ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ: ಎನ್‌ಎಸ್‌ಎಸ್‌ಒ ವರದಿ

ಉದ್ಯೋಗ ಸೃಷ್ಟಿ ಪಾತಾಳಕ್ಕೆ: ಏಟು–ತಿರುಗೇಟು
Last Updated 31 ಜನವರಿ 2019, 20:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2017–18ನೇ ಆರ್ಥಿಕ ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 6.1ರಷ್ಟಿತ್ತು ಎಂದು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌(ಎನ್‌ಎಸ್‌ಎಸ್‌ಒ) ಸಮೀಕ್ಷಾ ವರದಿ ಹೇಳಿದೆ ಎಂದು ‘ಬ್ಯುಸಿನೆಸ್‌ ಸ್ಟಾಂಡರ್ಡ್‌’ ಪತ್ರಿಕೆ ವರದಿ ಮಾಡಿದೆ. ಇದು ತೀವ್ರ ಸ್ವರೂಪದ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಎನ್‌ಎಸ್‌ಎಸ್‌ಒ ಸಿದ್ಧಪಡಿಸಿದ ಉದ್ಯೋಗ ಸಮೀಕ್ಷೆ ವರದಿಗೆ ರಾಷ್ಟ್ರೀಯ ಸಾಂಖ್ಯಿಕ ಆಯೋಗ (ಎನ್‌ಎಸ್‌ಸಿ) ಅನುಮೋದನೆ ನೀಡಿದ್ದರೂ ಸರ್ಕಾರ ಅದನ್ನು ಪ್ರಕಟಿಸಿಲ್ಲ ಎಂದು ಆರೋಪಿಸಿ ಇಬ್ಬರು ಸ್ವತಂತ್ರ ಸದಸ್ಯರಾದ ಪಿ.ಸಿ.ಮೋಹನನ್‌ ಮತ್ತು ಜೆ.ವಿ. ಮೀನಾಕ್ಷಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದರು.ಇದರೊಂದಿಗೆ ಉದ್ಯೋಗ ಸೃಷ್ಟಿ ವಿಚಾರ ಮುನ್ನೆಲೆಗೆ ಬಂದಿತ್ತು. ಮೋಹನನ್‌ ಅವರು ಆಯೋಗದ ಪ್ರಭಾರ ಅಧ್ಯಕ್ಷರೂ ಆಗಿದ್ದರು.

ಉದ್ಯೋಗ ಸಮೀಕ್ಷೆಯ ದತ್ತಾಂಶಗಳನ್ನು ಎನ್‌ಎಸ್‌ಎಸ್‌ಒ ವಿಶ್ಲೇಷಿಸುತ್ತಿದೆ. ಇದು ಪೂರ್ಣಗೊಂಡ ತಕ್ಷಣವೇ ವರದಿ ಪ್ರಕಟವಾಗಲಿದೆ ಎಂದು ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಇಬ್ಬರು ಸದಸ್ಯರ ರಾಜೀನಾಮೆಯ ಬಳಿಕ ಸ್ಪಷ್ಟೀಕರಣ ನೀಡಿತ್ತು. ಆದರೆ, ಮಧ್ಯಂತರ ಬಜೆಟ್‌ ಮುನ್ನಾದಿನ ಮತ್ತು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಉದ್ಯೋಗ ಸಮೀಕ್ಷೆ ವರದಿಯು ಸೋರಿಕೆಯಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತ್ತು ಸಿಪಿಎಂ ಕಟು ವಾಗ್ದಾಳಿ ನಡೆಸಿವೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಕೊಟ್ಟಿದ್ದರು. ಆದರೆ, ಐದು ವರ್ಷ ಬಳಿಕ ಸೋರಿಕೆಯಾದ ಉದ್ಯೋಗ ಸೃಷ್ಟಿ ವರದಿಯು ಉದ್ಯೋಗ ಸೃಷ್ಟಿ ರಾಷ್ಟ್ರೀಯ ದುರಂತವಾಗಿದೆ ಎಂಬುದರತ್ತ ಬೆಳಕು ಚೆಲ್ಲಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಮೋದಿ ಅವರು ಪ್ರಧಾನಿ ಹುದ್ದೆ ಬಿಟ್ಟುಹೋಗುವ ಸಮಯ ಸನ್ನಿಹಿತವಾಗಿದೆ ಎಂದು ಅವರು ಹೇಳಿದ್ದಾರೆ.

**

ಉದ್ಯೋಗ ಸೃಷ್ಟಿಯೇ ರಾಷ್ಟ್ರೀಯ ವಿಪತ್ತು

ಉದ್ಯೋಗಗಳೇ ಇಲ್ಲ (ನೋಮೋ ಜಾಬ್ಸ್‌)! ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಸರ್ವಾಧಿಕಾರಿ ಭರವಸೆ ಕೊಟ್ಟಿದ್ದರು. ಐದು ವರ್ಷ ಬಳಿಕ ಅದು ರಾಷ್ಟ್ರೀಯ ವಿಪತ್ತಾಗಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗವಿದೆ. 2017–18ರ ಒಂದೇ ವರ್ಷದಲ್ಲಿ ನಿರುದ್ಯೋಗಿಗಳ ಸಂಖ್ಯೆ 6.5 ಕೋಟಿ

–ರಾಹುಲ್‌ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ

**

ರಾಹುಲ್‌ಗೆ ಮುಸೋಲಿನಿಯ ಸಮೀಪದೃಷ್ಟಿ

ಮುಸೋಲಿನಿಯ (ಇಟಲಿಯ ಸರ್ವಾಧಿಕಾರಿ) ಸಮೀಪದೃಷ್ಟಿ ರಾಹುಲ್‌ಗೆ ಬಳುವಳಿಯಾಗಿ ಬಂದಿದೆ. ಆ ಮಟ್ಟದ ಗ್ರಹಿಕೆ ಮಾತ್ರ ಅವರಿಗೆ ಇದೆ. ಕಳೆದ 15 ತಿಂಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಭಾರಿ ಏರಿಕೆ ಆಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಕಚೇರಿಯ ಮಾಹಿತಿ ಹೇಳುತ್ತಿದೆ. ಯಾವತ್ತೂ ಯಾವುದೇ ಕೆಲಸ ಮಾಡದವರು, ಸಂಪೂರ್ಣ ನಿರುದ್ಯೋಗಿಗಳು ಮಾತ್ರ ಇಂತಹ ಸುಳ್ಳು ಸುದ್ದಿ ಹಿಡಿದು ನೇತಾಡುತ್ತಾರೆ.

–ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT