ಗುರುವಾರ , ಜೂನ್ 17, 2021
21 °C

ದೀಪಿಕಾ ಪಡುಕೋಣೆಯ ಮನತಟ್ಟಿದ ಆಸಿಡ್ ಸಂತ್ರಸ್ತೆಯ ಬದುಕು ಹೀಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಾವು ಭಾರತೀಯರು. ಯಾರಾದರೂ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಗೊತ್ತಾದರೆ ಸಾಕು ಕರೆಕರೆದು ಸನ್ಮಾನಿಸುತ್ತೇವೆ, ಪ್ರಶಸ್ತಿ ಕೊಟ್ಟು ಪುರಸ್ಕರಿಸುತ್ತೇವೆ, ಶಾಲು ಹೊದೆಸಿ ಗೌರವಿಸುತ್ತೇವೆ. ಆದರೆ ಸಾಧಕರ ಬದುಕಿನ ಅಗತ್ಯಗಳು ಏನು? ಅವರಿಗೆ ಯಾವ ರೀತಿಯ ನೆರವು ಬೇಕಾಗಿದೆ ಎಂದು ಯೋಚಿಸುವುದೇ ಇಲ್ಲ...’

– ಇದು ‘ಹ್ಯೂಮನ್ಸ್ ಫಾರ್ ಹ್ಯುಮಾನಿಟಿ’ (ಮನುಷ್ಯತ್ವಕ್ಕಾಗಿ ಮನುಷ್ಯರು) ಸರ್ಕಾರೇತರ ಸಂಸ್ಥೆಯ ಸ್ಥಾಪಕ ಅನುರಾಗ್ ಚೌಹಾಣ್ ಅವರ ಮಾತು. ಈ ಮಾತು ಹೇಳುವಾಗ ಅವರ ಮನಸ್ಸಿನಲ್ಲಿ ಇದ್ದುದು ಲಕ್ಷ್ಮೀ ಅಗರ್‌ವಾಲ್. ಈ ಹೆಸರು ಕಿವಿಗೆ ಬಿದ್ದ ತಕ್ಷಣ ನಿಮಗೆ ದೀಪಿಕಾ ಪಡುಕೋಣೆ ನೆನಪಾಯಿತೆ? ಹೌದು, ದೀಪಿಕಾ ಪಡುಕೋಣೆ ಇದೀಗ ಸ್ವತಃ ತಾವೇ ನಿರ್ಮಾಪಕಿಯಾಗಿ ಬಯೋಪಿಕ್ ನಿರ್ಮಿಸಲು ಮುಂದಾಗುವಂತೆ ಮಾಡಿದ ಸಾಧಕಿ ಈ ಲಕ್ಷ್ಮೀ ಅಗರ್‌ವಾಲ್.

ಆಸಿಡ್ ದಾಳಿ ವಿರೋಧಿ ಹೋರಾಟಗಳು ಮತ್ತು ಕಾನೂನು ಸಮರಕ್ಕೆ ಜೀವನ ಮುಡಿಪಾಗಿಟ್ಟವರು ಲಕ್ಷ್ಮೀ. ವೈಯಕ್ತಿಕವಾಗಿ ಸಾಕಷ್ಟು ಕಷ್ಟನಷ್ಟ ಅನುಭವಿಸಿರುವ ಆಕೆಯ ಬದುಕಿನ ಕಥೆಯೇ ಕೊನೆಯಲ್ಲಿ ‘ಶುಭಂ’ ಎಂದು ಹ್ಯಾಪಿ ಎಂಡಿಂಗ್ ತೋರಿಸುವ ಒಂದು ದುರಂತ ಸಿನಿಮಾದಂತಿದೆ. ಈ ಸಾಧಕ ಮಹಿಳೆ ಸವೆಸಿದ ಸವಾಲಿನ ಹಾದಿಯ ಪರಿಚಯ ಇಲ್ಲಿದೆ.

***

‘ಲಕ್ಷ್ಮೀ ಅವರ ಹಣಕಾಸಿನ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ. ಪೂರ್ವ ದೆಹಲಿಯಲ್ಲಿ ವಾಸವಿರುವ ಮನೆಯ ಬಾಡಿಗೆ ಕಟ್ಟಲು ಅವರಿಗೆ ಸಾಧ್ಯವಾಗುತ್ತಿಲ್ಲ’ ಎನ್ನುವ ವರದಿಯೊಂದು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಅತ್ತ ಮುಂಬೈನಲ್ಲಿ ದೀಪಿಕಾ ಪಡುಕೋಣೆ ‘ಲಕ್ಷ್ಮೀ ಬಯೋಪಿಕ್‌ನಲ್ಲಿ ನಾನು ನಟಿಸುತ್ತೇನೆ. ಮಾತ್ರವಲ್ಲ ಸಿನಿಮಾದ ನಿರ್ಮಾಣ ಹೊಣೆಯನ್ನೂ ಹೊರುತ್ತೇನೆ’ ಎಂದು ಹೇಳಿದ್ದರು.

ಸಂಘರ್ಷದಿಂದಲೇ ಜೀವನ ಕಟ್ಟಿಕೊಂಡ ಲಕ್ಷ್ಮೀಗೆ ಇಂಥ ಏರಿಳಿತಗಳು, ನಗುವನ್ನು ಹಿಂಬಾಲಿಸುವ ನೋವು, ಅದರ ಬೆನ್ನಿಗೇ ಸುರಿಯುವ ನಲಿವು ಸಹಜ ಎನಿಸಿಬಿಟ್ಟಿದೆ. ಅವರ ಸ್ವಭಾವ ಇಷ್ಟು ಮಾಗಲು ಬದುಕು ಸಾಗಿಬಂದ ಹಾದಿಯೂ ಮುಖ್ಯಕಾರಣ.

ಸ್ವತಃ ಆಸಿಡ್ ದಾಳಿಯ ಸಂತ್ರಸ್ತೆಯಾಗಿರುವ ಲಕ್ಷ್ಮಿ ಅಗರ್‌ವಾಲ್ ತಮ್ಮ ಬದುಕನ್ನು ಆಸಿಡ್ ದಾಳಿ ವಿರೋಧಿ ಹೋರಾಟಕ್ಕೆ ಮುಡಿಪಿಟ್ಟವರು. ಸಾಲುಸಾಲು ಕಷ್ಟಗಳನ್ನೇ ಅನುಭವಿಸಿದ್ದ ಲಕ್ಷ್ಮಿ ಅವರ ಬಾಳಿನಲ್ಲಿ ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಅವರಿಗೆ ಹೊಸ ಹುರುಪು ತುಂಬಿವೆ. ‘ನನ್ನ ಬದುಕಿನಲ್ಲಿ ಇಷ್ಟೆಲ್ಲಾ ಆಗ್ತಿದೆಯಾ’ ಎಂದು ಅವರು ತಮ್ಮನ್ನು ತಾವೇ ಹಲವು ಬಾರಿ ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.

ಜೊತೆಯಲ್ಲಿದ್ದ ಸಂಗಾತಿ ಬಿಟ್ಟುಹೋದ ನಂತರ ಲಕ್ಷ್ಮಿ ಒಂಟಿಯಾಗಿದ್ದರು. ಜೀವನದ ಅಗತ್ಯಗಳನ್ನು ಪೂರೈಸುವಷ್ಟು ಸಂಬಳ ತರುವ ಕೆಲಸವಿರಲಿಲ್ಲ, ಮಡಿಲಲ್ಲಿರುವ ಕಂದನ ಹೊಟ್ಟೆ ತುಂಬಿಸುವುದು ಕಷ್ಟವಾಗಿತ್ತು, ಪೂರ್ವ ದೆಹಲಿಯಲ್ಲಿದ್ದ ಬಾಡಿಗೆಗಿದ್ದ ಫ್ಲಾಟ್ ಖಾಲಿ ಮಾಡುವಂತೆ ಮಾಲೀಕರು ಒತ್ತಡ ಹಾಕುತ್ತಿದ್ದರು. ‘ಇನ್ನೂ ಏನೇನು ಕಾದಿದೆಯೋ’ ಎಂದು ಆತಂಕದಲ್ಲಿದ್ದ ಲಕ್ಷ್ಮಿ ಅವರ ಕಿವಿಗೆ ನಂತರ ಬಿದ್ದಿದ್ದು ಸಾಲುಸಾಲು ಸಿಹಿಸುದ್ದಿಗಳು.

ಲಕ್ಷ್ಮಿ ಅವರ ಬಯೊಪಿಕ್ ನಿರ್ಮಿಸಲು ಮತ್ತು ಸ್ವತಃ ತಾವೇ ಲಕ್ಷ್ಮಿ ಪಾತ್ರಧಾರಿಯಾಗಲು ಬಾಲಿವುಡ್‌ನ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಮುಂದೆ ಬಂದರು. ಈ ಚಿತ್ರದ ನಿರ್ದೇಶನದ ಹೊಣೆಯನ್ನು ಮೇಘನಾ ಗುಲ್ಜಾರ್ ಹೊತ್ತುಕೊಂಡಿದ್ದಾರೆ. ಈ ವಿಷಯ ತಿಳಿದ ನಂತರ ಲಕ್ಷ್ಮೀ ಹೇಳಿದ್ದು ಏನು ಗೊತ್ತೆ? ‘ಬದುಕು ಒಂದು ಥರ ಹಾವು ಏಣಿ ಆಟವಾಗಿದೆ’.

‘ಲಕ್ಷ್ಮಿ ಅವರ ಕಥೆ ನನ್ನ ಮನಸ್ಸು ತಟ್ಟಿತು. ಇದು ಕೇವಲ ಹಿಂಸೆ ಅಥವಾ ಕ್ರೌರ್ಯದ ಕಥೆಯಷ್ಟೇ ಆಗಿಲ್ಲ. ಸ್ಥೈರ್ಯ, ಧೈರ್ಯ, ನಿರೀಕ್ಷೆ ಮತ್ತು ಗೆಲುವಿನ ಎಳೆಗಳೂ ಈ ಕಥೆಯಲ್ಲಿವೆ. ವೈಯಕ್ತಿಕವಾಗಿ ಮತ್ತು ಸೃಜನಾತ್ಮಕವಾಗಿ ನನ್ನನ್ನು ಈ ಕಥೆ ಗಾಢವಾಗಿ ಆವರಿಸಿಕೊಂಡಿತು. ಹೀಗಾಗಿಯೇ ಈ ಚಿತ್ರವನ್ನು ನಾನೇ ನಿರ್ಮಿಸಲು ನಿರ್ಧರಿಸಿದೆ’ ಎಂದು ದೀಪಿಕಾ ಪಡುಕೋಣೆ ‘ಮುಂಬೈ ಮಿರರ್’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಲಕ್ಷ್ಮಿ ಅವರ ಹಣಕಾಸಿನ ಪರಿಸ್ಥಿತಿ ಬಹಿರಂಗಗೊಂಡ ನಂತರ ನೆರವಿನ ಭರವಸೆಯೂ ಸಾಕಷ್ಟು ದೊರೆತಿದೆ. ಬಾಲಿವುಡ್ ಸ್ಟಾರ್ ಅಕ್ಷಯ್‌ಕುಮಾರ್ ಸೇರಿ ಹಲವರು ಉದ್ಯೋಗಾವಕಾಶ, ಹಣಕಾಸಿನ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಜೀವನ ನಾಟಕಕ್ಕೆ ಈ ಬೆಳವಣಿಗೆಗಳು ಹೊಸ ಪುಟಗಳನ್ನು ಸೇರಿಸಿವೆ. ಇವೆಲ್ಲವೂ 28ರ ಹರೆಯದ ಈ ಯುವತಿಯ ಮೊಗದಲ್ಲಿ ನಗು ಮೂಡಿಸಿವೆ.

ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀಗೂ (ಬರ್ತ್‌ ಡೇ: ಜೂನ್ 1, 1990) ಎಲ್ಲ ಹರೆಯದ ಹುಡುಗಿಯರಂತೆ ಬದುಕಿನ ಬಗ್ಗೆ ಬಣ್ಣಬಣ್ಣದ ಕನಸುಗಳಿದ್ದವು. ಆದರೆ 2005ರಲ್ಲಿ ಆಕೆಯ ಮೇಲೆ ಆಸಿಡ್ ದಾಳಿ ನಡೆಯಿತು. ತನ್ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದನ್ನೇ ನೆಪ ಮಾಡಿಕೊಂಡ ದುಷ್ಟನೊಬ್ಬ ತನಗಿಂತಲೂ ವಯಸ್ಸಿನಲ್ಲಿ ಅರ್ಧದಷ್ಟು ಕಿರಿಯಳಾಗಿದ್ದ ಲಕ್ಷ್ಮೀಯ ಮೇಲೆ ಆಸಿಡ್ ತುಂಬಿದ್ದ ಬಿಯರ್ ಬಾಟಲಿ ಎಸೆದಿದ್ದ. ‘ನನ್ನನ್ನೇ ಮದುವೆಯಾಗಬೇಕು’ ಎಂದು ಸುಮಾರು ಎರಡು ವರ್ಷಗಳ ಕಾಲ ಈತ ಲಕ್ಷ್ಮೀಯನ್ನು ಪೀಡಿಸಿದ್ದ.


ಆಸಿಡ್ ದಾಳಿಗೂ ಮೊದಲು ಲಕ್ಷ್ಮಿ

ಆಸಿಡ್ ಅಟ್ಯಾಕ್ ಆದ ನಂತರದ ದಿನಗಳನ್ನು ಲಕ್ಷ್ಮಿ ನೆನಪಿಸಿಕೊಳ್ಳುವುದು ಹೀಗೆ...

‘ಆಸಿಡ್ ಬಾಟಲಿ ಮುಖದ ಮೇಲೆ ಒಡೆದ ನಂತರ ನನ್ನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಸುಮಾರು ಮೂರು ತಿಂಗಳು ಇರಬೇಕಾಯಿತು. ನಾನಿದ್ದ ವಾರ್ಡ್‌ನಲ್ಲಿ ಕನ್ನಡಿಗಳೇ ಇರಲಿಲ್ಲ. ಪ್ರತಿದಿನ ಮುಂಜಾನೆ ನರ್ಸ್‌ ಒಬ್ಬರು ಒಂದು ಬಟ್ಟಲು ನೀರು ತಂದು ದೇಹಶುದ್ಧಿಗೆ ನೆರವಾಗುತ್ತಿದ್ದರು. ಆ ನೀರಿನಲ್ಲಿ ನನ್ನ ಮುಖ ನೋಡಿಕೊಳ್ಳಲು ಯತ್ನಿಸುತ್ತಿದ್ದೆ. ಆದರೆ ಕಣ್ಣುಬಿಟ್ಟು ಮುಖದ ಉಳಿದೆಲ್ಲ ಭಾಗ ಬ್ಯಾಂಡೇಜ್ ಸುತ್ತಿದ್ದ ಆಕಾರವೊಂದು ಮಾತ್ರ ಗೋಚರಿಸುತ್ತಿತ್ತು. ನನ್ನ ಮೂಗಿನ ಮೇಲೆ ಒಂದು ಮಚ್ಚೆ ಇತ್ತು. ಆಪರೇಷನ್ ಮಾಡುವಾಗ ಆ ಮಚ್ಚೆಗೆ ಏನಾದರೂ ಮಾಡಲು ಸಾಧ್ಯವೆ ಎಂದು ಡಾಕ್ಟರ್‌ಗೆ ಕೇಳಬೇಕು ಅಂದುಕೊಂಡಿದ್ದೆ. ಆದರೆ, ನನ್ನ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡ ನಂತರ ಮಾತೇ ಹೊರಡಲಿಲ್ಲ. ಕಣ್ಣುಗಳೂ ಕೂಡ ನನ್ನವೆಂದು ಅನ್ನಿಸಲಿಲ್ಲ. ನನ್ನ ಮುಖವೇ ಬೇರೆಯಾಗಿಬಿಟ್ಟಿತ್ತು’ ಎಂದು ಲಕ್ಷ್ಮಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಗಾರರಿಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಆಸಿಡ್ ದಾಳಿಯ ನಂತರ ಲಕ್ಷ್ಮಿ ಅವರ ಮುಖಕ್ಕೆ ಆಕಾರ ಕೊಡಲು ಹಲವು ಶಸ್ತ್ರಚಿಕಿತ್ಸೆಗಳು ನಡೆದವು. ವೈದ್ಯರು ಹಾಗೂಹೀಗೂ ಮುಖಕ್ಕೇನೋ ಒಂದು ಆಕಾರ ಕೊಟ್ಟರು, ಆದರೆ ಅವರ ಮನಸ್ಸು ಅನುಭವಿಸಿದ್ದ ಆಘಾತದಿಂದ ಹೊರಬರಲು ತುಂಬಾ ಹೆಣಗಾಡಬೇಕಾಯಿತು. ಈ ಎಲ್ಲದರ ನಡುವೆಯೂ ಆಕೆ ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ಮಾರಾಟ ವಿರೋಧಿಸಿ ಆಂದೋಲನವನ್ನೇ ನಡೆಸಿದರು. ಆಸಿಡ್ ದಾಳಿಯ ಸಂತ್ರಸ್ತರಿಗೆ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆ ಸಿಗಬೇಕು ಎಂದು ಪ್ರತಿಪಾದಿಸಿದರು.

ತನ್ನ ಅಪ್ಪ ಮತ್ತು ಮತ್ತೋರ್ವ ಆಸಿಡ್ ದಾಳಿ ಸಂತ್ರಸ್ತೆ ರೂಪಾ ಸಹಕಾರದಿಂದ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಸಿಡ್ ದಾಳಿ ಮಾಡುವವರಿಗೆ ಶೀಘ್ರ ಶಿಕ್ಷೆಯಾಗುವಂತೆ ಭಾರತೀಯ ಅಪರಾಧ ಸಂಹಿತೆ, ಪುರಾವೆ ಕಾಯ್ದೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಬದಲಾವಣೆ ತರಬೇಕು ಮತ್ತು ಕೆಲ ಹೊಸ ಅಂಶಗಳು ಸೇರ್ಪಡೆಯಾಗಬೇಕು ಎನ್ನುವುದು ಲಕ್ಷ್ಮಿ ವಾದವಾಗಿತ್ತು. ಸಂತ್ರಸ್ತೆಗೆ ಪರಿಹಾರ ನೀಡಬೇಕು, ದೇಶದಾದ್ಯಂತ ಆಸಿಡ್ ಮಾರಾಟದ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಅವರು ವಾದಿಸಿದ್ದರು. 

ನ್ಯಾಯಾಲಯ ಜುಲೈ 2013ರಂದು ಲಕ್ಷ್ಮೀ ವಾದವನ್ನು ಒಪ್ಪಿಕೊಂಡು ತೀರ್ಪು ನೀಡಿತು. ಆಸಿಡ್ ಮಾರುವಾಗ ಅನುಸರಿಸಬೇಕಾದ ನಿಯಮಾವಳಿಗಳನ್ನು ಪ್ರಕಟಿಸಿತು. ಅಪ್ರಾಪ್ತ ವಯಸ್ಕರಿಗೆ ಆಸಿಡ್ ಮಾರುವಂತಿಲ್ಲ. ಆಸಿಡ್ ಹಸ್ತಾಂತರಿಸುವ ಮೊದಲು ಭಾವಚಿತ್ರ ಇರುವ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದು ನಿರ್ಬಂಧಿಸಿತು. ಆಸಿಡ್‌ಗಳನ್ನು ಕೌಂಟರ್‌ಗಳಲ್ಲಿ ಮಾರುವಂತೆಯೇ ಇಲ್ಲ. ಒಂದು ವೇಳೆ ಮಾರಬೇಕು ಎಂದಾದರೆ ಮಾರಾಟಗಾರ ರಿಜಿಸ್ಟರ್ ಇರಿಸಿಕೊಳ್ಳಬೇಕು. ಅದರಲ್ಲಿ ಆಸಿಡ್ ಪಡೆದುಕೊಳ್ಳುವ ವ್ಯಕ್ತಿಯ ಹೆಸರು, ವಿಳಾಸ, ಯಾವ ಕಾರಣಕ್ಕೆ ಆಸಿಡ್ ಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇರಬೇಕು ಎಂದೂ ನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿತ್ತು.

‘ನ್ಯಾಯಾಲಯದ ಆದೇಶ ಉಲ್ಲಂಘಿಸಿದವರ ವಿರುದ್ಧ ‘1919ರ ಪಾಯಿಸನ್ಸ್‌ ಆ್ಯಕ್ಟ್’ ಅನ್ವಯ ವಿಚಾರಣೆ ನಡೆಸುವ, ದಂಡ ವಿಧಿಸುವ ಮತ್ತು ಶಿಸ್ತುಕ್ರಮ ಜರುಗಿಸುವ ಅಧಿಕಾರವನ್ನು ಉಪನ್ಯಾಯಿಕ ದಂಡಾಧಿಕಾರಿಗೆ ನೀಡಲಾಗಿದೆ’ ಎಂದು ನ್ಯಾಯಾಲಯ ಹೇಳಿತ್ತು. ಆಸಿಡ್ ದಾಳಿಯಿಂದ ಸಂತ್ರಸ್ತರಾದವರಿಗೆ ತಕ್ಷಣ ₹3 ಲಕ್ಷ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನೂ ನೀಡಿತ್ತು. ಅಪರಾಧ (ತಿದ್ದುಪಡಿ) ಕಾಯ್ದೆ 2013ರ ಅನ್ವಯ ಆಸಿಡ್ ದಾಳಿಯನ್ನು ಪ್ರತ್ಯೇಕ ಅಪರಾಧ ಎಂದು ಭಾರತೀಯ ದಂಡ ಸಂಹಿತೆಯಲ್ಲಿ ಸೇರಿಸಲಾಯಿತು. ಲಕ್ಷ್ಮಿಯ ಹೋರಾಟ ಇಷ್ಟಕ್ಕೇ ನಿಲ್ಲಲಿಲ್ಲ.

‘ಆಸಿಡ್ ಇಂದಿಗೂ ಅಂಗಡಿಗಳಲ್ಲಿ ಮುಕ್ತವಾಗಿ ಸಿಗುತ್ತಿದೆ. ನಮ್ಮ ಸ್ವಯಂ ಸೇವಕರು ಎಷ್ಟೋ ಕಡೆ ಆಸಿಡ್ ಖರೀದಿ ಮಾಡಿ ಬಂದಿದ್ದಾರೆ. ನಾನೂ ಕೂಡ ಆಸಿಡ್ ಖರೀದಿ ಮಾಡಿದ್ದೆ’ ಎಂದು ನವೆಂಬರ್ 2014ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲೆಂದೇ ನಾವು ‘ಶೂಟ್ ಆಸಿಡ್’ ಆಂದೋಲನ ಆರಂಭಿಸಿದೆವು. ಪ್ರತಿ ಜಿಲ್ಲೆಯಲ್ಲಿಯೂ ಆಸಿಡ್ ಮಾರಾಟದ ದತ್ತಾಂಶವನ್ನು ಮಾಹಿತಿ ಹಕ್ಕು ಮೂಲಕ ಪಡೆದುಕೊಳ್ಳಲು ಯತ್ನಿಸುತ್ತಿದ್ದೆವು. ದೇಶದ ವಾಸ್ತವ ಸ್ಥಿತಿ ಹೀಗಿದೆ ಎಂದು ನಾವು ಸಂಗ್ರಹಿಸಿದ ಮಾಹಿತಿಯನ್ನು ಸುಪ್ರೀಂಕೋರ್ಟ್‌ ಎದುರು ಇರಿಸುವುದು ನಮ್ಮ ಉದ್ದೇಶವಾಗಿತ್ತು’.

ಲಕ್ಷ್ಮಿ ಪಾಲಿಗೆ 2014 ಸ್ವಲ್ಪಸಿಹಿ, ಜಾಸ್ತಿಕಹಿ ಎನ್ನಬಹುದಾದ ವರ್ಷ. ಮಾರ್ಚ್ ತಿಂಗಳಲ್ಲಿ ಲಕ್ಷ್ಮಿ ಅಮೆರಿಕದ ‘ಇಂಟರ್‌ ನ್ಯಾಷನಲ್ ವುಮೆನ್ ಆಫ್ ಕರೇಜ್ ಅವಾರ್ಡ್’ ಪುರಸ್ಕಾರ ಪಡೆದುಕೊಂಡರು. ಅಂದು ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ಪತ್ನಿ ಮಿಷೆಲ್ ಒಬಾಮ ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಅದೇ ವರ್ಷ ಅವರ ಸೋದರ ಕ್ಷಯದಿಂದ ಮತ್ತು ತಂದೆ ಹೃದಯಾಘಾತದಿಂದ ನಿಧನರಾದರು. ಅದೇ ವರ್ಷ ಲಕ್ಷ್ಮಿ ಆಸಿಡ್ ದಾಳಿ ನಿಲ್ಲಿಸಿ ಪ್ರಚಾರಾಂದೋಲನ ಹುಟ್ಟು ಹಾಕಿದ್ದ ಅಲೋಕ್ ದೀಕ್ಷಿತ್ ಎಂಬ ಪತ್ರಕರ್ತನನ್ನು ಭೇಟಿಯಾದರು. ಇಬ್ಬರಲ್ಲೂ ಪ್ರೀತಿ ಆಂಕುರಿಸಿತ್ತು.


ಮಗಳು ಪಿಹು ಜೊತೆಗೆ ಲಕ್ಷ್ಮಿ

ಮದುವೆಯಾಗುವ ಬದಲು ಒಟ್ಟಿಗೆ ಬದುಕುವ ‘ಲಿವ್ ಇನ್ ಟುಗೆದರ್’ ನಿರ್ಧಾರವನ್ನು ಅವರಿಬ್ಬರೂ ತೆಗೆದುಕೊಂಡರು. ‘ನಾವು ಸಾಯುವವರೆಗೂ ಒಟ್ಟಿಗೆ ಬದುಕಬೇಕು ಅಂದುಕೊಂಡಿದ್ದೆವು. ಆದರೆ ಮದುವೆಯಾಗದ ಮೂಲಕ ಈ ಸಮಾಜಕ್ಕೆ ನಾವು ಸವಾಲು ಹಾಕಿದ್ದೆವು. ನಮ್ಮ ಮದುವೆಗೆ ಜನರು ಬರುವುದು ಮತ್ತು ನನ್ನ ರೂಪದ ಬಗ್ಗೆ ಮಾತನಾಡುವುದು ನನಗೆ ಬೇಕಿರಲಿಲ್ಲ. ನಾವು ಬದುಕುತ್ತಿರುವ ಸಮಾಜದಲ್ಲಿ ವಧುವಿನ ರೂಪ ಮದುವೆಗೆ ಬರುವವರಿಗೆ ಹೆಚ್ಚು ಮುಖ್ಯವಾಗುತ್ತದೆ. ಹೀಗಾಗಿಯೇ ಯಾವುದೇ ಸಮಾರಂಭವಿಲ್ಲದೆ ನಮ್ಮ ಹೊಸ ಬದುಕನ್ನು ಆರಂಭಿಸಿದೆವು’ ಎಂದು ಲಕ್ಷ್ಮಿ ಹೇಳುತ್ತಾರೆ. ಈ ನಡುವೆ ಅಲೋಕ್ ಜೊತೆಗೂಡಿ ಲಕ್ಷ್ಮಿ ‘ಛಾನ್ವ್ ಫೌಂಡೇಶನ್’ ಹೆಸರಿನ ಮತ್ತೊಂದು ಸರ್ಕಾರೇತರ ಸಂಸ್ಥೆ ಆರಂಭಿಸಿದರು. ಈ ದಂಪತಿಯ ಕುಡಿ ಪಿಹು, ಮಾರ್ಚ್ 25, 2015ರಂದು ಹುಟ್ಟಿತು.

ಲಕ್ಷ್ಮಿಯ ಬದುಕು ಮತ್ತೊಮ್ಮೆ ಇಳಿಜಾರಿನ ಹಾದಿಯಲ್ಲಿತ್ತು. ಮಗು ಹುಟ್ಟಿದ ನಂತರ ವೈಯಕ್ತಿಕ ಭಿನ್ನಾಭಿಪ್ರಾಯದ ಕಾರಣ ದಂಪತಿ ಬೇರ್ಪಟ್ಟರು. ಮಗು ತಾಯಿಯ ಸುಪರ್ದಿಯಲ್ಲಿಯೇ ಇತ್ತು. ಅವರ ಆದಾಯ ಮೂಲಗಳು ಬತ್ತತೊಡಗಿದವು. ಮಗುವನ್ನು ಬೆಳೆಸುವ ಖರ್ಚು ಮಾತ್ರ ಬೆಳೆಯುತ್ತಿತ್ತು. ಅಲೋಕ್ ಜೊತೆಗಿದ್ದ ಭಿನ್ನಾಭಿಪ್ರಾಯದ ಕಾರಣದಿಂದ ಸರ್ಕಾರೇತರ ಸಂಸ್ಥೆಗಳ ಕೆಲಸಕ್ಕೂ ಲಕ್ಷ್ಮಿ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಅವುಗಳಿಂದ ಬರುತ್ತಿದ್ದ ಸಂಬಳವೂ ನಿಂತು ಹೋಯಿತು. ಹಣವಿಲ್ಲ ಎನ್ನುವ ಕಾರಣ ಮುಂದೊಡ್ಡಿ ಅಲೋಕ್ ಸಹ ಲಕ್ಷ್ಮಿ ಮತ್ತು ಮಗುವಿನ ಪೋಷಣೆಗೆ ಸಾಕಷ್ಟು ಹಣ ಕೊಡುತ್ತಿರಲಿಲ್ಲ.

‘ನನ್ನ ಹತ್ತಿರ ಹಣ ಇಲ್ಲ. ನೀವು ಬೇಕಿದ್ದರೆ ನನ್ನ ಬ್ಯಾಂಕ್ ಖಾತೆ ಪರಿಶೀಲಿಸಿ ನೋಡಿ. ಅದರಲ್ಲಿ ₹5 ಸಾವಿರಕ್ಕಿಂತ ಹೆಚ್ಚು ಇದ್ದರೆ ಹೇಳಿ. ನಾವು ಹೋರಾಟಗಾರರು ಬದುಕುವುದೇ ಹೀಗೆ. ತಿಂಗಳಿಗಷ್ಟು ಸಂಬಳ ತಂದುಕೊಡುವ ಒಂದು ಕೆಲಸ ನನಗಿಲ್ಲ. ಎನ್‌ಜಿಒಗಳಿಗೆ ದೇಣಿಗೆಯಾಗಿ ಬರುವ ಹಣವೆಲ್ಲವೂ ಆಸಿಡ್ ದಾಳಿಯಿಂದ ಸಂತ್ರಸ್ತರಾದವರ ಬದುಕಿಗೆ ಹೋಗುತ್ತದೆ' ಎಂದು ದೀಕ್ಷಿತ್ ಕಳೆದ ತಿಂಗಳು ‘ಹಿಂದೂಸ್ತಾನ್ ಟೈಮ್ಸ್‌’ಗೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು.

ಲಕ್ಷ್ಮಿ ತರಬೇತಿ ಪಡೆದ ಬ್ಯುಟಿಷಿಯನ್ ಕೂಡ ಹೌದು. ಇಷ್ಟೆಲ್ಲಾ ಮನ್ನಣೆ ಮತ್ತು ಪುರಸ್ಕಾರ ಇದ್ದರೂ ಲಕ್ಷ್ಮಿಗೆ ಒಂದು ಕೆಲಸ ಕೊಡಲು ಯಾರೂ ಮುಂದೆ ಬರಲಿಲ್ಲ. ಮಕ್ಕಳು ಹೆದರಿಕೊಳ್ಳಬಹುದು ಎನ್ನುವ ನೆಪವೊಡ್ಡಿ ಯಾರೊಬ್ಬರೂ ಅವರಿಗೆ ಕಡಿಮೆ ಬಾಡಿಗೆಗೆ ಸಿಗುವ ಮನೆಯನ್ನೂ ಕೊಡುತ್ತಿರಲಿಲ್ಲ.

‘ಆಸಿಡ್ ದಾಳಿಗೆ ಒಳಗಾದವರು ಶಸ್ತ್ರಚಿಕಿತ್ಸೆಗಳಿಗಾಗಿ ಸಾಕಷ್ಟು ಹಣ ವ್ಯಯಿಸಬೇಕಾಗುತ್ತೆ. ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಸರ್ಕಾರ ಲಕ್ಷ್ಮೀ ಅಗರ್‌ವಾಲ್ ₹3 ಲಕ್ಷ ಪರಿಹಾರ ನೀಡಿತ್ತು. ಆದರೆ ಇದಕ್ಕಿಂತ ಹೆಚ್ಚು ಹಣ ಶಸ್ತ್ರಚಿಕಿತ್ಸೆ ಮತ್ತು ಗರ್ಭಿಣಿಯಾಗಿದ್ದ ಅವಧಿಯ ಆರೈಕೆಗೆ ವ್ಯಯವಾಯಿತು. ಆಕೆಗೆ ಸಾಕಷ್ಟು ಮನ್ನಣೆ ಸಿಕ್ಕಿದೆ. ಮಿಷಲ್ ಒಬಾಮಾರಿಂದ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಆದರೆ ಪ್ರಶಸ್ತಿಯ ಹಣ ಆಕೆಯ ಅಗತ್ಯ ಪೂರೈಸಲು ಸಾಕಾಗಲಿಲ್ಲ. ಭಾರತದಲ್ಲಿ ಜನರು ಪ್ರಶಸ್ತಿ ನೀಡಲು, ಸನ್ಮಾನ ಮಾಡಲು ಇಷ್ಟಪಡುತ್ತಾರೆ. ಆದರೆ ಕಷ್ಟ ಅರಿತು ಹಣದ ಸಹಾಯ ಮಾಡಲು ಮಾತ್ರ ಯಾರೊಬ್ಬರೂ ಮುಂದೆ ಬರುವುದಿಲ್ಲ’ ಎಂದು ಅನುರಾಗ್ ಚೌಹಾಣ್ ‘ಹಿಂದೂಸ್ತಾನ್ ಟೈಮ್ಸ್‌’ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು. ಅನುರಾಗ್ ಅವರು ‘ಹ್ಯೂಮನ್ಸ್ ಫಾರ್ ಹ್ಯುಮಾನಿಟಿ’ ಸರ್ಕಾರೇತರ ಸಂಸ್ಥೆಯ ಸ್ಥಾಪಕರೂ ಹೌದು.

ಅವರ ಪ್ರಸ್ತುತ ಪರಿಸ್ಥಿತಿ ಮತ್ತು ಸಮಸ್ಯೆಗಳು ಬಹಿರಂಗಗೊಂಡ ನಂತರ ವಿವಿಧ ಮೂಲಗಳಿಂದ ನೆರವು ಹರಿದುಬರುತ್ತಿದೆ. ಕೇಶಾಲಂಕಾರ ಮತ್ತು ಮೇಕಪ್ ಅಕಾಡೆಮಿಯೊಂದು ಕೆಲಸ ಕೊಡಲು ಮುಂದೆ ಬಂದಿದೆ. ಮಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆಯನ್ನೂ ನೀಡಿದೆ.

ಲಖನೌ ಮತ್ತು ಆಗ್ರಾಗಳಲ್ಲಿ ಆಸಿಡ್ ದಾಳಿಗೊಳಗಾದ ಮಹಿಳೆಯರೇ ನಿರ್ವಹಿಸುವ ‘ಲಕ್ಷ್ಮೀ ಎಸ್‌ಎಎ’ (ಸ್ಟಾಪ್ ಆಸಿಡ್ ಅಟ್ಯಾಕ್) ರೆಸ್ಟೊರೆಂಟ್‌ಗಳ ಮೂಲಕ ತನ್ನಂತೆ ಕಷ್ಟದಲ್ಲಿರುವ ಹಲವರ ಬದುಕಿಗೆ ಬೆಳಕು ಕೊಟ್ಟ ಈ ಸಾಧಕಿಯ ಬಯೋಪಿಕ್ ಮತ್ತು ದೀಪಿಕಾ ಪಡುಕೋಣೆಯ ಪ್ರತಿಕ್ರಿಯೆ ನೆಪದಿಂದ ಇದೀಗ ಲಕ್ಷ್ಮೀ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು