ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ತೆರೆಗೆ ಬರಲಿದೆ ಗಗನಯಾನಿ ಸಾಧನೆ

Last Updated 13 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಮುಂಬೈ: ಬಾಹ್ಯಾಕಾಶಕ್ಕೆ ಹೋಗಿ ಬಂದ ಭಾರತದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಅವರ ಸಾಧನೆ ಹಿಂದಿ ನಟ ಶಾರುಕ್‌ ಖಾನ್‌ ಮೂಲಕ ಬೆಳ್ಳಿ ತೆರೆಗೆ ಬರಲಿದೆ.

ಬಾಹ್ಯಾಕಾಶದಿಂದ ಭಾರತವು ಹೇಗೆ ಕಾಣಿಸುತ್ತದೆ ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕೇಳಿದ್ದಕ್ಕೆವಿಂಗ್‌ ಕಮಾಂಡರ್‌ (ನಿವೃತ್ತ) ಶರ್ಮಾ ಅವರು ‘ಸಾರೆ ಜಹಾಂ ಸೆ ಅಚ್ಛಾ’ ಎಂದು ಪ್ರಸಿದ್ಧವಾದ ಘೋಷಣೆ ಹೇಳಿದ್ದರು. ಇದು ಸಿನಿಮಾದ ಪ್ರಮುಖ ಅಂಶವಾಗಿರಲಿದೆ.

‘ನಿಜ, ನಾನು ಈ ಚಲನಚಿತ್ರದಲ್ಲಿ ನಟಿಸುತ್ತಿದ್ದೇನೆ. ಅವರ ಸಾಧನೆ ಬಗ್ಗೆ ಭಾರತೀಯರಲ್ಲಿ ಹೆಮ್ಮೆ ಇದೆ. ಈ ಯೋಜನೆ ನನ್ನ ಮನಸ್ಸು ತಟ್ಟಿದೆ’ ಎಂದು ಶಾರುಕ್‌ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಭಾರತೀಯ ವಾಯುಪಡೆಯ ಅಶೋಕ ಚಕ್ರ ಪುರಸ್ಕೃತ ಪೈಲಟ್‌, ವಿಂಗ್‌ ಕಮಾಂಡರ್‌ (ನಿ) ಶರ್ಮಾ ಅವರು ಸೋವಿಯತ್‌ ಒಕ್ಕೂಟದ ರಾಕೆಟ್‌ ಸೊಯುಜ್‌ ಟಿ–11 ಮೂಲಕ 1984ರ ಏಪ್ರಿಲ್‌ 2ರಂದು ಬಾಹ್ಯಾಕಾಶಕ್ಕೆ ಹೋಗಿದ್ದರು. ಸಲ್ಯುಟ್‌ 7 ಬಾಹ್ಯಾಕಾಶ ನಿಲ್ದಾಣದಲ್ಲಿ 7 ದಿನ, 21 ಗಂಟೆ, 40 ನಿಮಿಷಗಳವರೆಗೆ ಇದ್ದು, ನಂತರ ಭೂಮಿಗೆ ಮರಳಿದ್ದರು.

‘ನನ್ನ ಝೀರೊ ಚಿತ್ರ ಡಿಸೆಂಬರ್‌ 21ರಂದು ಬಿಡುಗಡೆಯಾಗಲಿದೆ. ಕೆಲ ಸಮಯ ವಿಶ್ರಾಂತಿ ಪಡೆದು ನಂತರ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆ ಆರಂಭವಾದ ನಂತರ ಶರ್ಮಾ ಅವರನ್ನು ಭೇಟಿ ಮಾಡುತ್ತೇನೆ. ಅವರನ್ನು ಅರ್ಥ ಮಾಡಿಕೊಳ್ಳುತ್ತೇನೆ. ಬಾಹ್ಯಾಕಾಶ ಹಾರಾಟದ ಅನುಭವ ಕುರಿತು ಚರ್ಚಿಸುತ್ತೇನೆ’ ಎಂದು ಶಾರುಕ್‌ ಹೇಳಿದರು.

ಈ ಮೊದಲು ಅಮೀರ್‌ ಖಾನ್‌ ಅವರು ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಅದು ಕೈಗೂಡಲಿಲ್ಲ. ನಂತರ ಅಮೀರ್‌ ಈ ಯೋಜನೆ ಕೈಗೆತ್ತಿಕೊಳ್ಳಲು ಶಾರುಕ್‌ ಅವರನ್ನು ಕೇಳಿಕೊಂಡಿದ್ದರು. 2019ರ ಮಧ್ಯ ಭಾಗದಲ್ಲಿ ಈ ಚಿತ್ರ ನಿರ್ಮಾಣ ಆರಂಭವಾಗುವ ಸಾಧ್ಯತೆ ಇದೆ.

‘ಸದ್ಯ ಈ ಚಿತ್ರಕ್ಕೆ ಸೆಲ್ಯೂಟ್‌ ಮತ್ತು ಸಾರೆ ಜಹಾಂ ಸೆ ಅಚ್ಛಾ ಎಂಬ ಎರಡು ಶೀರ್ಷಿಕೆಗಳ ಬಗ್ಗೆ ಯೋಚನೆ ಮಾಡಲಾಗಿದೆ. ಈ ಬಗ್ಗೆ ಚಿಂತನೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದು ತಿಳಿಸಿದರು.

‘ನಮ್ಮ ಬಾಲ್ಯದ ದಿನಗಳಲ್ಲಿಯೇ ಶರ್ಮಾ ಅವರು ನಮ್ಮ ಆದರ್ಶ ಪುರುಷರಲ್ಲಿ ಒಬ್ಬರಾಗಿದ್ದರು’ ಎಂದು ಶಾರುಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT