ಮೀಸಲು: ವಿಪಕ್ಷಗಳಲ್ಲಿ ಒಡಕು

7
ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಮೀಸಲು: ವಿಪಕ್ಷಗಳಲ್ಲಿ ಒಡಕು

Published:
Updated:

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. 

ಚಳಿಗಾಲ ಅಧಿವೇಶನದ ಕೊನೆಯ ದಿನ ಲೋಕಸಭೆಯಲ್ಲಿ ಮಸೂದೆ ಮೇಲೆ ಕಾವೇರಿದ ಚರ್ಚೆ ನಡೆಯಿತು. ಬಿಜೆಪಿ ವಿರುದ್ಧ ಒಂದಾಗಿದ್ದ ವಿರೋಧ ಪಕ್ಷಗಳು ಮಸೂದೆ ಪರ ಮತ್ತು ವಿರೋಧಿ ಬಣಗಳಾಗಿ ಹಂಚಿ ಹೋಗಿರುವ ವಿದ್ಯಮಾನ ನಡೆದಿದೆ.

ಮಸೂದೆ ಮತ್ತು ಸರ್ಕಾರದ ನಡೆಯ ಬಗ್ಗೆ ಆಕ್ಷೇಪ ಹೊಂದಿದ್ದರೂ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಬಿಎಸ್‌ಪಿ, ಜೆಡಿಎಸ್‌ ಮಸೂದೆ ಬೆಂಬಲಕ್ಕೆ ನಿಂತಿವೆ.

ಡಿಎಂಕೆ, ಆರ್‌ಜೆಡಿ, ನ್ಯಾಷನಲ್‌ ಕಾನ್ಫರೆನ್ಸ್‌, ಸಿಪಿಐ, ಎಎಪಿ ಮಸೂದೆ ವಿರುದ್ಧ ಧ್ವನಿ ಎತ್ತಿವೆ. ಆಕ್ಷೇಪದ ಹೊರತಾಗಿಯೂ ಮಸೂದೆಯನ್ನು ಸ್ವಾಗತಿಸುವುದಾಗಿ ಶಿವಸೇನಾ ಹೇಳಿದೆ.

ಜೆಡಿಯು, ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತು ಆರ್‌ಪಿಐ ಮತ್ತು ಎಐಎಡಿಎಂಕೆ ಬೆಂಬಲ ನೀಡಿವೆ.

ಸಮಾಜವಾದಿ ಪಕ್ಷದ ಸಂಸದರ ತೀವ್ರ ವಿರೋಧದ ನಡುವೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ ಗೆಹ್ಲೋಟ್‌ ‘ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019’ ಮಂಡಿಸಿದರು. 

ಬದಲಾದ ನಿಲುವು: ಮಸೂದೆ ಬೆಂಬಲಿಸುವುದಾಗಿ ಹೇಳಿದ್ದ ಕಾಂಗ್ರೆಸ್‌ ನಿಲುವು ಬದಲಿಸಿತು. ಮಸೂದೆಯನ್ನು ಸಂಸದೀಯ ಸ್ಥಾಯಿಸಮಿತಿಗೆ ಒಪ್ಪಿಸು ವಂತೆ ಒತ್ತಾಯಿಸಿತು. ಸುಪ್ರೀಂ ಕೋರ್ಟ್ ಆದೇಶ ಜಾತಿ ಆಧರಿತ ಮೀಸಲಾತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಚಿವ ಅರುಣ್‌ ಜೇಟ್ಲಿ ವಾದಿಸಿದರು.

****

ಎನ್‌ಡಿಎದಲ್ಲೂ ಅಪಸ್ವರ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮಿತ್ರ ಪಕ್ಷಗಳಾದ ಸುಹೇಲ್‌ದೇವ್‌ ಭಾರತೀಯ ಸಮಾಜಪಕ್ಷ (ಎಸ್‌ಬಿಎಸ್‌ಪಿ) ಮತ್ತು ಅಪ್ನಾ ದಳ (ಸೋನೆಲಾಲ್‌) ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿವೆ.

ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ಸಾಮಾಜಿಕ ನ್ಯಾಯ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಎಸ್‌ಬಿಎಸ್‌ಪಿಯು ಬಿಜೆಪಿಗೆ 100 ದಿನಗಳ ಗಡುವು ನೀಡಿದೆ.

ಇಲ್ಲದಿದ್ದರೆ ಬಿಜೆಪಿ ಮೈತ್ರಿ ಕಡಿದುಕೊಂಡು ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಬಹಾರ್‌ ಎಚ್ಚರಿಕೆ ನೀಡಿದ್ದಾರೆ.

*****

ನಾವು ಯಾವಾಗಲೂ ಸೌಲಭ್ಯವಂಚಿತ ಮತ್ತು ಹಿಂದುಳಿದ ವರ್ಗಗಳ ಪರ ನಿಂತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದು ಸ್ವಾಗತಾರ್ಹ

-ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ಇದು ಸಂವಿಧಾನ ವಿರೋಧಿ ಮತ್ತು ರಾಜಕೀಯ ಪ್ರೇರಿತ ನಿರ್ಧಾರ. ಇದಕ್ಕೆ ಕಾನೂನು ಮಾನ್ಯತೆ ದೊರೆಯುವುದು ಕಷ್ಟ. ಸರ್ಕಾರವು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಜತೆ ವಿಧ್ವಂಸಕಾರಿ ಆಟವಾಡುತ್ತಿದೆ.

-ಎಂ.ಕೆ. ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ

ಆರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಮರಿಗೆ ಶೇ 12ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 10ರಷ್ಟು ಮೀಸಲಾತಿ ನೀಡಬೇಕು.

-ಕೆ. ಚಂದ್ರಶೇಖರ್‌ ರಾವ್‌, ತೆಲಂಗಾಣ ಮುಖ್ಯಮಂತ್ರಿ

ಈ ಮಸೂದೆ ಹಿಂದೆ ಚುನಾವಣೆಯಲ್ಲಿ ಲಾಭ ಗಳಿಸುವ ಮತ್ತು ಜಾತಿ ಧ್ರುವೀಕರಣದ ಉದ್ದೇಶವಿದೆ. ಐದು ವರ್ಷ ಸುಮ್ಮನಿದ್ದ ಸರ್ಕಾರಕ್ಕೆ ಈಗ ಎಚ್ಚರವಾಗಿದೆ.
-ಸೀತಾರಾಂ ಯೆಚೂರಿ, ಸಿಪಿಎಂ

ಇದು ಚುನಾವಣಾ ತಂತ್ರ ಮತ್ತು ರಾಜಕೀಯ ಗಿಮಿಕ್‌. ಇದೊಂದು ಅಪ್ರಬುದ್ಧ ಮತ್ತು ವಿವೇಚನಾರಹಿತ ನಿರ್ಧಾರ. ಆದರೂ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ.

-ಮಾಯಾವತಿ, ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ

 

 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !