ಶನಿವಾರ, ಮಾರ್ಚ್ 6, 2021
21 °C

ತಮಾಷೆಯ ಟ್ವೀಟ್‌ಗಳಿಂದ ಉತ್ತರಿಸುತ್ತಾ, ಟ್ವಿಟರ್‌ನ್ನೇ ಸಹಾಯವಾಣಿ ಮಾಡಿದ್ದ ಸುಷ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್‌ನ್ನು ಸಹಾಯವಾಣಿಯಂತೆ ಬಳಸಿದ್ದರು.  ವಿದೇಶದಲ್ಲಿ ಸಿಲುಕಿಕೊಂಡ ಭಾರತೀಯರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಸುಷ್ಮಾ, ಜನರು ಯಾವ ಸಹಾಯ ಕೇಳಿದರೂ ತಕ್ಷಣಕ್ಕೆ ಸ್ಪಂದಿಸುತ್ತಿದ್ದರು.

ವಿದೇಶಾಂಗ ಸಚಿವೆಯಾಗಿದ್ದ ಆ ಐದು ವರ್ಷಗಳಲ್ಲಿ ಜನರು ಸಹಾಯ ಬೇಡಿ ಒಂದು ಟ್ವೀಟ್ ಮಾಡಿದ್ದರೆ ಸಾಕಿತ್ತು. ತಕ್ಷಣವೇ ಆ ಟ್ವೀಟ್‌ಗೆ ಸ್ಪಂದಿಸುತ್ತಿದ್ದ ಸುಷ್ಮಾ ಅಗತ್ಯ ನೆರವುಗಳನ್ನು ನೀಡುತ್ತಿದ್ದುದನ್ನು ಟ್ವೀಟಿಗರು ಸ್ಮರಿಸುತ್ತಾರೆ.

9 ಬಾರಿ ಸಂಸದರಾಗಿದ್ದ ಸುಷ್ಮಾ ಟ್ವಿಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್‌ಗಳಿರುವ ಭಾರತೀಯ ರಾಜಕಾರಣಿ. 13 ದಶಲಕ್ಷ ಫಾಲೋವರ್‌ಗಳಿರುವ ಇವರು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ ಎಂಬುದು ವಿಶೇಷ. 

ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದ ಸುಷ್ಮಾ, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಜೀವಮಾನದಲ್ಲಿ ಈ ದಿನವನ್ನು ನೋಡಲು ನಾನು ಬಹುದಿನಗಳಿಂದಲೂ ಕಾಯುತ್ತಿದೆ,’ ಎಂದು ಟ್ವೀಟಿಸಿದ್ದರು.  ಈ ಟ್ವೀಟ್‌ ಅವರ ಕೊನೆಯ ಟ್ವೀಟ್‌ ಆಗಿತ್ತು.

ಇದನ್ನೂ ಓದಿ:  ಈ ದಿನಕ್ಕಾಗಿ ಜೀವಮಾನವಿಡೀ ಕಾದಿದ್ದೆ: ವೈರಲ್ ಆಗುತ್ತಿದೆ ಸುಷ್ಮಾ ಟ್ವೀಟ್‌

ಸ್ವೀಟಾಗಿ ಟ್ವೀಟಿಸುತ್ತಿದ್ದರು
ಮಲೇಷ್ಯಾದಲ್ಲಿದ್ದ ಭಾರತೀಯರೊಬ್ಬರು ತನ್ನ ಗೆಳೆಯನೊಬ್ಬನನ್ನು ಭಾರತಕ್ಕೆ ವಾಪಸ್ ಕಳುಹಿಸಬೇಕು. ಮಾನಸಿಕ ಸಮಸ್ಯೆ ಇರುವ ಗೆಳೆಯ ಅವನು,. ಅವನನ್ನು ಭಾರತಕ್ಕೆ ಕಳುಹಿಸಬೇಕಾದರೆ ಮೊದಲು ಇಲ್ಲಿ ಚಿಕಿತ್ಸೆ ನೀಡಿ ಎಂದು ಇಮಿಗ್ರೇಷನ್ ಕಚೇರಿ ಹೇಳುತ್ತಿದೆ. ಈ ವಿಷಯದಲ್ಲಿ ನಮಗೆ ಸಹಾಯ ಮಾಡಿ ಎಂದಿದ್ದರು. ಈ ಟ್ವೀಟ್ ಮಾಡಿದ ವ್ಯಕ್ತಿಯ ಇಂಗ್ಲಿಷ್ ಗ್ರಾಮರ್ ಬಗ್ಗೆ ಹಲವಾರು ಮಂದಿ ನಗೆಯಾಡಿದ್ದರು. ಇನ್ನೊಬ್ಬ ಟ್ವೀಟಿಗರು ಸಹೋದರ, ನೀವು ಹಿಂದಿ ಅಥವಾ ಪಂಜಾಬಿಯಲ್ಲಿ ಇದನ್ನು ಬರೆಯಬಹುದಿತ್ತಲ್ಲವೇ ಎಂದಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಸುಷ್ಮಾ, ಸಮಸ್ಯೆ ಏನೂ ಇಲ್ಲ, ನಾನು ವಿದೇಶಾಂಗ ಸಚಿವೆ ಆದ ನಂತರ ಎಲ್ಲ ರೀತಿಯ ಉಚ್ಛಾರಣೆ ಮತ್ತು ಗ್ರಾಮರ್‌ನ ಇಂಗ್ಲಿಷ್ ಅರ್ಥ ಮಾಡಬಲ್ಲೆ ಎಂದಿದ್ದರು.

ಮೇ ಭೀ ಚೌಕೀದಾರ್ ಟ್ವಿಟರ್ ಆಂದೋಲದ ವೇಳೆ ತಮ್ಮ ಹೆಸರಿನ ಮುಂದೆಯೂ ಚೌಕೀದಾರ್ ಎಂದು ಸೇರಿಸಿಕೊಂಡಿದ್ದರು ಸುಷ್ಮಾ. ಆಗ ಟ್ವೀಟಿಗರೊಬ್ಬರು, ಮೇಡಂ ನೀವು ವಿದೇಶಾಂಗ ಸಚಿವರು ಎಂದು ನಾವು ಅಂದುಕೊಂಡಿದ್ದೇವೆ. ಬಿಜೆಪಿಯಲ್ಲಿನ ಪ್ರಜ್ಞಾವಂತರು ನೀವು. ನೀವು ಯಾಕೆ ನಿಮ್ಮನ್ನು ಚೌಕೀದಾರ್ ಎಂದು ಕರೆದುಕೊಳ್ಳುತ್ತೀರಿ ಎಂದು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, ನಾನು ಭಾರತೀಯರ ಮತ್ತು ಹೊರ ದೇಶದಲ್ಲಿರುವ ಭಾರತೀಯರ ಹಿತಾಸಕ್ತಿಯನ್ನು ಕಾಪಾಡುವ ಚೌಕೀದಾರ್ ಎಂದಿದ್ದರು. 

ಟ್ವೀಟಿಗರೊಬ್ಬರು ಸುಷ್ಮಾ ಪರ ಈ ರೀತಿ ಟ್ವೀಟ್ ಮಾಡುತ್ತಿರುವುದು ಪಿ.ಆರ್ (ಸಾರ್ವಜನಿಕ ಸಂಪರ್ಕಾಧಿಕಾರಿ) ಎಂದು ಹೇಳಿದ್ದಕ್ಕೆ,  'ನೀವು ನಂಬಬಹುದು, ಇದು ನಾನೇ, ನನ್ನ  ಪ್ರೇತ ಅಲ್ಲ' ಎಂದು ಟ್ವೀಟಿಸಿದ್ದರು.

ನಾನು ಮಂಗಳ ಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಟ್ವೀಟಿಸಿದ ಟ್ವೀಟಿಗರಿಗೆ ಪ್ರತಿಕ್ರಿಯಿಸಿದ್ದ ಸುಷ್ಮಾ, ನೀವು ಮಂಗಳ ಗ್ರಹದಲ್ಲಿ ಸಿಲುಕಿಕೊಂಡಿದ್ದರೂ ಭಾರತೀಯ ರಾಯಭಾರಿ ಕಚೇರಿ ನಿಮಗೆ ಸಹಾಯ ಮಾಡುತ್ತದೆ ಎಂದಿದ್ದರು.

ಇನ್ನೊಬ್ಬ  ಟ್ವೀಟಿಗರು  ತನ್ನ ರೆಫ್ರಿಜರೇಟರ್ ಸರಿ ಪಡಿಸಬಹುದೇ? ಎಂದು ಕೇಳಿ ಟ್ವೀಟಿಸಿದ್ದಕ್ಕೆ ಸುಷ್ಮಾ ಅವರು,  ಸಹೋದರ...ನಾನು ನಿಮ್ಮ ರೆಫ್ರಿಜರೇಟರ್ ಸರಿ ಪಡಿಸಲು ಸಾಧ್ಯವಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದರಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದಿದ್ದರು.

2016ರಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ 19 ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸುಷ್ಮಾ ಭಾಗಿಯಾಗಿರಲಿಲ್ಲ. ಈ ಬಗ್ಗೆ ಸುಷ್ಮಾ, ಮಾಧ್ಯಮದವರೇ, ಪ್ರಮಾಣ ವಚನ ಸಮಾರಂಭವನ್ನು ತಪ್ಪಿಸಿಕೊಂಡ ಸುಷ್ಮಾ ಎಂಬ ಶೀರ್ಷಿಕೆ ನೀಡಬೇಡಿ ಎಂದು ಟ್ವೀಟ್ ಮಾಡಿದ್ದರು. 
 

ಇದನ್ನೂ ಓದಿ: 

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಇನ್ನಿಲ್ಲ

ಸುಷ್ಮಾ ಸ್ಮರಾಜ್‌ ನಿಧನ: ಸಂಜೆ ಅಂತ್ಯಕ್ರಿಯೆ 

ಸುಷ್ಮಾ ಸ್ವರಾಜ್‌ ನಿಧನಕ್ಕೆ ಗಣ್ಯರ ಕಂಬನಿ

 ಸೋತರೂ ಪರವಾಗಿಲ್ಲ, ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುವೆ: ಸುಷ್ಮಾ ಸ್ವರಾಜ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು