಾ ಕ್ಷೇತ್ರಗಳ ಕೆಲವೆಡೆ ಘರ್ಷಣೆ ನಡೆದಿದೆ.

ಬಾರಕ್‌ಪುರ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂಬ ದೂರು ಕೇಳಿಬಂದು, ಅದನ್ನು ಪ್ರಶ್ನಿಸಲು ಹೋದ ಬಿಜೆಪಿ ಅಭ್ಯರ್ಥಿ ಅರ್ಜುನ್‌ ಸಿಂಗ್‌ ಅವರು ಮತಗಟ್ಟೆಯೊಳಗೆ ಪ್ರವೇಶಿಸಲು ಮುಂದಾದರು.
ಅವರನ್ನು ರಕ್ಷಣಾ ಪಡೆಯ ಸಿಬ್ಬಂದಿ ತಡೆದರು. ಆ ಸಂದರ್ಭದಲ್ಲಿ ಅವರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದರು.

‘ಬಾರಕ್‌ಪುರ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆಯುತ್ತಿದ್ದು ಅದನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿರಲಿಲ್ಲ’ ಎಂದು ಸಿಂಗ್‌ ಆರೋಪಿಸಿದರು. ಐದನೇ ಹಂತದದಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸೂಕ್ಷ್ಮ ಮತಗಟ್ಟೆಗಳು ಇದ್ದುದು ಈ ಕ್ಷೇತ್ರದಲ್ಲೇ.

ಹೌರಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ, ಮಾಜಿ ಫುಟ್‌ಬಾಲ್‌ ಪಟು ಪ್ರಸೂನ್‌ ಬಂದೋಪಾಧ್ಯಾಯ ಅವರ ಮೇಲೆ ಹಲ್ಲೆ ನಡೆದಿದೆ. ಅವರು ಮತಗಟ್ಟೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಕೇಂದ್ರದ ರಕ್ಷಣಾ ಪಡೆಯವರೇ ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಬನಗಾಂವ್‌ ಕ್ಷೇತ್ರದ ಹಿಂಗ್ಲಿ ಮತಗಟ್ಟೆಯ ಹೊರಗೆ ಬಿಜೆಪಿ– ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಹೊರಗಡೆಯಿಂದ ಮತಗಟ್ಟೆಯ ಮೇಲೆ ನಾಡ ಬಾಂಬ್‌ ಎಸೆದ ಘಟನೆ ವರದಿಯಾಗಿದೆ. ಇಬ್ಬರಿಗೆ ಗಾಯಗಳಾಗಿವೆ.

ಕೆಲವೆಡೆ ಅಭ್ಯರ್ಥಿಗಳು ಮತಗಟ್ಟೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದು, ಒಬ್ಬ ಮತದಾರನ ಪರವಾಗಿ ಬೇರೆಯವರು ಮತ ಚಲಾವಣೆ ಮಾಡಿರುವುದು ಮುಂತಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.

ಗ್ರೆನೇಡ್‌ ದಾಳಿ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರೊಹಮೂ ಮತಗಟ್ಟೆಯ ಮೇಲೆ ಉಗ್ರರು ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ.

‘ಈ ಬಾರಿಯ ಚುನಾವಣೆಯಲ್ಲಿ ಇದೇ ಮೊದಲಬಾರಿ ಉಗ್ರರ ದಾಳಿ ನಡೆದಿದೆ. ಘಟನೆ ನಡೆದ ಕೂಡಲೇ ಭದ್ರತಾ ಪಡೆಯ ಸಿಬ್ಬಂದಿ ಸುತ್ತುವರಿದು ಮತದಾರರಿಗೆ ರಕ್ಷಣೆ ಒದಗಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆ ವಶ: ಆರೋಪ

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಕೇಂದ್ರ ಸಚಿವೆ, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ, ‘ಅಧಿಕಾರಿಗಳ ನೆರವಿನಲ್ಲಿಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ಮತಗಟ್ಟೆ ವಶಪಡಿಸಿ
ಕೊಂಡಿದ್ದಾರೆ’ ಎಂದು ಆರೋಪಿಸಿದರು.

ಸೋಮವಾರ ಈ ಸಂಬಂಧ ಟ್ವೀಟ್‌ ಮಾಡಿರುವ ಸ್ಮೃತಿ ಅವರು, ‘ಮತಗಟ್ಟೆ ಅಧಿಕಾರಿಯು ವೃದ್ಧ ಮತದಾರರೊಬ್ಬರಿಗೆ ಹಸ್ತದ ಚಿಹ್ನೆ ಎದುರಿನ ಬಟನ್‌ ಒತ್ತುವಂತೆ ಒತ್ತಡ ಹೇರಿದ್ದಾರೆ. ಆದರೆ, ಅವರು ಬಿಜೆಪಿಗೆ ಮತ ನೀಡಲು ಬಯಸಿದ್ದರು’ ಎಂದಿದ್ದಾರೆ.

ಈ ಬಗ್ಗೆ ಅವರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದು, ಇದನ್ನು ಆಧರಿಸಿ ಆಯೋಗವು ಅಮೇಠಿ ಕ್ಷೇತ್ರದ ಗೌರಿಗಂಜ್‌ ಮತಗಟ್ಟೆಗೆ ನಿಯೋಜಿಸಿದ್ದ ಅಧಿಕಾರಿಯನ್ನು ಬದಲಿಸಿತು. ಈ ಬಗ್ಗ ತನಿಖೆಗೆ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ‘ರಾಹುಲ್‌, ಉತ್ತರ ಕೊಡಿ. ಇದೆಂಥ ರಾಜಕಾರಣ’ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ‘ಪ್ರಿಯಾಂಕಾ ತನ್ನ ಪತಿ ಹೆಸರಿಗಿಂತಲೂ ನನ್ನ ಹೆಸರನ್ನೇ ಹೆಚ್ಚು ಉಚ್ಚರಿಸುತ್ತಾರೆ’ ಎಂದಿದ್ದಾರೆ.

ಮತಯಂತ್ರವನ್ನೇ ಬೀದಿಗೆಸೆದ!

ಪಟ್ನಾ: ತಾಯಿ ತನ್ನ ಇಚ್ಛೆಗೆ ವಿರುದ್ಧವಾಗಿ ಮತ ಚಲಾಯಿಸಿದಳು ಎಂದು ಕುಪಿತರಾದ ರಂಜಿತ್‌ ಎಂಬುವರು ವಿದ್ಯುನ್ಮಾನ ಮತಯಂತ್ರವನ್ನು ನಾಶಪಡಿಸಿದ ಘಟನೆ ಇಲ್ಲಿ ನಡೆದಿದೆ.

ಮತಯಂತ್ರ ಜಖಂಗೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸರನ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಬಳಿಕ, ಹೊಸ ಮತಯಂತ್ರ ಬಳಸಿದ್ದು, ಮತದಾನ ಸುಗಮವಾಗಿ ನಡೆದಿದೆ.

‘ಮತ ನೀಡುವುದು ನನ್ನ ಹಕ್ಕು. ನನ್ನ ಇಚ್ಛೆಯನುಸಾರ ಮತ ನೀಡಿದ್ದೇನೆ’ ಎಂದು ತಾಯಿ ಹೇಳಿದಾಗ ಮೊದಲು ಅಸಂತೋಷ ವ್ಯಕ್ತಪಡಿಸಿದ ಆರೋಪಿ, ಬಳಿಕ ಕುಪಿತಗೊಂಡು ಮತಗಟ್ಟೆಗೆ ಏಕಾಏಕಿ ನುಗ್ಗಿ ಇವಿಎಂ ಹೊರತಂದು ಬೀದಿಗೆ ಎಸೆದಿದ್ದಾನೆ.

ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್‌ಪ್ರತಾಪ್‌ ರೂಡಿ ಮತ್ತು ಆರ್‌ಜೆಡಿಯ ಚಂದ್ರಿಕಾ ರಾಯ್‌ ಅವರು ಕಣದಲ್ಲಿದ್ದಾರೆ. ಚಂದ್ರಿಕಾ ಅವರು ಲಾಲೂ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಅವರ ಮಾವ. ತೇಜ್‌ ಪ್ರತಾಪ್‌ ಮತ್ತು ಪತ್ನಿ ಐಶ್ವರ್ಯಾ ರಾಯ್‌ ಅವರ ನಡುವೆ ಭಿನ್ನಮತವಿದ್ದು, ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT