ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನಾವ್ ಅತ್ಯಾಚಾರ| ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಸೆಂಗರ್‌ಗೆ ಜೀವಾವಧಿ ಶಿಕ್ಷೆ

Last Updated 20 ಡಿಸೆಂಬರ್ 2019, 18:44 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ, ಉನ್ನಾವ್‌ ಅತ್ಯಾಚಾರ ಪ್ರಕರಣದ ಅಪರಾಧಿ ಕುಲ್‌ದೀಪ್‌ಸಿಂಗ್‌ ಸೆಂಗರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹ 25 ಲಕ್ಷ ದಂಡ ವಿಧಿಸಿ ದೆಹಲಿ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದೆ.

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ ಸೆಂಗರ್‌, ಸಾಯುವವರೆಗೆ ಜೈಲಿನಲ್ಲಿಯೇ ಇರಬೇಕಾಗು
ತ್ತದೆ. ದಂಡದ ಮೊತ್ತ ₹ 25 ಲಕ್ಷವನ್ನು ಒಂದು ತಿಂಗಳೊಳಗೆ ಪಾವತಿಸಬೇಕು. ಇದಲ್ಲದೆ ಹೆಚ್ಚುವರಿಯಾಗಿ ಸಂತ್ರಸ್ತೆಯ ತಾಯಿಗೆ ₹ 10 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾ ನ್ಯಾಯಾಧೀಶ
ಧರ್ಮೇಶ್‌ ಶರ್ಮಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ಶಿಕ್ಷೆಯನ್ನು ಕಡಿಮೆಗೊಳಿಸಲು ಸೆಂಗರ್‌ ಪರ ವಕೀಲರು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ‘ಜನಪ್ರತಿನಿಧಿಯಾಗಿದ್ದ ಸೆಂಗರ್‌, ಜನರ ನಂಬಿಕೆಗೆ ದ್ರೋಹ ಎಸಗಿದ್ದಾನೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾನೆ. ಆದ್ದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಲು ಯಾವುದೇ ಕಾರಣ ಕಾಣಿಸುತ್ತಿಲ್ಲ’ ಎಂದಿದ್ದಾರೆ.

ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ಇರುವ ಪ್ರಾಣ ಬೆದರಿಕೆಯ ಬಗ್ಗೆ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಸಿಬಿಐಗೆ ಕೋರ್ಟ್‌ ಸೂಚಿಸಿದೆ. ಸಂತ್ರಸ್ತೆಯ ಕುಟುಂಬದವರಿಗೆ ದೆಹಲಿಯಲ್ಲಿ ಮಾಡಿರುವ ಬಾಡಿಗೆ ಮನೆಯ ವ್ಯವಸ್ಥೆಯನ್ನು ಇನ್ನೂ ಒಂದು ವರ್ಷ ಕಾಲ ಮುಂದುವರಿಸಬೇಕು, ಉತ್ತರಪ್ರದೇಶ ಸರ್ಕಾರವು ಮನೆ ಬಾಡಿಗೆಯ ರೂಪದಲ್ಲಿ ಪ್ರತಿ ತಿಂಗಳೂ ₹15,000ವನ್ನು ಅವರ ಕುಟುಂಬದವರಿಗೆ ನೀಡಬೇಕು ಎಂದೂ ಕೋರ್ಟ್‌ ಹೇಳಿದೆ.

ಸಹ ಆರೋಪಿಯಾಗಿದ್ದ ಮಹಿಳೆ ಶಶಿ ಸಿಂಗ್‌ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. ‘ಸಹ ಆರೋಪಿಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಂಥ ಸಾಕ್ಷ್ಯಗಳನ್ನು ಒದಗಿಸಲು ಸಿಬಿಐ ವಿಫಲವಾಗಿದೆ. ಆಕೆ ಸಂದರ್ಭದ ಬಲಿಪಶು ಆಗಿದ್ದಂತೆ ಭಾಸವಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ.

ಇದೇ ಮಹಿಳೆಯ ಮೇಲೆ 2017ರ ಜೂನ್‌ 11ರಂದು ಇನ್ನೊಂದು ಅತ್ಯಾಚಾರ ನಡೆದಿರುವ ಬಗ್ಗೆ ಇನ್ನಷ್ಟೆ ವಿಚಾರಣೆ ಆರಂಭವಾಗಬೇಕಿದೆ.

ಅನ್ವಯವಾಗದ ಮರಣದಂಡನೆ

ಉನ್ನಾವ್‌ ಅಪಹರಣ ಹಾಗೂ ಅತ್ಯಾಚಾರ ಘಟನೆಯು 2012ರಲ್ಲಿ ನಡೆದಿತ್ತು. ಆಗಸಂತ್ರಸ್ತೆಯು ಬಾಲಕಿಯಾಗಿದ್ದಳು. ಆ ಕಾರಣಕ್ಕೆ ಸೆಂಗರ್‌ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಲಾಗಿತ್ತು.

ಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಮರಣದಂಡನೆ ನೀಡಲು ಸಾಧ್ಯವಾಗುವಂತೆ ‘ಪೋಕ್ಸೊ ಕಾಯ್ದೆ’ಗೆ 2019ರ ಆಗಸ್ಟ್‌ ತಿಂಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ, ಉನ್ನಾವ್‌ ಪ್ರಕರಣವು ಇದಕ್ಕೂ ಹಿಂದೆ ನಡೆದಿರುವುದರಿಂದ ಮರಣದಂಡನೆಯು ಅನ್ವಯವಾಗುವುದಿಲ್ಲ.

ಮರಣದಂಡನೆ ನೀಡಬೇಕಿತ್ತು: ‘ಸೆಂಗರ್‌ಗೆ ಮರಣದಂಡನೆ ನೀಡಿದ್ದರೆ ನಮಗೆ ಸಂಪೂರ್ಣ ನ್ಯಾಯ ಸಿಕ್ಕಿದ ಸಮಾಧಾನವಾಗುತ್ತಿತ್ತು’ ಎಂದು ಸಂತ್ರಸ್ತೆ ಕುಟುಂಬದವರು ಹೇಳಿದ್ದಾರೆ.

‘ಆತ ಜೈಲಿನೊಳಗಿದ್ದರೂ ಭಯ ಇದ್ದೇ ಇದೆ. ಹೊರಬಂದ ಕೂಡಲೇ ನಮ್ಮನ್ನು ಮುಗಿಸಿಬಿಡಬಹುದು’ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.

ಪ್ರಕರಣದ ಹಾದಿ...

* ಜೂನ್‌ 4, 2017: ಶಾಸಕ ಸೆಂಗರ್‌ ಅವರಿಂದ 17 ವರ್ಷದ ಬಾಲಕಿಯ ಅಪಹರಣ. ಅತ್ಯಾಚಾರ ನಡೆಸಿದ ಆರೋಪ

* ಏಪ್ರಿಲ್‌ 3, 2018: ಸಂತ್ರಸ್ತೆಯ ತಂದೆಯ ಮೇಲೆ ಹಲ್ಲೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬಂಧನ

* ಏ. 8: ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಚೇರಿ ಮುಂದೆ ಸಂತ್ರಸ್ತೆಯಿಂದ ಆತ್ಮಹತ್ಯೆಯ ಯತ್ನ

* ಏ.9: ಪೊಲೀಸ್‌ ಕಸ್ಟಡಿಯಲ್ಲಿ ಸಂತ್ರಸ್ತೆಯ ತಂದೆ ಶಂಕಾಸ್ಪದ ಸಾವು

* ಏ.10: ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿ ಅಲಹಾಬಾದ್‌ ಕೋರ್ಟ್‌ ಆದೇಶ

* ಏ.13: ಸೆಂಗರ್‌ ಬಂಧನ. ಬಿಜೆಪಿಯಿಂದ ಉಚ್ಚಾಟನೆ

* 2019ರ ಜುಲೈ 17: ಸಂತ್ರಸ್ತೆಯ ಕುಟುಂಬದವರಿಂದ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರಿಗೆ ಪತ್ರ

* ಜುಲೈ 28: ಸಂತ್ರಸ್ತೆಯು ಕುಟುಂಬಸಹಿತವಾಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ. ಸಂತ್ರಸ್ತೆಯ ಕುಟುಂಬದ ಇಬ್ಬರ ಸಾವು. ಸೆಂಗರ್‌ ವಿರುದ್ಧ ಹತ್ಯೆಯ ಸಂಚು ರೂಪಿಸಿದ ಆರೋಪ

* ಜುಲೈ 29: ಅಪಘಾತಕ್ಕೆ ಸಂಬಂಧಿಸಿದಂತೆ ಸೆಂಗರ್‌ ಹಾಗೂ ಇತರ 9 ಮಂದಿಯ ವಿರುದ್ಧ ಪ್ರಕರಣ ದಾಖಲು

* ಆಗಸ್ಟ್‌ 1: ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಐದು ದೂರುಗಳ ವಿಚಾರಣೆಯನ್ನು ಉತ್ತರ ಪ್ರದೇಶದಿಂದ ದೆಹಲಿ ನ್ಯಾಯಾಲಯಕ್ಕೆ ಸ್ಥಳಾಂತರಿಸಲು ಮತ್ತು 45 ದಿನದೊಳಗೆ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್‌ ಸೂಚನೆ

* ಆ. 5ರಿಂದ ನ್ಯಾಯಾಧೀಶರ ಕೊಠಡಿಯಲ್ಲೇ ಪ್ರತಿನಿತ್ಯವೂ ವಿಚಾರಣೆ ಆರಂಭ. ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಹೆಲಿಕಾಪ್ಟರ್‌ ಮೂಲಕ ದೆಹಲಿಗೆ ಸ್ಥಳಾಂತರ

* ಆಗಸ್ಟ್‌ 9: ಸೆಂಗರ್‌ ವಿರುದ್ಧ ಆರೋಪಪಟ್ಟಿ ಸಲ್ಲಿಕೆ. ಸೆಕ್ಷನ್‌ 120ಬಿ (ಕ್ರಿಮಿನಲ್‌ ಸಂಚು), 363 (ಅಪಹರಣ), 366 (ಅಪಹರಣ ಅಥವಾ ಮದುವೆಯಾಗುವಂತೆ ಮಹಿಳೆಯ ಮೇಲೆ ಒತ್ತಡ ಹೇರುವುದು) 376 (ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆಯಡಿ ಹಲವು ಆರೋಪಗಳು

* ಸೆ. 11: ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದ ಎಐಐಎಂಎಸ್‌ ಆವರಣದಲ್ಲೇ ತಾತ್ಕಾಲಿಕ ವಿಶೇಷ ನ್ಯಾಯಾಲಯ ರಚಿಸಿ, ಸೆ.11 ರಿಂದ 13ರವರೆಗೆ ಸಂತ್ರಸ್ತೆಯ ಹೇಳಿಕೆ ದಾಖಲು.

* ಡಿ. 6: ದೆಹಲಿ ಮಹಿಳಾ ಆಯೋಗದವರು ದೆಹಲಿಯಲ್ಲಿ ಒದಗಿಸಿದ ಬಾಡಿಗೆ ಮನೆಗೆ ಸಂತ್ರಸ್ತೆಯ ಸ್ಥಳಾಂತರ

* ಡಿ.16: ಸೆಂಗರ್‌ ಅಪರಾಧಿ ಎಂದು ದೆಹಲಿ ನ್ಯಾಯಾಲಯದ ತೀರ್ಪು. ಸಹ ಆರೋಪಿ ಶಶಿ ಸಿಂಗ್‌ ಖುಲಾಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT