ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಗೆ ಕಾದಿರುವ ತೂಗುಸೇತುವೆ

ಕೊಣನೂರು ಬಳಿ ಕಾವೇರಿಗೆ ನದಿಗೆ ಅಡ್ಡಲಾಗಿ ನಿರ್ಮಾಣ
Last Updated 16 ಜೂನ್ 2018, 8:22 IST
ಅಕ್ಷರ ಗಾತ್ರ

ಕೊಣನೂರು: ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆಯು ನಿರ್ವಹಣೆ ಕೊರತೆಯಿಂದಾಗಿ ಹಾಳಾಗಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಕೊಣನೂರು ಹೋಬಳಿಯ ಕಟ್ಟೇಪುರ, ಗೊಬ್ಬಳಿ, ಮಾದಾಪುರ, ಬಂಡಿಪಾಳ್ಯ ಗ್ರಾಮಗಳ ಜನರು  ಹೋಬಳಿ ಕೇಂದ್ರ ಕೊಣನೂರಿಗೆ ಬರಲು ಅನುವಾಗುವಂತೆ ತೂಗುಸೇತುವೆ ನಿರ್ಮಿಸಲಾಗಿದೆ. ಅಲ್ಲದೆ, ಪ್ರವಾಸಿಗರ ಆಕರ್ಷಣೀಯ ತಾಣವೂ ಆಗಿದೆ.

ತೂಗುಸೇತುವೆ ಇಲ್ಲದಿದ್ದರೆ, ಈ ಗ್ರಾಮಗಳ ಜನರು ರಾಮನಾಥಪುರ ಮಾರ್ಗವಾಗಿ 10 ಕಿ.ಮೀ ಬಳಸಿ ಹೋಬಳಿ ಕೇಂದ್ರ ತಲುಪಬೇಕು. ಇದನ್ನು ತಪ್ಪಿಸಲು ಕೊಣನೂರು ಮತ್ತು ಕಟ್ಟೇಪುರ ನಡುವೆ ಹಾಸನ ಜಿಲ್ಲಾಪಂಚಾಯಿತಿ 1999-2000ನೇ ಸಾಲಿನಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿತು.

126 ಮೀ ಉದ್ದ ಮತ್ತು 1.20 ಮೀ ಅಗಲದ ತೂಗುಸೇತುವೆಯು ಸುತ್ತಲೂ ಹಸಿರು, ಕೆಳಗೆ ಕಾವೇರಿ ನದಿಯಿಂದಾಗಿ ಜನರನ್ನು, ಪ್ರವಾಸಿಗರನ್ನು ಸೆಳೆಯುತ್ತಿದೆ. ಬಳಕೆ ಹೆಚ್ಚಿದಂತೆ ತೂಗುಸೇತುವೆ ಶಿಥಿಲವಾಗುತ್ತಿದ್ದು, ನಿರ್ವಹಣೆ ಕೊರತೆ ಈಗ ಕಾಡುತ್ತಿದೆ.

ಕಬ್ಬಿಣದ ಸರಳು, ರಾಡ್ ಬಳಸಿ ನಿರ್ಮಿಸಿದ್ದು, ಈಗ ಬಣ್ಣವು ಮಾಸಿ ತುಕ್ಕುಹಿಡಿಯುತ್ತಿವೆ. ಸೇತುವೆಯ ಮೇಲೆ ಎರಡು ಬದಿಯಲ್ಲಿ ಜಾಲರಿ ಅಳವಡಿಸಿದ್ದು, ಅನೇಕ ಕಡೆ ಕಿತ್ತುಬಂದಿದೆ.

ಅಲ್ಲಲ್ಲಿ ಸ್ಲ್ಯಾಬ್‌ಗಳು ಮುರಿದಿವೆ. ಜನರೇ ಹೀಗೆ ಹಾಳಾಗಿರುವ ಕಡೆ ಜನರೇ ಎಚ್ಚರಿಕೆ ಸೂಚನೆಯಾಗಿ ಕಲ್ಲಿನ ಚಪ್ಪಡಿ ಇಟ್ಟಿದ್ದಾರೆ. ಕೆಲವೆಡೆ ಸೇತುವೆಗೆ ಅಳವಡಿಸಿರುವ ಕಬ್ಬಿಣದ ಸರಳು ತುಕ್ಕುಹಿಡಿದಿವೆ.

ಹಿಂದೊಮ್ಮೆ ಶಿಥಿಲವಾಗುತ್ತಿರುವುದು ಗಮನಕ್ಕೆ ಬಂದಾಗ ಜಿಲ್ಲಾ ಪಂಚಾತಿಯಿತಿ ಉಪಾಧ್ಯಕ್ಷರು ಮತ್ತು ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ದುರಸ್ತಿ ಮಾತ್ರ ಆರಂಭವಾಗಿಲ್ಲ.

ಕಟ್ಟೇಪುರ ಇನ್ನಿತರ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿರು ತೂಗುಸೇತುವೆ ದುರಸ್ತಿ ಅಗತ್ಯವನ್ನು ಪರಿಶೀಲಿಸಿ ಶೀಘ್ರದಲ್ಲೇ ಚಾಲನೆ ನೀಡಲು ಕ್ರಮವಹಿಸಲಾಗುವುದು
ಎ.ಟಿ.ರಾಮಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT