ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಲ್ಲಿ ಅಧ್ಯಯನ: ವೃತ್ತಿಗೆ ನೆರವು’

ಅಮೆರಿಕದ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರಿ ಶೃಂಗ್ಲಾ ಕರೆ
Last Updated 29 ಮೇ 2019, 19:09 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುವ, ಗುಣಮಟ್ಟದ ಕೋರ್ಸ್‌ ಹಾಗೂ ಪದವಿಗಳನ್ನು ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ಆದ್ದರಿಂದ ಅಮೆರಿಕದ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಬೇಕು’ ಎಂದುಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿರುವ ಹರ್ಷವರ್ಧನ್ ಶೃಂಗ್ಲಾ ಕರೆ ನೀಡಿದ್ದಾರೆ.

‘ಭಾರತದ ಸಮಗ್ರ ಆರ್ಥಿಕ ಸ್ಥಿರತೆ ಕಳೆದ 5 ವರ್ಷಗಳಲ್ಲಿ ಉತ್ತಮ ಪ್ರಗತಿ ಕಂಡಿದೆ. ಈ ವರ್ಷದ ಅಂತ್ಯಕ್ಕೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲು ಸಿದ್ಧವಾಗಿದೆ. ಹಾಗಾಗಿ ನೀವು ಭಾರತದಲ್ಲಿ ಅಧ್ಯಯನ ಮಾಡುವುದರಿಂದ, ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತ್ವರಿತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ಭಾಗವಾಗುತ್ತೀರಿ’ ಎಂದು ಅವರು ತಿಳಿಸಿದ್ದಾರೆ.

ಅಸೋಸಿಯೇಷನ್ ಆಫ್ ಇಂಟರ್‌ನ್ಯಾಷನಲ್ ಎಜುಕೇಟರ್ಸ್‌ನ 71ನೇ ವಾರ್ಷಿಕ ಸಮಾವೇಶ ಮತ್ತು ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.‘ಇಲ್ಲಿ ಅಧ್ಯಯನ ಮಾಡುವುದರಿಂದ ಸರ್ಕಾರದ ವ್ಯವಸ್ಥೆಗಳು, ದೇಶದ ಸಂಸ್ಕೃತಿ ಹಾಗೂ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಅರಿಯಲು ಸಾಧ್ಯ. ಭಾರತದ ವಿಶಿಷ್ಟ ದೃಷ್ಟಿಕೋನಗಳನ್ನು ತಿಳಿಯಲು ಅಂತರರಾಷ್ಟ್ರೀಯ
ವಿದ್ಯಾರ್ಥಿಗಳಿಗೆ ಅವಕಾಶ ದೊರಕುತ್ತದೆ. ಉದ್ಯಮ, ಸರ್ಕಾರಿ ಉದ್ಯೋಗ ಅಥವಾ ಎನ್‌ಜಿಒ ಸೇರಿದಂತೆ ವೃತ್ತಿಜೀವನಕ್ಕೆ ಇದು ಉಪಯುಕ್ತವಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ವಿಶ್ವವಿದ್ಯಾಲಯ ಹಂತದಲ್ಲಿ ಶಿಕ್ಷಣದ ಗುಣಮಟ್ಟ ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ಕೇಂದ್ರ ಧನಸಹಾಯ ಆಯೋಗ (ಯುಜಿಸಿ) ಕಾರ್ಯನಿರ್ವಹಿಸುತ್ತಿದೆ.ವಿದ್ಯಾರ್ಥಿಗಳು ವಂಚನೆಗೆ ಗುರಿಯಾಗದಂತೆ ನೋಡಿಕೊಳ್ಳುವ ಸಲುವಾಗಿ,ನಕಲಿ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯನ್ನುಯುಜಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ‍’ ಎಂದು ಹೇಳಿದ್ದಾರೆ.

‘ಭಾರತದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಮೂರನೇ ಅತಿದೊಡ್ಡ ಸ್ಥಾನದಲ್ಲಿದೆ. ಇಲ್ಲಿ ಪದವಿ ಹಾಗೂ ಕೋರ್ಸ್‌ಗಳ ಶುಲ್ಕ ಸಹ ಕಡಿಮೆ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

‘ಮೋದಿ ಜತೆ ನಿಕಟ ಕಾರ್ಯನಿರ್ವಹಣೆ’

ಅಮೆರಿಕಕ್ಕೆ ಭಾರತ ‘ಶ್ರೇಷ್ಠ ಮಿತ್ರ ಹಾಗೂ ಸಹಭಾಗಿ’ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟ್ರಂಪ್ ಆಡಳಿತ ನಿಕಟವಾಗಿಕಾರ್ಯನಿರ್ವಹಿಸುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರೆ ಮಾರ್ಗನ್ ಓರ್ಟಗಸ್ ತಿಳಿಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ಜತೆಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲು ಎದುರು ನೋಡುತ್ತಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

ಪಾಂಪಿಯೊ ಅವರು ಮುಂದಿನ ತಿಂಗಳು ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲುಒಸಾಕಗೆ ತೆರಳುವವೇಳೆ ದೆಹಲಿಗೆಭೇಟಿ ನೀಡಬಹುದು ಎನ್ನುವ ವರದಿ ನಡುವೆಯೇ ಓರ್ಟಗಸ್ ಈ ಮಾಹಿತಿ ನೀಡಿದ್ದಾರೆ.

‘ಚುನಾವಣೆಯ ಪಾರದರ್ಶಕತೆ ಹಾಗೂ ಸಮಗ್ರತೆಕುರಿತು ನಮಗೆ ವಿಶ್ವಾಸವಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT